ವಿಧಾನ ಪರಿಷತ್ತು: ರಾಜ್ಯದಲ್ಲಿ ಬಿಜೆಪಿ ಸೇರಿ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡದ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಧರಣಿ ನಡೆಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಬಿಜೆಪಿಯ ಸೋಮಣ್ಣ ಬೇವಿನ ಮರದ, “ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಮತ್ತು
ಸಂಘ ಪರಿವಾರದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಎಷ್ಟು’ ಎಂಬ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆ ಬಂದಾಗ ಉತ್ತರಿಸಲು ಗೃಹ ಸಚಿವರು ಕಾಲಾ ವಕಾಶ ಕೇಳಿದ್ದಾರೆಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು.
ಇದರಿಂದ ಸಿಟ್ಟಿಗೆದ್ದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರು. ಬಿಜೆಪಿ ಸದಸ್ಯರ ಏಕಾಏಕಿ ಧರಣಿಗೆ ಆಕ್ಷೇಪ ವ್ಯಕ್ತಪಡಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, “ಯಾವುದೇ ನೋಟಿಸ್ ಇಲ್ಲದೇ, ವಿನಾಕಾರಣ ಧರಣಿ ನಡೆಸುವುದು ಸರಿಯಲ್ಲ. ಸದನ ನಡೆಸಲು ಸಹಕರಿಸ ಬೇಕು’ ಎಂದು ಮನವಿ ಮಾಡಿದರು. ಮಧ್ಯ ಪ್ರವೇಶಿಸಿದ ಗೃಹ ಸಚಿವ ರಾಮ ಲಿಂಗಾರೆಡ್ಡಿ, ಅಧಿಕಾರಿಗಳು ಒದಗಿಸಿದ ಉತ್ತರ ಸಮರ್ಪಕವಾಗಿಲ್ಲವೆಂಬ ಕಾರಣಕ್ಕೆ ಕಾಲಾವಕಾಶ ಕೇಳಲಾಗಿದೆ. ಶುಕ್ರವಾರ ಉತ್ತರ ಕೊಡುವುದಾಗಿ ಭರವಸೆ ನೀಡಿದರು. ಆದರೆ, ಇದಕ್ಕೆ ಒಪ್ಪದ ಸದಸ್ಯರು ಧರಣಿ ಮುಂದುವರಿಸಿದರು.
ಪತ್ನಿಗೆ ಬೆದರಿಕೆ: ಅಲ್ಲದೇ, ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಬಿಜೆಪಿ ಸದಸ್ಯರು, “ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿ ಮುಖಂಡರೊಬ್ಬರ ಕೊಲೆ ಪ್ರಕರಣದಲ್ಲಿ ಸಚಿವರೊಬ್ಬರ ಪರವಾಗಿ ಸಾಕ್ಷಿ ಹೇಳುವಂತೆ ಕೊಲೆಯಾದ ಬಿಜೆಪಿ ಮುಖಂಡನ ಪತ್ನಿಗೆ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಪ್ರಶ್ನೆ ಕೇಳಿದರೆ ಸರ್ಕಾರ ಕಾಲಾವಕಾಶ ಕೇಳುತ್ತಿದೆ’ ಎಂದು ಹರಿಹಾಯ್ದರು.
ಬಿಜೆಪಿ ಹಿರಿಯ ಸದಸ್ಯ ವಿ.ಸೋಮಣ್ಣ ಅವರು ಪಕ್ಷದ ಇತರ ಸದಸ್ಯರನ್ನು ಸಮಾಧಾನ ಪಡಿಸಲು ಮುಂದಾದರು. ಶುಕ್ರವಾರ ಉತ್ತರ ಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಹಾಗಾಗಿ ಧರಣಿ ಕೈಬಿಡಿ ಎಂದು ಕೇಳಿದಾಗ ಈ ಮನವಿಗೆ ಒಪ್ಪಿದ ಸದಸ್ಯರು ಧರಣಿ ವಾಪಸ್ ಪಡೆದರು.