Advertisement
ಅರ್ಜುನ್ ಜನ್ಯ ಕನ್ನಡದ ಬಿಝಿ ಸಂಗೀತ ನಿರ್ದೇಶಕರಾಗಿಬಿಟ್ಟರಲ್ಲಾ?– ನೋಡಿ, ಇಷ್ಟ ಇರುವ ಮತ್ತು ಪ್ರೀತಿ ಇರುವವರ ಜತೆ ಕೆಲಸ ಮಾಡಬೇಕಾದರೆ, ಯಾವುದೂ ಕಷ್ಟ ಆಗಲ್ಲ. ಕಷ್ಟ ಅನಿಸೋದು ಬೇರೆ ರೀತಿಯ ಜನರ ಜತೆ ಕೆಲಸ ಮಾಡುವಾಗ. ಕಳೆದ ವರ್ಷ ಹದಿನೈದು ಸಿನಿಮಾ ಮಾಡಿದ್ದೇನೆ. ನಿಜವಾಗಿಯೂ ಅದು ನನಗೇ ಗೊತ್ತಿಲ್ಲ. ಅದೆಲ್ಲಾ ಸಾಧ್ಯವಾಗಿದ್ದು, ಅರ್ಜುನ್‌ಜನ್ಯ ಒಬ್ಬನಿಂದ ಅಲ್ಲ. ನನ್ನ ಜತೆ ರಾತ್ರಿ, ಹಗಲು ಕೆಲಸ ಮಾಡಿದ ಸಂಗೀತಗಾರರು, ಬೆಂಗಳೂರು, ಚೆನ್ನೈನಲ್ಲಿರುವ ನನ್ನ ಮ್ಯೂಸಿಷಿಯನ್ಸ್ ಕೊಟ್ಟ ಸಹಕಾರ, ಪ್ರೋತ್ಸಾಹದಿಂದ ಎಷ್ಟೇ ಒತ್ತಡವಿದ್ದರೂ ಎಲ್ಲವನ್ನೂ ನಿಭಾಯಿಸಿದ್ದೇನೆ. ಒಂದು ಕಡೆ ಸಿನಿಮಾ, ಇನ್ನೊಂದು ಕಡೆ ರಿಯಾಲಿಟಿ ಶೋ ಇವೆಲ್ಲ ಸರಿಯಾಗಿ ನಿರ್ವಹಿಸಲು ಒಳ್ಳೇ ಟೀಮ್ ಜತೆಗಿರಬೇಕು. ನನ್ನ ಜತೆ ಆ ತಂಡವಿದೆ. ಹಾಗಾಗಿ ಸಲೀಸಾಗಿಯೇ ಎಲ್ಲವೂ ನಡೆಯುತ್ತಿದೆ.
– ನಾನು ಯಾವುದೇ ಕೆಲಸ ಮಾಡಲಿ, ಅಲ್ಲಿ ಒಳ್ಳೆಯದು, ಕೆಟ್ಟದ್ದು ಎಂಬುದು ಮೊದಲು ಗೊತ್ತಾಗುತ್ತೆ. ಕೆಟ್ಟದ್ದು ಬೇಗ ರೀಚ್ ಆಗೋದಿಲ್ಲ. ಅದು ಕೆಟ್ಟದ್ದು ಅಂತ ಗೊತ್ತಾದಾಗ, ಹುಷಾರಾಗಿರಬೇಕು. ಯಾವುದೋ ಒಂದು ಹಂತದಲ್ಲಿ ತುಂಬಾ ಖರ್ಚು ಆಗಿರುತ್ತೆ. ಅದು ರೀಚ್ ಆಗೋದಿಲ್ಲ ಅಂತ ಗೊತ್ತಿದ್ದರೂ, ಕಾಂಪ್ರಮೈಸ್ ಆಗಬೇಕೆನಿಸುತ್ತೆ. ಆಗ ನಾನು ಹಾಗೆ ಮಾಡಲ್ಲ. ಒಮ್ಮೊಮ್ಮೆ ಚೆನ್ನಾಗಿಲ್ಲದೇ ಇರೋದ್ದನ್ನೇ ಬೇಕು ಅಂತ ತಗೊಂಡು