Advertisement

ಡೆವಿಲ್‌ ಸೀ ಎಂಬ ನಿಗೂಢ ರಹಸ್ಯ! ಈ ಪ್ರದೇಶ ದೆವ್ವಗಳಿಗೆ ಸೇರಿದ್ದು!

07:50 AM Aug 10, 2017 | Harsha Rao |

ತನ್ನ ವ್ಯಾಪ್ತಿಯೊಳಗೆ ಹಾದುಹೋಗುವ ಹಡಗು, ಯುದ್ಧನೌಕೆ, ವಿಮಾನಗಳನ್ನು ತನ್ನೊಳಕ್ಕೆ ಎಳೆದುಕೊಳ್ಳುವ, ಅಲ್ಲವೇ ನಾಪತ್ತೆ ಮಾಡಿಬಿಡುವ ಸಮುದ್ರದ ಮೇಲಿನ ಬರ್ಮುಡಾ ಟ್ರಯಾಂಗಲ್‌ ಬಗ್ಗೆ ನೀವೆಲ್ಲರೂ ಕೇಳಿಯೇ ಇರುತ್ತೀರಾ. ಅದೇ ಥರದ ಕುಖ್ಯಾತಿಗೆ ಪಾತ್ರವಾಗಿರುವ ಇನ್ನೊಂದು ಜಾಗ ಭೂಮಿ ಮೇಲೆ ಇರುವುದು ನಿಮಗೆ ಗೊತ್ತಾ? ಅದರ ಹೆಸರು “ಡೆವಿಲ್‌ ಸೀ’ ಅಥವಾ “ಡ್ರಾಗನ್‌ ಟ್ರಯಾಂಗಲ್‌’.

Advertisement

ಇರೋದೆಲ್ಲಿ?
ಪೆಸಿಫಿಕ್‌ ಸಮುದ್ರದಲ್ಲಿ ಜಪಾನಿನ ಮಿಯಾಕೆ ದ್ವೀಪಗಳನ್ನು ಸುತ್ತುವರಿದಿರುವ ಸಮುದ್ರ ಪ್ರದೇಶವನ್ನೇ “ಡೆವಿಲ್‌ ಸೀ’ ಎನ್ನುತ್ತಾರೆ. ಇದು ಜಪಾನಿನ ರಾಜಧಾನಿ ಟೋಕಿಯೋದಿಂದ ದಕ್ಷಿಣಕ್ಕೆ 100 ಕಿಲೋಮೀಟರ್‌ ದೂರದಲ್ಲಿದೆ. ಜಪಾನಿನ ಸಂಸ್ಕೃತಿಯಲ್ಲಿ ಡ್ರಾಗನ್‌ಗಳಿಗೆ ವಿಶೇಷ ಸ್ಥಾನ. ಅವರು ಒಂದೊಮ್ಮೆ ಡ್ರಾಗನ್‌ಗಳು ಭೂಮಿ ಮೇಲಿದ್ದವು ಎಂದು ನಂಬುತ್ತಾರೆ. ಅದರಲ್ಲೂ ಜಪಾನಿನ  ಸಮುದ್ರತೀರಗಳಲ್ಲಿ ಡ್ರ್ಯಾಗನ್‌ಗಳು ಬದುಕಿದ್ದವು ಎಂಬ ಕಥೆಗಳು ಅಲ್ಲಿನ ಪುರಾಣದಲ್ಲಿ ಜನಜನಿತವಾಗಿರುವುದರಿಂದಲೇ “ಡೆವಿಲ್‌ ಸೀ’ಯನ್ನು “ಡ್ರ್ಯಾಗನ್‌ ಟ್ರಯಾಂಗಲ್‌’ ಎಂದೂ ಕರೆಯುತ್ತಾರೆ.

ಇದನ್ನು ಕಂಡರೆ ಭಯ ಯಾಕೆ?
ಈ ಪ್ರದೇಶಕ್ಕೆ “ಡೆವಿಲ್‌ ಸೀ’ ಎಂಬ ಹೆಸರು ಬಂದಿದ್ದು ಸುಮ್ಮನೆಯೇ ಅಲ್ಲ. ಇದರ ಮೇಲೆ ಹಾರುವ ವಿಮಾನ, ಹಡಗುಗಳ ಪಾಲಿಗೆ ಈ ಸಮುದ್ರ ನಿಜಕ್ಕೂ ದೆವ್ವವೇ! ಬರ್ಮುಡಾ ಟ್ರಯಾಂಗಲ್‌ನಂತೆಯೇ ಈ ಪ್ರದೇಶದಲ್ಲೂ ಲೆಕ್ಕಕ್ಕೆ ಸಿಗದಷ್ಟು ವಿಮಾನಗಳು ಮತ್ತು ಹಡಗುಗಳು ನಿಗೂಢವಾಗಿ ನಾಪತ್ತೆಯಾಗಿವೆ. ಯಾಕೆ, ಹೇಗೆ ಕಳೆದುಹೋದರು ಎಂಬುದಕ್ಕೆ ಇಲ್ಲೀವರೆಗೆ ಒಂದೇ ಒಂದು ಸುಳಿವು ಕೂಡ ಸಿಕ್ಕಿಲ್ಲ. 

