ಕಳೆದ ಕೆಲವು ದಿನಗಳಿಂದ ಜಗದ ವಿವಿಧೆಡೆ ಏಕಶಿಲೆ ಸ್ತಂಭಗಳು ದಿಢೀರಾಗಿ ಕಾಣಿಸಿಕೊಂಡವು ಎಂಬ ಸುದ್ದಿಯನ್ನು ನೀವು ಓದಿರಬಹುದು. ಇವು ಎಲ್ಲಿಂದ ಬಂದವು, ಯಾಕೆ ಬಂದವು ಎನ್ನುವುದು ದೊಡ್ಡ ಚರ್ಚೆಗೆ ಕಾರಣವಾಯಿತು. ಏನಿದು? ಅನ್ಯಗ್ರಹಜೀವಿಗಳ ತರಲೆಯೇ? ಕಲಾವಿದರ ಕೈಚಳಕವೇ? ಯಾರಿಗೂ ತಿಳಿದಿಲ್ಲ… ಉತ್ತರ ಹುಡುಕುವ ಪ್ರಯತ್ನ ಸಾಗಿದೆ.
ಉಟಾಹ್: ನಿಗೂಢ ಶಿಲಾಸ್ತಂಭಗಳ ವದಂತಿ ಪರ್ವ ಆರಂಭವಾದದ್ದು ಪಶ್ಚಿಮ ಅಮೆರಿಕದ ಈ ರಾಜ್ಯದಿಂದಲೇ. ಆ ರಾಜ್ಯದ ಮರುಭೂಮಿಯಲ್ಲಿ ಕಂಡುಬಂದ ಲೋಹದ ಶಿಲಾಸ್ತಂಭದ ಚಿತ್ರ ವೈರಲ್ ಆಗಿಬಿಟ್ಟಿತು. ಗಮನಾರ್ಹ ಸಂಗತಿಯೆಂದರೆ, ಕೆಲವೇ ದಿನಗಳಲ್ಲಿ ಇದು ಆ ಸ್ಥಳದಿಂದ ಒಂದಿಷ್ಟೂ ಕುರುಹಿಲ್ಲದಂತೆ ಮಾಯವಾಗಿದ್ದು. ಪೊಲೀಸರ ಪ್ರಕಾರ, ಅಮೆರಿಕದಲ್ಲಿ ಮೊದಲಿಂದಲೂ ಲೋಹದ ಸ್ತಂಭಗಳ ಕುರಿತು ಕಟ್ಟುಕಥೆಗಳು ಅಧಿಕವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಯಾರೋ ಅದನ್ನು ಅಲ್ಲಿ ಸ್ಥಾಪಿಸಿರಬಹುದಂತೆ.
ನೆದರ್‌ಲ್ಯಾಂಡ್ಸ್ : ಇದಾದ ಕೆಲವೇ ದಿನಗಳಲ್ಲಿ ಕೀಕನ್‌ಬರ್ಗ್ ಸಂರಕ್ಷಿತ ಪ್ರದೇಶದ ಕುರುಚಲು ಭೂಮಿಯಲ್ಲಿಯೂ ನಿಗೂಢ ಲೋಹದ ಶಿಲಾಸ್ತಂಭವೊಂದು ಕಾಣಿಸಿಕೊಂಡಿತ್ತು. “ನಾನು ಹೈಕಿಂಗ್ ಮಾಡುತ್ತಿದ್ದ ಸಮಯದಲ್ಲಿ ಇದು ಕಣ್ಣಿಗೆ ಬಿತ್ತು ಹತ್ತಿರ ಹೋಗಿ ನೋಡಿದರೆ, ಅದನ್ನು ಯಾರೋ ತಂದು ಅಲ್ಲಿ ಸ್ಥಾಪಿಸಿದ್ದಾರೆ ಎಂಬ ಒಂದು ಕುರುಹೂ ಸಿಗಲಿಲ್ಲ. ಯಾರೋ ಮೇಲಿಂದಲೇ ತಂದು ನೆಟ್ಟಿದ್ದಾರೆ ಎಂಬಂತೆ ಅದು ಇತ್ತು’ ಎನ್ನುತ್ತಾರೆ ಇದನ್ನು ಮೊದಲು ಗಮನಿಸಿದ ಡಾಂಗ್ ಎನ್ನುವ ಚಾರಣಿಗ. ಈಗ ಈ ಶಿಲಾಸ್ತಂಭದ ಜತೆ ಸೆಲ್ಫಿ ತೆಗೆಸಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರಂತೆ!
ರೊಮೇನಿಯಾ: ರೊಮೇನಿಯಾದ ಬೆಟ್ಟವೊಂದರ ಮೇಲೂ ಲೋಹದ ಶಿಲಾಸ್ತಂಭ ಕಾಣಿಸಿಕೊಂಡಿತು. ಆದರೆ ನೆದರ್‌ಲ್ಯಾಂಡ್ಸ್‌ನಲ್ಲಿ ಕಾಣಿಸಿ ಕೊಂಡದ್ದಕ್ಕಿಂತಲೂ ಇದು ಭಿನ್ನ ವಾಗಿತ್ತು. ಇದನ್ನು ಮೊದಲು ಗಮನಿಸಿದ ಇಬ್ಬರು ಚಾರಣಿಗರು, “”ಯಾವುದೋ ಹಳೆಯ ಲೋಹದ ಸ್ತಂಭವನ್ನು ಯಾರೋ ತರಲೆಗಳು ತಂದಿಟ್ಟಿದ್ದಾರೆ. ನಮ್ಮ ದೇಶದವರಿಗೆ ಸರಿಯಾಗಿ ಕಾಪಿ ಕೂಡ ಮಾಡಲು ಬರುವುದಿಲ್ಲ” ಎಂದು ನಗೆಯಾಡುತ್ತಾರೆ.
ಬ್ರಿಟನ್: ಕಾಂಪ್ಟನ್ ಬೀಚ್‌ನಲ್ಲಿ ಹಠಾತ್ತನೆ ಕಾಣಿಸಿಕೊಂಡು ಮಿರುಗುವ ಶಿಲಾಸ್ತಂಭವೂ ಜನರನ್ನು ಬಹಳ ಸೆಳೆಯಿತು. ಅನೇಕರು ಇದು ಯಾರೋ ತಮಾಷೆಗಾಗಿ ಮಾಡಿದ್ದು ಎಂದರೆ, ಉಳಿದವರು ಇದು ದೇವರ ನಿಗೂಢ ಸಂದೇಶವಿರಬೇಕು ಎಂದು ಅಚ್ಚರಿ ವ್ಯಕ್ತಪಡಿಸಿದರು. ಉಳಿದವರು, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಆರಾಮಾಗಿ ಸಾಗರದಲ್ಲಿ ಈಜಾಡುತ್ತಿದ್ದರೆಂದು ಬ್ರಿಟನ್ ಮಾಧ್ಯಮಗಳು ವರದಿ ಮಾಡಿದವು.