ಚೆನ್ನಾಗಿದೆ ಅಂತ ಹೇಳ್ತಾರೆ. ಆಗ, ನಾನೇ ಅದು ರೀಚ್ ಆಗಲ್ಲ ಅಂತ ತಿಳಿದು, ಒಂದಷ್ಟು ಸರಿ ಆಗೋವರೆಗೂ ಹೋರಾಡಿ, ನನಗೆ ತೃಪ್ತಿ ಅನಿಸೋವರೆಗೂ ಬಿಡೋದಿಲ್ಲ. ಹಾಗಾಗಿಯೇ, ಆ ಸಕ್ಸಸ್ ಕಾಣಲು ಸಾಧ್ಯವಾಗಿದೆ. ಬಹುಶಃ ಈ ಕಾರಣಗಳೇ ಯಶಸ್ಸಿನ ಮಂತ್ರ ಎನ್ನಬಹುದೇನೋ? ಈ ಸಕ್ಸಸ್ ನಿಮ್ಮ ಬದುಕನ್ನು ಎಷ್ಟು ಬದಲಾಯಿಸಿದೆ?
– ಯಾಕೆ ಬದಲಾಗಬೇಕು? ಚಿಕ್ಕ ವಯಸ್ಸಿನಿಂದಲೂ ನಾನು ಸಾಕಷ್ಟು ಸಮಸ್ಯೆ ನೋಡಿಕೊಂಡೇ ಬಂದಿದ್ದೇನೆ. ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ನನಗೆ ಅರ್ಥ ಆಗಿದ್ದೇನೆಂದರೆ, ಲೈಫಲ್ಲಿ ಖುಷಿಯಾಗಲಿ ದುಃಖವಾಗಲಿ ಈ ಎರಡೂ ಶಾಶ್ವತ ಅಲ್ಲ. ತುಂಬ ಖುಷಿ ಪಟ್ಟಾಗ ಸಹಜವಾಗಿಯೇ ಒಳಗಡೆ ಅಹಂಕಾರ ಬರುತ್ತೆ. ಆದರೆ, ಅದು ಶಾಶ್ವತ ಅಲ್ವಲ್ಲ ಗುರು ಅಂತ ಗೊತ್ತಾಗ ಹೋಗುತ್ತೆ. ದುಃಖ ಬಂದಾಗಲೂ ಬೇಸರದಿಂದ ಯಾರನ್ನಾದರೂ ಬೈಯಬೇಕು, ಹೀಯಾಳಿಸಬೇಕು ಅನಿಸುತ್ತೆ. ಅದೂ ಶಾಶ್ವತವಲ್ಲ ಅಂತ ಎನಿಸಿದಾಗ ಸಹಜಸ್ಥಿತಿಗೆ ಬರುತ್ತಾರೆ. ನಾನು ಭಗವದ್ಗೀತೆ ಓದಿಲ್ಲ. ಆದರೆ, ಅದನ್ನು ಓದದೇ, ಒಳ್ಳೇದು ಕೆಟ್ಟದ್ದನ್ನು ಗೊತ್ತಿಲ್ಲದೇ ಅರಿವು ಮಾಡಿಕೊಂಡು ಬಂದಿದ್ದೇನೆ. ಮುಖ್ಯವಾಗಿ ನಾನು ತುಂಬಾ ಫಾಲೋ ಮಾಡಿದ್ದು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಜೀವನ ಶೈಲಿಯನ್ನ. ಅವರ ಒಳ್ಳೆಯ ಮಾತುಗಳನ್ನ ಆಲಿಸಿಕೊಂಡು ಬಂದಿದ್ದೇನೆ. ಬಹುಶಃ ಅದೇ ನನ್ನ ಸಿಂಪ್ಲಿಸಿಟಿಗೆ ಕಾರಣವಿರಬೇಕು.
