Advertisement

ನಿಜಕ್ಕೂ ಸೂಪರ್ ಮ್ಯಾನ್ ಇದ್ದಿದ್ದರೆ…ರಿಯಲ್ ಸೂಪರ್ ಮ್ಯಾನ್ ರೀವ್ಸ್ ನಿಗೂಢ ಸಾವು!

09:16 PM Apr 25, 2020 | Nagendra Trasi |

ಶಕ್ತಿಮಾನ್, ಸ್ಪೈಡರ್ ಮ್ಯಾನ್, ಹೀ ಮ್ಯಾನ್…ಹೀಗೆ ಅನೇಕ ಜನಪ್ರಿಯ ಧಾರವಾಹಿ, ಸಿನಿಮಾಗಳು ಇಂದಿಗೂ ಹಲವರ ಸ್ಮೃತಿಪಟಲದಲ್ಲಿ ಉಳಿದಿದೆ. ಯಾರಿಗೆ ತೊಂದರೆಯಾಗಲಿ, ಅನ್ಯಾಯವಾದರೆ, ಕಷ್ಟದಲ್ಲಿದ್ದರೆ ಇವರು ದಿಢೀರ್ ಪ್ರತ್ಯಕ್ಷವಾಗುತ್ತಿದ್ದರು. ಅತಿಮಾನುಷ ಶಕ್ತಿಯ, ಕಾಲ್ಪನಿಕ ಕಥಾಹಂದರ ತುಂಬಾ ಜನಪ್ರಿಯವಾಗಿತ್ತು. ಆಹಾ ಇಂತಹ ಕಷ್ಟ ಕಾಲದಲ್ಲಿ ನಿಜಕ್ಕೂ ಸ್ಪೈಡರ್ ಮ್ಯಾನ್, ಶಕ್ತಿಮಾನ್ ತರಹ ಸಹಾಯಕ್ಕೆ ಬರುವಂತಿದ್ದರೆ ಎಷ್ಟು ಖುಷಿಯಾಗುತ್ತಿತ್ತು ಅಲ್ಲವೇ? ಇವೆಲ್ಲಕ್ಕಿಂತ ಮೊದಲು ಅಮೆರಿಕದಲ್ಲಿ ಮೊತ್ತ ಮೊದಲಿಗೆ ಅಂದರೆ 1951ರಲ್ಲಿ ಟೆಲಿವಿಷನ್ ಸರಣಿಯಲ್ಲಿ ಪ್ರಸಾರವಾಗಿದ್ದು “ಸೂಪರ್ ಮ್ಯಾನ್” ಎಂಬ ಧಾರವಾಹಿ! ಸಾಹಸಿಗ ಸೂಪರ್ ಮ್ಯಾನ್ ಆ ಕಾಲಕ್ಕೆ ಬಹು ಖ್ಯಾತಿಪಡೆದುಕೊಂಡು ಬಿಟ್ಟಿತ್ತಂತೆ. ಅರ್ಧ ಗಂಟೆಯ ಸಿನಿಮಾ ಚಿತ್ರೀಕರಣವನ್ನು ಬಿಡುವಿಲ್ಲದೆ
ಶೆಡ್ಯೂಲ್ ನಲ್ಲಿ ಮಾಡಲಾಗುತ್ತಿತ್ತಂತೆ. ಆರು ದಿನಗಳಲ್ಲಿ ಎರಡು ಎಪಿಸೋಡ್ ಗಳನ್ನು ಚಿತ್ರೀಕರಿಸುತ್ತಿದ್ದರು. ವಿವಿಧ ಅಪಾರ್ಟ್ ಮೆಂಟ್ ಗಳಲ್ಲಿ ಒಂದೇ ದಿನ ಮೂರರಿಂದ ನಾಲ್ಕು ಎಪಿಸೋಡ್ ಗಳ ಚಿತ್ರೀಕರಣ ನಡೆಸುತ್ತಿದ್ದರಂತೆ!

