ಬೆಂಗಳೂರು: ಬಿಜೆಪಿ ಮುಖಂಡ, ಶಾಸಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದ ಆರೋಪಿ ಪ್ರಶಾಂತ್ ಕುಮಾರ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಕಲ್ಯಾಣ ನಗರದ ಫ್ಲವರ್ ಗಾರ್ಡನ್ ನಿವಾಸಿ ಪ್ರಶಾಂತ್ ಕುಮಾರ್ ಅಲಿಯಾಸ್ ರಾಜಾ ವಿರುದ್ಧ 20ಕ್ಕೂ ಅಧಿಕ ಕ್ರಿಮಿನಲ್ ಕೇಸ್‌ಗಳಿವೆ. 2017ರಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ. ನಂತರ ಆತ ಕಸ್ಟಡಿಯಿಂದಲೇ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಪ್ರಶಾಂತ್‌ನನ್ನು, ಹಳೆಯ ವೈಷಮ್ಯದಿಂದ ಕೊಂದಿರುವ ಸಾಧ್ಯತೆಯಿದೆ. ಪ್ರಶಾಂತ್ ವಿರೋಧಿ ಗುಂಪಿನವರೇ ಸುಪಾರಿ ನೀಡಿರುವ ಬಗ್ಗೆ ಸಂಬಂಧಿಕರು ಆರೋಪಿಸುತ್ತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಶಾಂತ್, ಸ್ನೇಹಿತ ಉದಯ್‌ಕುಮಾರ್ ಜತೆ ಬೈಕ್‌ನಲ್ಲಿ ಗುರುವಾರ ರಾತ್ರಿ 11.40ಕ್ಕೆ ಕಲ್ಯಾಣನಗರದ 100 ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರೊಂದಲ್ಲಿ ಬಂದ ದುಷ್ಕರ್ಮಿಗಳು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಪ್ರಶಾಂತ್ ನೆಲಕ್ಕೆ ಬೀದ್ದಿದ್ದಾನೆ. ಈ ವೇಳೆ ಪ್ರಾಣ ಭೀತಿಯಿಂದ ಪ್ರಶಾಂತ್ ಹಾಗೂ ಉದಯ್ ಓಡಿದ್ದು, ದುಷ್ಕರ್ಮಿಗಳು ಬೆಂಬಿಡದೆ ಪ್ರಶಾಂತ್‌ನನ್ನು ಹಿಡಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಪ್ರೊಶಾಂತ್ ಮೃತಪಟ್ಟಿದ್ದಾನೆ. ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಉದಯ್ ಕೂಡಲೇ ಪೊಲೀಸರು ಹಾಗೂ ಪ್ರಶಾಂತ್ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನಯ್ ಕಿಡ್ನಾಪ್ ಕೇಸ್‌ನ ಹಿನ್ನೆಲೆ: 2017ರ ಮೇ ತಿಂಗಳು ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಮೇಲೆ ಹಲ್ಲೆ ಹಾಗೂ ಕಿಡ್ನಾಪ್ ಯತ್ನ ನಡೆದಿತ್ತು. ಈ ಕುರಿತು ವಿನಯ್ ನೀಡಿದ ದೂರಿನ ಅನ್ವಯ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪಿಎ ಸಂತೋಷ್, ಉಮಾಕಾಂತ್, ಪ್ರಶಾಂತ್ ಸೇರಿ ಹಲವರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೆಲ ತಿಂಗಳ ಬಳಿಕ ಆರೋಪಿ ಪ್ರಶಾಂತ್‌ನನ್ನು ಬಂಧಿಸಲಾಗಿತ್ತು.