Related Articles
– ಹೌದು, ನನ್ನ ಸ್ಟ್ರೆಂಥ್ ಅಂದರೆ ತಾಳ್ಮೆ. ಯಾಕೆಂದರೆ ನಾನು ಯಾರ ಮೇಲೂ, ಎಂಥಾ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸಂದರ್ಭದಲ್ಲೂ ಒಂದೇ ರೀತಿ ಇರುತ್ತೇನೆ. ಎಲ್ಲವನ್ನೂ ತಾಳ್ಮೆಯಿಂದಲೇ ಎದುರಿಸುತ್ತೇನೆ.
Advertisement
ಇಷ್ಟು ಸಿನಿಮಾದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದೀರಿ …– ಹೌದು, ನಾನೀಗ 70 ಚಿತ್ರಗಳನ್ನು ಪೂರೈಸಿದ್ದೇನೆ. “ರಾಗ’ ನನ್ನ 70 ನೇ ಚಿತ್ರ. ಇದುವರೆಗೆ ಬಹಳಷ್ಟು ಪ್ರತಿಭಾವಂತರು ನನ್ನ ಜತೆ ಕೆಲಸ ಮಾಡಿ ಹೊರಬಂದಿದ್ದಾರೆ. ಇನ್ನೂ ಕೆಲವರು ಬೆಳೆಯುತ್ತಿದ್ದಾರೆ. ಸಂಗೀತ ನಿರ್ದೇಶಕರಾದ ಚಂದನ್‌ಶೆಟ್ಟಿ, ರವಿಬಸೂÅರು, ಗಾಯಕರಾದ ವ್ಯಾಸರಾಜ್, ಚಿನ್ಮಯಿ, ಅರ್ಚನಾ ರವಿ, “ಸರಿಗಮಪ’ ಖ್ಯಾತಿಯ ಅಂಕಿತಾ, ಚೆನ್ನಪ್ಪ, ಹೀಗೆ ಪ್ರತಿಭಾವಂತರು ಅಂತ ಗೊತ್ತಾದರೆ, ಅವರಿಗೆ ಅವಕಾಶ ಕೊಟ್ಟು ಇಂಡಸ್ಟ್ರಿಗೆ ಪರಿಚಯ ಮಾಡಿದ್ದೇನೆ. ಇನ್ನೂ ಹಲವು ಪ್ರತಿಭೆಗಳಿವೆ. ಹಂತ ಹಂತವಾಗಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತೇನೆ. 70 ಸಿನಿಮಾ ಆಯ್ತಾ? ಹಾಗಾದರೆ ಸೆಂಚ್ಯುರಿಗೆ ಹತ್ತಿರವಾಗಿದ್ದೀರಿ?
– ಹೌದು, ಈ ವರ್ಷ ಏನಿಲ್ಲವೆಂದರೂ 15 ಚಿತ್ರಗಳಾಗುತ್ತವೆ. ಅಲ್ಲಿಗೆ 85 ಸಿನಿಮಾಗಳು ಲೆಕ್ಕಕ್ಕೆ ಸಿಗುತ್ತವೆ. ಇದೇ ಸ್ಪೀಡ್‌ನಲ್ಲಿ ಹೋದರೆ, ಒಂದೆರೆಡು ವರ್ಷದಲ್ಲಿ ಸೆಂಚುರಿ ಬಾರಿಸಬಹುದು. ಅದೆಲ್ಲವೂ ಕನ್ನಡಿಗರ ಪ್ರೋತ್ಸಾಹದಿಂದ ಸಾಧ್ಯವಾಗಿದೆ.
ನಿಮ್ಮ ಇಷ್ಟೆಲ್ಲಾ ಸಾಧನೆಯ ಹಿಂದೆ ಇರೋರು ಯಾರು?