Advertisement

ಸೂಪರ್ ಮ್ಯಾನ್ ಜಾರ್ಜ್ ರೀವ್ಸ್ ದುರಂತ ಬದುಕು:
ಜಾರ್ಜ್ ರೀವೆಸ್ ಅಲಿಯಾಸ್ ಜಾರ್ಜ್ ಕೀಫೆರ್ ಬ್ರೇವೆರ್. 1914ರಲ್ಲಿ ಜನಿಸಿದ್ದು. 1952ರಿಂದ 1958ರವರೆಗೆ ಸೂಪರ್ ಮ್ಯಾನ್ ಆಗಿ ಟೆಲಿವಿಷನ್ ಸರಣಿಯಲ್ಲಿ ಮಿಂಚಿದ್ದರು. ಈತ ಜನಿಸಿದ ವೇಳೆಯಲ್ಲಿಯೇ ತಂದೆ, ತಾಯಿ ಪ್ರತ್ಯೇಕವಾಗಿಬಿಟ್ಟಿದ್ದರು. ಕೊನೆಗೆ ತಾಯಿ ಹೆಲೆನ್ ಪುಟ್ಟ ಮಗು ರೀವ್ಸ್ ಜತೆ ಇಲಿನಾಯ್ಸ್ ಗೆ ಬಂದುಬಿಟ್ಟಿದ್ದರು. ಹೀಗೆ ಸ್ವಲ್ಪ ಕಾಲ ಕಳೆದ ಮೇಲೆ ಹೆಲೆನ್ ಕ್ಯಾಲಿಫೋರ್ನಿಯಾಕ್ಕೆ ಬಂದು ಸಹೋದರಿ ಜತೆ ವಾಸಿಸತೊಡಗಿದ್ದರು. ಇಲ್ಲಿ ಫ್ರಾಂಕ್ ಜೋಸೆಫ್ ಜತೆ ಹೆಲೆನ್ ವಿವಾಹವಾಗುತ್ತಾಳೆ. ರೀವ್ಸ್ ಯಾವತ್ತೂ ತನ್ನ ತಂದೆಯನ್ನೇ ಕಂಡಿರಲೇ ಇಲ್ಲ. 1927ರಲ್ಲಿ ಜೋಸೆಫ್ ಜಾರ್ಜ್ ನನ್ನೇ ದತ್ತು ಮಗನನ್ನಾಗಿ ಸ್ವೀಕರಿಸಿದ್ದ.

ಹದಿನೈದು ವರ್ಷಗಳ ಕಾಲ ಜತೆಗಿದ್ದ ಹೆಲೆನ್ ಮತ್ತು ಫ್ರಾಂಕ್ ಜೋಡಿ ಡೈವೋರ್ಸ್ ನೊಂದಿಗೆ ಬೇರೆ, ಬೇರೆಯಾಗಿದ್ದರು. ಈ ವೇಳೆ ರೀವ್ಸ್ ಸಂಬಂಧಿಕರನ್ನು ಭೇಟಿಯಾಗಲು ತೆರಳಿದ್ದ. ವಾಪಸ್ ತಾಯಿಯನ್ನು ನೋಡಲು ಬಂದಾಗ ಮಲ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವಿಷಯ ತಿಳಿಸಿದ್ದಳು. ಆದರೆ ನಿಜ ವಿಷಯ ಏನಾಗಿತ್ತೆಂದರೆ ಮಲತಂದೆ ಫ್ರಾಂಕ್ ಜೀವಂತವಾಗಿದ್ದರು ಎಂಬುದು ಹಲವು ವರ್ಷಗಳ ಕಾಲ ರೀವೆಸ್ ಗೆ ತಿಳಿದೇ ಇಲ್ಲವಾಗಿತ್ತಂತೆ! ಅಂತೂ ಹೈಸ್ಕೂಲ್ ದಿನಗಳಲ್ಲಿಯೇ ರೀವ್ಸ್ ಹಾಡುವುದು ಮತ್ತು ನಾಟಕಗಳಲ್ಲಿ ಅಭಿನಯಿಸುವ ಗೀಳು ಹತ್ತಿಸಿಕೊಂಡುಬಿಟ್ಟಿದ್ದ.

1939ರಲ್ಲಿ ಮೊತ್ತ ಮೊದಲ ಬಾರಿಗೆ Gone with the wind ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ರೀವ್ಸ್ ಸಿನಿ ಜೀವನದ ಪಯಣ ಆರಂಭಿಸಿದ್ದರು. ಇದೊಂದು ರೀವ್ಸ್ ಗೆ ಸಿಕ್ಕ ಪುಟ್ಟ ಪಾತ್ರವಾಗಿತ್ತು. ನಂತರ ಪೋಂಚೊ ಎಂಬ ನಾಟಕದಲ್ಲಿ ರೀವ್ಸ್ ಗೆ ಪ್ರಮುಖ ಪಾತ್ರ ಸಿಕ್ಕಿತ್ತು. ಇದು ರೀವ್ಸ್ ಬದುಕಿಗೆ ಯೂ ಟರ್ನ್ ಆಗಿತ್ತು. ವಾರ್ನರ್ ಬ್ರದರ್ಸ್ ನೇರವಾಗಿ ಸಿನಿಮಾದಲ್ಲಿ ನಟಿಸಲು ರೀವ್ಸ್ ಜತೆ ಒಪ್ಪಂದ ಮಾಡಿಕೊಂಡುಬಿಟ್ಟಿದ್ದರು. ಅಷ್ಟೇ ಅಲ್ಲ ಜಾರ್ಜ್ ಬೆಸ್ಸೋಲೋ ಹೆಸರು ಜಾರ್ಜ್ ರೀವ್ಸ್ ಎಂದು ವಾರ್ನರ್ ಬ್ರದರ್ಸ್ ಬದಲಿಸಿಬಿಟ್ಟಿದ್ದರು.

