ಬೆಂಗಳೂರು: ಪುರಾಣಗಳು ಮಾನವ ಕಲ್ಪನೆಯೇ ಹೊರತು ಸತ್ಯವಲ್ಲ. ಆದರೆ ಇಂದು ಕಲ್ಪಿತ ಪುರಾಣದ ಹಸಿ ಸುಳ್ಳುಗಳನ್ನೇ ಸತ್ಯವೆಂದು ನಂಬಿಸಿ ಅದರ ಆಧಾರದ ಮೇಲೆಯೇ ಎಲ್ಲವನ್ನು ತೀರ್ಮಾನಿಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಭಾನುವಾರ ನಡೆದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೀದಿ ನಾಟಕಗಳನ್ನು ಸಮಾಜದ ವಿವಿಧ ವಲಯಗಳ ವಾಸ್ತವಿಕ ಸ್ಥಿತಿಗತಿಗಳನ್ನೇ ಪ್ರಮುಖ ಆಶಯವಾಗಿಸಿಕೊಂಡು ಮಾಡಲಾಗುತ್ತದೆ.
ಇದರಿಂದಾಗಿ ಜನರಿಗೆ ತಮ್ಮ ಸರಿ ತಪ್ಪುಗಳು ಅರಿವಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತಿದೆ. ಅಂತಹ ಸಮಾಜ ಪರಿವರ್ತನಾ ಆಶಯಗಳನ್ನು ಒಳಗೊಂಡಿರುವ ರಂಗಭೂಮಿ ಆಧಾರಿತ ಕೃತಿಗಳು ಸಮೃದ್ಧಿಯಾಗಿ ರಚನೆಯಾಗಬೇಕು ಎಂದು ಹೇಳಿದರು.
ಜತೆಗೆ ಜಾತಿ, ಧರ್ಮ,ಭಾಷೆಯ ಹೆಸರಿನಲ್ಲಿ ಒಕ್ಕೂಟ ವ್ಯವಸ್ಥೆಗೆ ದಕ್ಕೆ ತಂದು ಅಹಿತಕರ ಘಟನೆಗಳು ಸಂಭವಿಸುತ್ತಿವೆ. ಇಂದು ಮಾನವೀಯ ಆಲೋಚನೆಗಳತ್ತ ಲೇಖಕರು ಧ್ವನಿಗೂಡಿಸುವುದು ಅನಿವಾರ್ಯವಾಗಿದೆ.
ಈ ಆ ನಿಟ್ಟಿನಲ್ಲಿ ಎಸ್.ಮಂಜುನಾಥ್ ಅವರ “ಏಳು ತಂತಿ ಏಕನಾದ ‘ ಕೃತಿ ಒಂದು ಕಾಲಘಟ್ಟ ಚರಿತ್ರೆಯನ್ನು ಕಟ್ಟಿಕೊಡುವ ಕಲಾತ್ಮಕ ಬೀದಿನಾಟಕಗಳ ಸಂಕಲನವಾಗಿದ್ದು, ಬಹುತ್ವವು ಯಾವ ಯಾವ ಆಯಾಮಗಳಲ್ಲಿ ಸಮಾಜವನ್ನು ಹಾಳುಮಾಡುತ್ತಿದೆ ಎಂಬುದನ್ನು “ಏಳು ತಂತಿ ಏಕನಾದ ‘ಕೃತಿಯಲ್ಲಿ ರಸವತ್ತಾಗಿ ವಿವರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ರಾಜಶೇಖರ್ ಮಠಪತಿ ಅವರ “ರಕ್ತ ಮತ್ತು ರಾಜಕಾರಣ’, ಕೆ.ಎ. ರಾಮಕೃಷ್ಣ ಮೂರ್ತಿ ಅವರ “ಬಂಧು ಮಿತ್ರರು’ ಹಾಗೂ ಎಸ್.ಮಂಜುನಾಥ್ ಅವರ “ಏಳು ತಂತಿ ಏಕನಾದ ‘ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಸಾಪ ನಗರ ಜಿಲ್ಲಾಧ್ಯಕ್ಷ ಮಾಯಣ್ಣ, ಡಾ.ಲಿಂಗಮಾರಯ್ಯ, ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜು, ಹಿರಿಯ ರಂಗಕರ್ಮಿ ಶಶಿಧರ್ ಭಾರಿಘಾಟ್ ಉಪಸ್ಥಿತರಿದ್ದರು.