– ನನ್ನ ಸಾಧನೆಯ ಹಿಂದೆ ಬಹಳಷ್ಟು ಮಂದಿ ಇದ್ದಾರೆ. ನನ್ನ ಮೊದಲ ಸಿನಿಮಾದಿಂದ ಹಿಡಿದು, ಇಲ್ಲಿಯವರೆಗೆ ಕೆಲಸ ಕೊಟ್ಟವರೆಲ್ಲರೂ ನನ್ನ ಯಶಸ್ಸಿನಲ್ಲಿ ಭಾಗಿಯಾದವರು. ನನ್ನ ಜತೆ ಮಾಡಿದ ಬಹುತೇಕ ನಿರ್ದೇಶಕರು ಮೂರು ಚಿತ್ರಗಳನ್ನು ಮಾಡಿದ್ದಾರೆ. ಅಂತಹ ಫ್ರೆಂಡ್ಲಿ ವಾತಾವರಣ ಇಟ್ಟುಕೊಂಡಿದ್ದಕ್ಕೆ ಅದು ಸಾಧ್ಯವಾಗಿದೆ. ಇಷ್ಟು ಸಿನಿಮಾ ಮಾಡಿ, ಸಕ್ಸಸ್ ಕಾಣೋಕೆ ಬಹುಶಃ ಆ ಗೆಳೆತನವೇ ಕಾರಣ. ಮುಖ್ಯವಾಗಿ ನಾನು ದುನಿಯಾ ವಿಜಯ್ ಅವರನ್ನು ಮರೆಯೋಕ್ಕಾಗೋದಿಲ್ಲ. ಯಾಕೆಂದರೆ ಅವರು ನಾನು ಏನೂ ಇಲ್ಲದೇ ಇರುವಾಗಲೇ ಕರೆದು “ಯುಗ’ ಸಿನಿಮಾ ಕೊಟ್ಟು ಪ್ರೋತ್ಸಾಹಿಸಿದವರು. ಅವರ ಜತೆ ಏಳೆಂಟು ಚಿತ್ರ ಮಾಡಿದ್ದೇನೆ. ಅವರನ್ನು ಹೇಗೆ ಮರೆಯಲಿ? ಇನ್ನು, ನನ್ನ ಗಾಡ್‌ಫಾದರ್ ಅಂದರೆ, ಅದು ಕಿಚ್ಚ ಸುದೀಪ್. ಅವರ ಬಗ್ಗೆ ಹೀಗೆ ಹೇಳುತ್ತಿರುವುದು ಅವರು ಸಿನಿಮಾ ಕೊಡುತ್ತಾರೆ ಅಂತಲ್ಲ, ಅವರ ಬಳಿ ಬಹಳಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಬದುಕಿಗೆ ಬೇಕಾಗಿದ್ದನ್ನು ಕಲಿತಿದ್ದೇನೆ. ಇಲ್ಲವೆಂದರೆ, ಇಷ್ಟೊಂದು ಚಿತ್ರ ಮಾಡೋಕೆ ಆಗುತ್ತಿರಲಿಲ್ಲ. “ಕೆಂಪೇಗೌಡ’ ಸಿನಿಮಾ ಕೊಟ್ಟಾಗ, ಹಾರ್ಡ್‌ವರ್ಕ್ ಮಾಡಿದೆ. ಕಷ್ಟವಾದರೂ ಅದು ಅಭ್ಯಾಸವಾಯ್ತು. 