ಸೂಪರ್ ಮ್ಯಾನ್ ನಿಗೂಢವಾಗಿ ಹತ್ಯೆಗೀಡಾಗಿಬಿಟ್ಟಿದ್ದ!
1951ರ ಜೂನ್ ನಲ್ಲಿ ಹೊಸ ಟಿಲಿವಿಷನ್ ಧಾರವಾಹಿ ಸರಣಿ ಸೂಪರ್ ಮ್ಯಾನ್ ನಲ್ಲಿ ನಟಿಸಲು ಜಾರ್ಜ್ ರೀವ್ಸ್ ಗೆ ಆಫರ್ ಬಂದಿತ್ತು. ಆರಂಭದಲ್ಲಿ ಜಾರ್ಜ್ ಪಾತ್ರವನ್ನು ಮಾಡಲು ಒಪ್ಪಿಕೊಂಡಿರಲಿಲ್ಲವಾಗಿತ್ತಂತೆ. ಯಾಕೆಂದರೆ ಆ ಸಮಯದಲ್ಲಿ ತುಂಬಾ ಮಂದಿ ನಟರು ಇದ್ದರು. ಅಷ್ಟೇ ಅಲ್ಲ ಟೆಲಿವಿಷನ್ ಮಾಧ್ಯಮ ಅಷ್ಟೊಂದು ಮುಖ್ಯವಾದದ್ದಲ್ಲ, ಸಿನಿಮಾವೇ ಸಾಕು ಎಂದು ನಂಬಿದ್ದರಂತೆ. ಅದ್ಹೇಗೋ ಸೂಪರ್ ಮ್ಯಾನ್ ಪಾತ್ರ ಮಾಡಲು ಒಪ್ಪಿದ್ದರು. ಅಂತೂ 1951ರ ಬಿರು ಬೇಸಿಗೆಯಲ್ಲಿ 13 ವಾರಗಳ ಮೊದಲ ಸೀಸನ್ ನ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಅದೇ ವರ್ಷ ಸೂಪರ್ ಮ್ಯಾನ್ ಧಾರವಾಹಿ ಪ್ರಸಾರವಾಗಿಬಿಟ್ಟಿತ್ತು. ಇದು ರೀವ್ಸ್ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿತ್ತಂತೆ. ಸೂಪರ್ ಮ್ಯಾನ್ ಧಾರವಾಹಿಯ ಪರಿಣಾಮ ರೀವ್ಸ್ ನ್ಯಾಷನಲ್ ಸೆಲೆಬ್ರಿಟಿಯಾಗಿಬಿಟ್ಟಿದ್ದರು. 1952ರಲ್ಲಿ ಎಬಿಸಿ
ನೆಟ್ ವರ್ಕ್ ಈ ಧಾರಾವಾಹಿ ಖರೀದಿಸಲು ತುಂಬಾ ಕಷ್ಟಪಟ್ಟಿತ್ತಂತೆ.

