Advertisement

ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು

12:56 AM Mar 13, 2020 | Sriram |

ವಿಶೇಷ ವರದಿ ಕಾರ್ಕಳ: ಸರಕಾರ ಮಾ. 11ರಂದು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿರುವುದರಿಂದ ಚುನಾವಣೆ ನಡೆದು ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಹುದ್ದೆಗೇರುವವರ ಬಗ್ಗೆ ಲೆಕ್ಕಾಚಾರ ಜೋರಾಗಿದೆ.

Advertisement

ಹೊಸ ನಿರೀಕ್ಷೆ
2018ರ ಆಗಸ್ಟ್‌ 31ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಸೆ. 3ರಂದು ಫ‌ಲಿತಾಂಶ ಘೋಷಣೆಯಾಗಿತ್ತು. ಫ‌ಲಿತಾಂಶ ಘೋಷಣೆಯಾದ ಬಳಿಕ ಅಂದಿನ ಸರಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿತ್ತು. ಅನಂತರ ಪ್ರಕಟಿಸಿರುವ ಪಟ್ಟಿಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದ್ದು, ಇದರ ವಿರುದ್ಧ ಕೋರ್ಟ್‌ ಮೊರೆ ಹೋದರು. ಈ ನಿಟ್ಟಿನಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಕಗ್ಗಂಟಾಗಿಯೇ ಉಳಿಯಿತು. ಇದೀಗ ಮಾ. 11ರಂದು ಸರಕಾರ ಮೀಸಲಾತಿ ಪಟ್ಟಿ ಪ್ರಕಟಗೊಂಡಿರುವುದರಿಂದ ಆಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡುವಂತಾಗಿದೆ.
ಕಾರ್ಕಳ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ 11 ಬಿಜೆಪಿ ಹಾಗೂ 11 ಕಾಂಗ್ರೆಸ್‌ ಸದಸ್ಯರಿದ್ದರೆ, ಓರ್ವ ಪಕ್ಷೇತರ ಸದಸ್ಯರಿದ್ದಾರೆ.

ಡಿಸಿ ಆದೇಶ
ಜಿಲ್ಲಾಧಿಕಾರಿ ಆದೇಶದ ಮೇರೆಗೆ ತಹಶೀಲ್ದಾರ್‌ ಚುನಾವಣಾ ದಿನಾಂಕ ಪ್ರಕಟಿಸಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಬಿಜೆಪಿ ಸದಸ್ಯರ ಪೈಕಿ ಯೋಗೀಶ್‌ ದೇವಾಡಿಗ ಎರಡನೇ ಬಾರಿಗೆ ಪುರಸಭಾ ಸದಸ್ಯರಾಗಿದ್ದರೆ, ಶೋಭಾ ಆರ್‌. ದೇವಾಡಿಗ ಈ ಹಿಂದೊಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ. ಉಳಿದಂತೆ ಬಿಜೆಪಿಯ ನೀತಾ ಆಚಾರ್ಯ, ಶಶಿಕಲಾ ಶೆಟ್ಟಿ, ಮಮತಾ, ಭಾರತಿ ಅಮೀನ್‌, ಪ್ರದೀಪ್‌ ಮಾರಿಗುಡಿ, ಕೆ.ಪಿ. ಪ್ರಶಾಂತ್‌, ಸುಮಾ ಕೇಶವ, ಪಲ್ಲವಿ, ಮೀನಾಕ್ಷಿ ಗಂಗಾಧರ ಮೊದಲ ಬಾರಿಗೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

ಎಂಎಲ್‌ಎ, ಎಂಪಿ ಮತ ನಿರ್ಣಾಯಕ
ಬಿಜೆಪಿ, ಕಾಂಗ್ರೆಸ್‌ ತಲಾ 11 ಸ್ಥಾನ ಹೊಂದಿರುವ ಕಾರಣ ಪುರಸಭೆ 6ನೇ ವಾರ್ಡ್‌ನ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಅವರು ಕಿಂಗ್‌ಮೇಕರ್‌ ಆಗಬೇಕಿತ್ತು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವಾಗ ಸ್ಥಳೀಯ ಶಾಸಕರ ಮತ್ತು ಸಂಸದರ ಮತ ಪರಿಗಣನೆಯಾಗುವುದರಿಂದ ಅವರ ಮತಗಳೇ ನಿರ್ಣಾಯಕವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next