15 ದಿನದಲ್ಲಿ ರೀರೆಕಾರ್ಡಿಂಗ್ ಬೇಕು ಅಂದ್ರು. ಚಾಲೆಂಜಿಂಗ್ ಆಗಿ ಕೆಲಸ ಮಾಡಿಕೊಟ್ಟೆ. ದೊಡ್ಡ ಯಶಸ್ಸಿನ ರಿಮೇಕ್ ಸಿನಿಮಾ ಬೇರೆ, ಫ್ರೆಶ್ ಸಾಂಗ್ ಕೊಡಬೇಕು. ಅದೂ ಹಿಟ್ ಆಗಿರಬೇಕು ಅಂತೆಲ್ಲಾ ಹೇಳಿದ್ದರು. ಒತ್ತಡವಿತ್ತು. ಆದರೂ ಕೆಲಸ ಮಾಡಿದೆ. ಇವತ್ತು ಫೋನ್ ಮಾಡಿ, ನಾಳೆ ನನಗೆ ಸಾಂಗ್ ಬೇಕು ಅಂತ ಹೇಳ್ಳೋರು. ನನಗೆ ಅವರನ್ನು ನಿಭಾಯಿಸೋಕೆ ಆಗುತ್ತಿರಲಿಲ್ಲ. ಒಟ್ನಲ್ಲಿ ಸಾಂಗ್ ಬೇಕು ಅಂದಿದ್ದಾರೆ. ಕೊಡಬೇಕು ಅಷ್ಟೇ ಅಂತ ರಾತ್ರಿ,ಹಗಲು ಕುಳಿತು ಕೆಲಸ ಮಾಡುತ್ತಿದ್ದೆ. ಅದು ಇಂದಿಗೂ ನಡೆದಿದೆ. ಫಾಸ್ಟ್‌ನೆಸ್ ತಂದಿದ್ದು ಸುದೀಪ್. ಅವರಿಂದಲೇ ಇದೆಲ್ಲಾ ಸಾಧ್ಯವಾಗಿದೆ. ಇಷ್ಟೊಂದು ಬಿಜಿ ಇರೋ ನೀವು ಮಡದಿ, ಮಗಳಿಗೆ ಟೈಮ್ ಕೊಡ್ತೀರಾ?
– ಆ ರೀತಿಯ ಸಮಸ್ಯೆ ಇಲ್ಲ. ಯಾಕೆಂದರೆ, ಮನೆಯಲ್ಲೇ ಸ್ಟುಡಿಯೋ ಇರುವುದರಿಂದ ಅದೆಲ್ಲವನ್ನೂ ಮ್ಯಾನೇಜ್ ಮಾಡ್ತೀನಿ. ಮನೆಯಲ್ಲೂ ನನಗೆ ಸಹಕಾರವಿದೆ. ಅವರ ಪ್ರೋತ್ಸಾಹ ಇರದಿದ್ದರೆ ಇಷ್ಟೊಂದು ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾದರೆ, ಈ ವರ್ಷವೂ ಫುಲ್ ಬಿಜಿ ಅನ್ನಿ?
– ಗೊತ್ತಿಲ್ಲ. ಬಂದದ್ದನ್ನು ಮಾಡುತ್ತಾ ಹೋಗುತ್ತೇನೆ. ಸದ್ಯಕ್ಕೆ ಈಗ ಹದಿಮೂರು ಚಿತ್ರಗಳು ಕೈಯಲ್ಲಿವೆ. ಅರ್ಜುನ್ ಸ್ವಲ್ಪ ಕಾಸ್ಟಿ ಅನ್ನೋ ಮಾತಿದೆ?
