Advertisement
ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಒಳಗೆ ಏನಾಗುತ್ತಿದೆ ಎಂಬುದನ್ನು ಜನ ಸಾಮಾನ್ಯರಿಗೆ ಅದರಲ್ಲೂ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವುದಕ್ಕಾಗಿ ಪ್ರತಿ ವರ್ಷ ಮುಕ್ತ ದಿನ( ಓಪನ್ ಡೇ)ಆಚರಿಸಲಾಗುತ್ತದೆ. ಶನಿವಾರ ಹಮ್ಮಿಕೊಂಡಿದ್ದ ಮುಕ್ತ ದಿನದಲ್ಲಿ ಐಐಎಸ್ಸಿಯ 40 ವಿಭಾಗದಿಂದ ವಿಜ್ಞಾನದ ಹಲವು ಪ್ರಯೋಗ, ವಿಸ್ಮಯಗಳ ಜತೆಗೆ ವಸ್ತು ಪ್ರದರ್ಶಗಳನ್ನು ಸಾಮಾನ್ಯ ಜನರಿಗೆ ಮುಕ್ತವಾಗಿ ತೆರೆದಿಟ್ಟಿದ್ದರು.
Related Articles
Advertisement
ರಾಕೆಟ್ ಉಡಾವಣೆ, ಅದರ ವೇಗ, ಸಿದ್ಧಪಡಿಸುವ ವಿಧಾನ, ಉಡಾವಣೆ ಸಂದರ್ಭ ಮಾಹಿತಿ ಒಳಗೊಂಡಿರುವ ಸೂಪರ್ ಸೋನಿಕ್ ಜೆಟ್ ಪ್ರಾತ್ಯಕ್ಷಿಕೆ, ನ್ಯಾನೋ ಸೈನ್ಸ್ ಮತ್ತು ಎಂಜಿನಿಯರಿಂಗ್, ಅಟೊಸ್ಪೇರ್ ಮತ್ತು ಓಷನ್ ಸೈನ್ಸ್, ಬಯೊ ಸಿಸ್ಟಮ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಕ್ರಯೊಜಿನ್‌ಟೆಕ್ನಾಲಜಿ, ಬಯೊ ಕೆಮೆಸ್ಟ್ರಿ, ಮೂಲ ಸೌಕರ್ಯ ವಿವಿಧ ಅಭಿಯಂತರರು ಸೇರಿ ಐಐಎಸ್‌ಸಿಯ ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಿಂದ ವಿಜ್ಞಾನದ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆಯಿತು.
ಬೌದ್ಧಿಕ ಮಂಥನ: ವಿಜ್ಞಾನ ಪ್ರದರ್ಶನದ ಜತೆಗೆ ವಿಜ್ಞಾನಿಗಳು, ತಜ್ಞರು, ಗಣ್ಯರ ಮೂಲಕ ಹಲವು ವಿಷಯಗಳ ಚರ್ಚೆ, ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಉದ್ದೇಶದಿಂದ ಐಐಎಸ್‌ಸಿ ವಿಭಾಗವಾರು ಕ್ವಿಜ್ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಡಿಕ್‌ಜೋನ್ ವ್ಯವಸ್ಥೆ ಮಾಡಲಾಗಿತ್ತು.
ಹರಿದು ಬಂದ ಜನ ಸಾಗರ: ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಮಕ್ಕಳು, ಮಹಿಳೆಯರು, ಪುರುಷರು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ವಿಜ್ಞಾನದ ವಿಸ್ಮಯಕಂಡು ಬೆರಗಾದರು. ಶಾಲೆಗಳಿಂದ ಗುಂಪುಗುಂಪಾಗಿ ವಿದ್ಯಾರ್ಥಿಗಳು ಶಿಕ್ಷಕರು ಬಂದಿದ್ದರು. ಶಿಕ್ಷಣ, ವಿಜ್ಞಾನಕ್ಕೆ ಸಂಬಂಧಿಸಿದ 300ಕ್ಕೂ ಹೆಚ್ಚಿನ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದರು. ಸಾರ್ವಜನಿಕರ ಅನುಕೂಲಕ್ಕಾಗಿ 15 ಸಹಾಯ ಕೇಂದ್ರ ಸ್ಥಾಪಿಸಲಾಗಿತ್ತು.
ಸೆಲ್ಫಿ…: ಕ್ಯಾಂಪಸ್‌ನಲ್ಲಿರುವ ಕ್ಯಾಂಟೀನ್ ಜತೆಗೆ ಐದಾರು ಕಡೆಗಳಲ್ಲಿ ಓಪನ್ ಡೇಗೆ ಬಂದವರಿಗಾಗಿ ಫುಡ್‌ಕೋರ್ಟ್ ತೆಗೆಯಲಾಗಿತ್ತು. ಒಂದೊಂದೆ ವಿಭಾಗದ ವಿಜ್ಞಾನದ ಹೊಸ ಆವಿಷ್ಕಾರ, ವಿಸ್ಮಯಗಳನ್ನು ನೋಡಿ ಬಂದವರು ಐಐಎಸ್ಸಿ ಕೇಂದ್ರ ಕಟ್ಟಡದ ಮುಂಭಾಗ ಹಾಗೂ ಹಿಂಭಾಗದಲ್ಲಿರುವ ಹುಲ್ಲುಹಾಸಿನಲ್ಲಿ ವಿಶ್ರಾಂತ ಪಡೆಯುತ್ತಾ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.