ರಹಸ್ಯ ಪತ್ತೆಗೆ ತೆರಳಿದ ತನಿಖಾ ನೌಕೆಗೇನಾಯ್ತು?
ಜಗತ್ತಿನಾದ್ಯಂತ ಈ “ಡೆವಿಲ್‌ ಸೀ’ ಬಗ್ಗೆ ರೋಚಕ ಕಥೆಗಳು ಚಾಲ್ತಿಯಲ್ಲಿವೆ. ಡೆವಿಲ್‌ ಸೀಗೆ “ಪೆಸಿಫಿಕ್‌ ಬರ್ಮುಡಾ ಟ್ರಯಾಂಗಲ್‌’ ಎಂದು ಹೆಸರು ಬಂತು. (ಬರ್ಮುಡಾ ಟ್ರಯಾಂಗಲ್‌ ಇರುವುದು ಅಟ್ಲಾಂಟಿಕ್‌ ಮಹಾಸಾಗರದಲ್ಲಿ) 1952ರಲ್ಲಿ ಜಪಾನ್‌ ಸರಕಾರ ಈ ರಹಸ್ಯ ಭೇದಿಸಲು ತನಿಖಾ ತಂಡವೊಂದನ್ನು ಹಡಗಿನಲ್ಲಿ ಡೆವಿಲ್‌ ಸೀಗೆ ಕಳುಹಿಸಿತು. ಹಡಗುಗಳು, ವಿಮಾನಗಳು ಕಾಣೆಯಾಗುತ್ತಿರಲು ಕಾರಣವೇನೆಂದು ತಿಳಿಯುವುದು ತಂಡದ ಉದ್ದೇಶವಾಗಿತ್ತು. ಆದರೆ ದುರಂತವೆಂದರೆ 31 ಜನರಿದ್ದ ಆ ತಂಡ ಹಡಗಿನೊಂದಿಗೆ ಮತ್ತೆಂದೂ ಕಾಣಿಸದಂತೆ ಕಣ್ಮರೆಯಾಗಿ ಹೋಯಿತು. ಇದು ಜನರಲ್ಲಿ ಭಯವನ್ನು ಹಚ್ಚಿಸಿತು.

ಇತಿಹಾಸದಲ್ಲೂ ಇದೆ ವರ್ಣನೆ
ಡೆವಿಲ್‌ ಸೀ ಬಗ್ಗೆ ಪುರಾತನ ಕಾಲದಲ್ಲೂ ಅನೇಕ ದಂತಕಥೆಗಳಿದ್ದವು. ಕ್ರಿ.ಶ. 1281ರಲ್ಲಿ ಮಂಗೋಲಿಯನ್‌ ದೊರೆ ಕುಬ್ಲಾಯ್‌ ಖಾನ್‌ ಜಪಾನಿನ ಮೇಲೆ ದಂಡೆತ್ತಿ ಬರಲು ಪ್ರಯತ್ನಿಸಿದ್ದನಂತೆ. ಡೆವಿಲ್‌ ಸೀ ಮೂಲಕ ತನ್ನ ಸೇನೆಯನ್ನು ಜಪಾನಿನೊಳಗೆ ನುಗ್ಗಿಸುವ ಪ್ರಯತ್ನದಲ್ಲಿ ಸಮುದ್ರದ ಮೇಲೆ 40,000 ಸೈನಿಕರು ಸತ್ತು ಹೋದರು. ಸೈನಿಕರ ಸಾವಿಗೆ “ಡೆವಿಲ್‌ ಸೀ’ಯೇ  ಕಾರಣ ಎನ್ನುತ್ತಾರೆ ಇತಿಹಾಸ ತಜ್ಞರು.  

Advertisement

ಕಾರಣ
ಇಲ್ಲೀವರೆಗೆ ಯಾರಿಗೂ ಗೊತ್ತಾಗಿಲ್ಲ. ಎಲ್ಲಾ ಬರೀ ಊಹಾಪೋಹಗಳಷ್ಟೇ ಇರೋದು. ಒಬ್ಬೊಬ್ಬರದು ಒಂದೊಂದು ಥರದ ವಾದ! ಡೆವಿಲ್‌ ಸೀನಲ್ಲಿ ಹಡಗುಗಳು, ವಿಮಾನಗಳು ನಿಗೂಢವಾಗಿ ಕಣ್ಮರೆಯಾಗುವಲ್ಲಿ ಅನ್ಯಗ್ರಹ ಜೀವಿಗಳ ಕೈವಾಡವಿದೆ, ಅವು ಈ ಪ್ರದೇಶದಲ್ಲೇ ನೆಲೆ ಕಂಡಿವೆ ಎಂದೂ ಕೆಲವರು ಹೇಳುತ್ತಾರೆ. ಇನ್ನು ಕೆಲವರು “ಅದ್ಯಾವುದೂ ನಿಜವಲ್ಲ, ಇಲ್ಲಿ ಹೆಚ್ಚಾಗಿರುವ ಜ್ವಾಲಾಮುಖೀಗಳು ಜೀವಂತವಾಗಿರುವುರಿಂದ, ಹತ್ತಿರದ ಅನೇಕ ದ್ವೀಪಗಳು ರಾತ್ರೋರಾತ್ರಿ ಮುಳುಗಡೆಯಾಗುತ್ತವೆ, ಎಷ್ಟೋ ಹೊಸ ದ್ವೀಪಗಳು ಸೃಷ್ಟಿಯಾಗುತ್ತಿರುತ್ತವೆ. ಹೀಗಾಗಿ ಇವೆಲ್ಲಾ ರಹಸ್ಯಗಳಿಗೆ ಅಲ್ಲಿನ ಭೌಗೋಳಿಕ ಪರಿಸರವೇ ಕಾರಣವಿರಬಹುದು’ ಎಂದೂ ಕೂಡಾ ಕೆಲ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. 

– ಪ್ರಿಯಾಂಕಾ ನಟಶೇಖರ್‌, ಹೊಸನಗರ

Advertisement

Udayavani is now on Telegram. Click here to join our channel and stay updated with the latest news.

Next