– ಕೆಲವರಿಗೆ ಇರಬಹುದೇನೋ? ಆದರೆ, ನಾನು ಎಲ್ಲರಿಗೂ ಒಂದೇ ರೇಟ್ ಮಾಡೋದಿಲ್ಲ. ಸುದೀಪ್ ಸರ್ “ಹೆಬ್ಬುಲಿ’ಗೆ ಕೆಲಸ ಮಾಡು, ಯಾರಿಗೂ ಕೊಡದ ಪೇಮೆಂಟ್ ಕೊಡ್ತೀನಿ ಅಂದ್ರು. ಆದರೆ, ನನಗೆ ಹಾಡು ಹಿಟ್ ಆಗಬೇಕು. ಹೀಗೇ ಗುಣಮಟ್ಟ ಇರಬೇಕು ಅಂದ್ರು. ಕನ್ನಡದಲ್ಲಿ ಸಿಗುವ ಬಜೆಟ್‌ಗೆ ಮಾಡೋದು ಕಷ್ಟ. ಆದರೂ ಒಳ್ಳೇ ಪೇಮೆಂಟ್ ಕೊಡ್ತೀನಿ ಮಾಡು ಅಂದ್ರು ಮಾಡಿದೆ. ಅದು ಹಾಗೆ ಮಾಡಿದ ಸಿನಿಮಾ. ಇನ್ನು ಕೆಲವರು ನೀವೇ ಬೇಕು ಅಂತ ಬರುತ್ತಾರೆ. ಅವರಿಗೆಲ್ಲಾ ಆ ರೇಂಜ್ ಬಜೆಟ್‌ನಲ್ಲಿ ಮಾಡೋಕ್ಕಾಗಲ್ಲ. ಆದರೆ, ಗುಣಮಟ್ಟಕ್ಕೆ ಕೊರತೆ ಇರಲ್ಲ. ಪಿ.ಸಿ.ಶೇಖರ್ “ರಾಗ’ ತಂದಾಗ, ನಿಮ್ಮ ರೆಗ್ಯುಲರ್ ಬಜೆಟ್ ಕೊಡೋಕ್ಕಾಗಲ್ಲ. ಏನೋ ಒಳ್ಳೇ ಹಾಡು ಮಾಡಿಕೊಡಿ ಅಂದ್ರು. ನನಗೆ ಕಥೆ ಹಿಡಿಸಿತು. ಕೆಲಸ ಮಾಡಿದೆ. ಇಂಟರ್‌ನ್ಯಾಷನಲ್ ಲೆವೆಲ್‌ಗೆ ಹೋಲಿಸಿದರೂ, ಕ್ವಾಲಿಟಿ ಕೆಡಿಸುವುದಿಲ್ಲ. ನಾನು ಇದುವರೆಗೆ ಇಷ್ಟು ಕೊಟ್ಟರೆ ಮಾತ್ರ ಮಾಡ್ತೀನಿ ಅಂತ ಯಾರ ಬಳಿಯೂ ಹೇಳಿಲ್ಲ. ಕೆಲ ಸಿನಿಮಾಗಳನ್ನು ಮಾಡೋದಿಲ್ಲ ಅಂತ ಹೇಳಲಾಗದೆ, ಜಾಸ್ತಿ ಬಜೆಟ್ ಹೇಳಿದ್ದೂ ಇದೆ! ನಾನು ಯಾವತ್ತೂ ಹಣಕ್ಕಾಗಿಯೇ ಕೆಲಸ ಮಾಡಿಲ್ಲ. ನೀವು, ತೆರೆಮೇಲೆ ಕಾಣಿಸಿಕೊಂಡಿದ್ದಾಗಿದೆ, ಮುಂದೆ ನಿರ್ದೇಶನವೇನಾದ್ರೂ?
– ನನಗೆ ನಿರ್ದೇಶನ ಮಾಡುವ ಆಸೆ ಇದೆ. ಆದರೆ, ಏನು ಮಾಡೋದು, ನಿರ್ದೇಶನದ ಎಬಿಸಿಡಿ ಗೊತ್ತಿಲ್ಲ. ಕೆಲ ಸಿನಿಮಾಗಳನ್ನು ನೋಡಿದಾಗ, ನನಗೆ ನಿರ್ದೇಶನ ಮಾಡಬೇಕು ಎಂಬ ಆಸೆ ಬರುತ್ತೆ. ಆದರೆ, ನಿರ್ದೇಶನ ಸುಮ್ಮನೆ ಬರೋದಿಲ್ಲ. ಕೆಲಸ ಕಲಿಯಬೇಕು. ನನಗೆ ಟೈಮ್ ಸಿಗುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಒಂದಲ್ಲ, ಒಂದು ದಿನ ನಾನು ಚಿತ್ರವೊಂದನ್ನು ನಿರ್ದೇಶನ ಮಾಡುತ್ತೇನೆ. ಸಂಗೀತ ಶಾಲೆ ಶುರು ಮಾಡುವ ಮಾತಿದೆಯಲ್ಲ?