Advertisement

ಸೂಪರ್ ಮ್ಯಾನ್ ಧಾರಾವಾಹಿ ಜನಪ್ರಿಯವಾಗುತ್ತಲೇ ಇದರಲ್ಲಿ ಪಾತ್ರನಿರ್ವಹಿಸುತ್ತಿದ್ದವರಿಗೆ ಬೇರೆ ಕೆಲಸ ಮಾಡಲು ಕರಾರು ಮಾಡಿಕೊಳ್ಳಬಾರದು ಎಂದು ಸಂಸ್ಥೆ ನಿರ್ಬಂಧ ವಿಧಿಸಿತ್ತಂತೆ. ಸೂಪರ್ ಮ್ಯಾನ್ ಪಾತ್ರ ನಿರ್ವಹಿಸಿದ್ದ ರೀವ್ಸ್ ಗೆ ಅಪಾರ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಆತನನ್ನು ರೋಲ್ ಮಾಡೆಲ್ ಆಗಿ ಪರಿಗಣಿಸತೊಡಗಿದ್ದರಂತೆ. ಇದರಿಂದಾಗಿ ರೀವ್ಸ್ ಸಿಗರೇಟ್ ಸೇದುವುದನ್ನು ಬಿಟ್ಟಿದ್ದರು. ತನ್ನ ನೋಡಿ ಮಕ್ಕಳು ಧೂಮಪಾನ ಮಾಡಬಾರದು ಎಂಬುದು ರೀವ್ಸ್ ಇಚ್ಚಿಸಿದ್ದರು. ಹೀಗಾಗಿ ತನ್ನ ಬದುಕನ್ನು ತುಂಬಾ ಖಾಸಗಿಯಾಗಿರಿಸಿಕೊಳ್ಳುವಂತಾಗಿತ್ತಂತೆ.

ಸೂಪರ್ ಮ್ಯಾನ್ ಎರಡು ಸೀಸನ್ ಪ್ರಸಾರವಾದ ನಂತರ ರೀವ್ಸ್ ಗೆ ಸಂಬಳದ ವಿಚಾರದಲ್ಲಿ ಅಸಮಧಾನ ಹೊಂದಿದ್ದ ಪರಿಣಾಮ ಗುಡ್ ಬೈ ಹೇಳಿ ಸಿನಿಮಾ ಕ್ಷೇತ್ರಕ್ಕೆ ಹೊರಳಿದ್ದರು. ಸೂಪರ್ ಮ್ಯಾನ್ ಪ್ರೊಡ್ಯೂಸರ್ ಮತ್ತೊಬ್ಬ ಹೊಸ ಸ್ಟಾರ್ ಗಾಗಿ ಹುಡುಕಾಟ ನಡೆಸಿದ್ದರು. ಏತನ್ಮಧ್ಯೆ ಸೂಪರ್ ಮ್ಯಾನ್ ನಿರ್ಮಾಪಕ ಸಂಬಳ ಹೆಚ್ಚಿಸುವ ಆಫರ್ ನೀಡಿದ್ದರು. ಬಳಿಕ ರೀವ್ಸ್ ಮತ್ತೆ ಸೂಪರ್ ಮ್ಯಾನ್ ಸೀರಿಸ್ ನಲ್ಲಿ ಮುಂದುವರಿದಿದ್ದರು.

1959ರ ಜೂನ್ 16ರಂದು ಬೆನೆಡಿಕ್ಸ್ ಕ್ಯಾನ್ ಯೋನ್ ನಲ್ಲಿನ ಮನೆಯಲ್ಲಿ ರೀವ್ಸ್ ಅವರನ್ನು ಗುಂಡಿಟ್ಟು ಹತ್ಯೆಗೈದುಬಿಟ್ಟಿದ್ದರು. ಆದರೆ ಇದೊಂದು ಆತ್ಮಹತ್ಯೆ ಎಂದು ಪೊಲೀಸ್ ದಾಖಲೆಯಲ್ಲಿ ಉಳಿದುಬಿಟ್ಟಿತ್ತು. ರೀವ್ಸ್ ಅವರದ್ದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂಬುದಾಗಿ ಹಲವರು ನಂಬಿದ್ದಾರೆ. ರೀವ್ಸ್ ಘಟನೆ ವಿಚಾರದಲ್ಲಿ ಪೊಲೀಸರು ಕೂಡಾ ಹೆಚ್ಚು ಆಸಕ್ತಿ ವಹಿಸದೇ ಕೇಸ್ ಅನ್ನು ಮುಚ್ಚಿಹಾಕಿರುವುದಾಗಿ ಆರೋಪಿಸಲಾಗಿದೆ.

ಮತ್ತೊಂದು ಥಿಯರಿ ಪ್ರಕಾರ ರೀವ್ಸ್ ವೃತ್ತಿ ಬದುಕಿನ ಸೋಲು ಹಾಗೂ ಹೊಸ ಕೆಲಸ ಸಿಗದ ಹತಾಶೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸೂಪರ್ ಮ್ಯಾನ್ ಆಗಿ ರಂಜಿಸಿದ್ದ ರೀವ್ಸ್ ತನ್ನ 45ನೇ ವಯಸ್ಸಿನಲ್ಲಿ ಸಾವಿಗೀಡಾಗಿದ್ದು ಇಂದಿಗೂ ನಿಗೂಢವಾಗಿದೆ.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next