– ಹೌದು, ಮೈಸೂರಲ್ಲಿ ಒಂದು ಸುಸಜ್ಜಿತವಾದ ಸಂಗೀತ ಶಾಲೆ ಮಾಡುವ ಯೋಚನೆ ಇದೆ. ಅದು ದೊಡ್ಡ ಮಟ್ಟದಲ್ಲೇ ಆಗಬೇಕೆಂಬುದು ನನ್ನ ಆಸೆ. ಫಾರಿನ್ ಟೀಚರ್ ಕರೆಸಿ, ನಡೆಸುವ ಉದ್ದೇಶವಿದೆ. ಸದ್ಯಕ್ಕೆ ತಯಾರಿ ಮೆಲ್ಲನೆ ನಡೆಯುತ್ತಿದೆ. ಸದ್ಯಕ್ಕಂತೂ ಇಲ್ಲ, ಅದಕ್ಕಿನ್ನೂ 5 ವರ್ಷಗಳು ಬೇಕು. ನೀವು ಕಂಡಂತೆ ಕನ್ನಡದಲ್ಲೀಗ ಸಂಗೀತ ಯಾವ ಟ್ರೆಂಡ್ ಹುಟ್ಟು ಹಾಕಿದೆ?
– ಕನ್ನಡದಲ್ಲಿ ನನ್ನ ಜರ್ನಿ ಶುರುವಾಗಿ 11 ವರ್ಷಗಳಾಗಿವೆ. ಎಲ್ಲಾ ತರಹದ ಸಂಗೀತದ ಟ್ರೆಂಡ್ ಅನ್ನೂ ಗಮನಿಸಿದ್ದೇನೆ. ನಾನು ಬರುವಾಗ ಗುರುಕಿರಣ್ ಅವರು “ಜೋಗಿ’ ಮೂಲಕ ಅದ್ಭುತ ಚಿತ್ರ ಕೊಟ್ಟಿದ್ದರು. ಆಮೇಲೆ “ಮುಂಗಾರು ಮಳೆ’ ಮೂಲಕ ಮನೋಮೂರ್ತಿ ಅದ್ಭುತ ಮೆಲೋಡಿ ಕೊಟ್ಟರು. ಆ ಟ್ರೆಂಡ್ ಕೂಡ ನೋಡಿದೆ. ಅದಾದ ಮೇಲೆ ಹರಿಕೃಷ್ಣ ಅವರು ಟಪ್ಪಾಂಗುಚ್ಚಿ ಟ್ರೆಂಡ್‌ಗೆ ಮುನ್ನುಡಿ ಬರೆದರು. ಅದರ ಜತೆಯಲ್ಲೆ ನಾನೂ ಬಂದೆ. ಈಗೀಗ ಹೊಸಬರೂ ಸಹ ತಿರುಗಿ ನೋಡುವಂತಹ ಸಂಗೀತ ಕೊಡುತ್ತಿದ್ದಾರೆ. ಚರಣ್‌ರಾಜ್‌ರಂತಹ ಯುವ ಸಂಗೀತ ನಿರ್ದೇಶಕರು ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಹಾಗೆ ಹೇಳುವುದಾದರೆ, ಕನ್ನಡದಲ್ಲೀಗ ಸುವರ್ಣ ಯುಗ. ನಾನಂತೂ ಎಂಜಾಯ್ ಮಾಡುತ್ತಿದ್ದೇನೆ. ಒಂದೇ ರೀತಿಯ ಸಂಗೀತಕ್ಕೆ ಅಂಟಿಕೊಳ್ಳುವುದಕ್ಕಿಂತ ಬೇರೆ ಏನಾದರೊಂದು ಪ್ರಯೋಗ ಮಾಡಬೇಕು ಅದು ಈಗ ಆಗುತ್ತಿದೆ. ಹಾಗಾದರೆ ನಿಮಗೂ ಪ್ರಯೋಗಾತ್ಮಕ ಸಿನಿಮಾ ಇಷ್ಟ ಅನ್ನಿ?
– ನಾನು ಬಂದ್ದಿದ್ದೇ ಪ್ರಯೋಗಾತ್ಮಕ ಸಿನಿಮಾಗಳಿಗೆ ಕೆಲಸ ಮಾಡಬೇಕು ಅಂತ. ಆದರೆ, ಸಂಗೀತ ನಮ್ಮ ಖುಷಿಗೆ ಮಾಡೋಕ್ಕಾಗಲ್ಲ. ನಿರ್ದೇಶಕರು ಹೇಳಿದಂತೆ ಕೊಡಬೇಕು. ಟ್ರೆಂಡ್‌ಗೆ ತಕ್ಕಂತೆ ಮಾಡಬೇಕು. ಪ್ರಯೋಗಾತ್ಮಕ ಚಿತ್ರಕ್ಕೂ ಕೆಲಸ ಮಾಡೋ ಆಸೆ ಇದೆ. ಹೊಸದೊಂದು ಯುಟ್ಯೂಬ್ ಚಾನೆಲ್ ಮಾಡಿದ್ದೀರಂತೆ?
– ಹೌದು, ಎಜೆ (ಅರ್ಜುನ್ ಜನ್ಯ) ಎಂಬ ಹೆಸರಲ್ಲಿ ಒಂದು ಯುಟ್ಯೂಬ್ ಚಾನೆಲ್ ಶುರುಮಾಡಿದ್ದೇನೆ. ಆ ಚಾನೆಲ್‌ನಲ್ಲಿ ನನ್ನ ರಿಯಾಲಿಟಿ ಶೋನ ಪ್ರೋಮೋಗಳು ಇರುತ್ತವೆ. ನಾನು ಸಿನಿಮಾಗಳಿಗೆ ಮಾಡಲು ಆಗದಂತಹ ಹೊಸಬಗೆಯ ಸಂಗೀತ, ವೀಡಿಯೋ ಹಾಗೂ ಹೊಸ ಗಾಯಕರು ಹಾಡಿದ ಹಾಡುಗಳನ್ನು ಅಲ್ಲಿ ಅಪ್‌ಲೋಡ್ ಮಾಡುತ್ತೇನೆ. ಆ ಮೂಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುತ್ತೇನೆ. ಬರುವ ಯುವ ಸಂಗೀತ ನಿರ್ದೇಶಕರಿಗೆ ನಿಮ್ಮ ಕಿವಿಮಾತು?
– ಇಲ್ಲಿ ಸಂಗೀತ ಗೊತ್ತಿಲ್ಲದೆ ಯಾರೂ ಸಂಗೀತ ನಿರ್ದೇಶಕರಾಗಲ್ಲ. ಗೆಲ್ಲಬೇಕಾದರೆ, ಚಾಲೆಂಜಿಂಗ್ ಕೆಲಸ ಮಾಡಬೇಕಾದರೆ, ಮೊದಲು ತಾಳ್ಮೆ ಬೇಕು. ಅದನ್ನು ಬೆಳೆಸಿಕೊಂಡರೆ ಒಳ್ಳೇದು. ಸೋಲು, ಗೆಲುವು ಏನೇ ಬಂದರೂ ಸಮನಾಗಿಯೇ ಕಾಣಬೇಕು. ಸೋತಾಗ, ಬೇಜಾರಾಗೋದು, ಗೆದ್ದಾಗ, ಜಾಸ್ತಿ ಮಾತಾಡೋದನ್ನು ಬಿಟ್ಟು, ಕ್ವಾಲಿಟಿ ಕೆಲಸ ಮಾಡಬೇಕು. ವಿಜಯ್ ಭರಮಸಾಗರ; ಚಿತ್ರಗಳು ಸಂಗ್ರಹ