Advertisement

ಸ್ವತ್ಛತೆ ಕಾಪಾಡುವಲ್ಲಿ ನಗರಸಭೆ ವಿಫ‌ಲ

03:42 PM Oct 04, 2018 | Team Udayavani |

ಕೋಲಾರ: ಇಲ್ಲಿನ ನಗರಸಭೆ ವೈಫ‌ಲ್ಯ ದಿಂದಾಗಿ ನಗರದ ಶಾಸಕ ಕೆ.ಶ್ರೀನಿವಾಸಗೌಡರ ನಿವಾಸಕ್ಕೆ ಹೊಂದಿಕೊಂಡಿರುವ ಹದಿನೇಳನೇ ವಾರ್ಡ್‌ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತಿಪ್ಪೆಯಾಗಿ ರೂಪು ಗೊಂಡಿದ್ದು, ಚರಂಡಿ
ಗಳಲ್ಲಿ ಕೊಳಕು ತುಂಬಿ ತುಳುಕುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.

Advertisement

ನಗರದ ಹದಿನೇಳನೇ ವಾರ್ಡಿಗೆ ಸೇರುವ ಶಹೀನ್‌ಶಾ ನಗರ ಹಾಗೂ ಅನ್ಸಾರ್‌ ನಗರಗಳಲ್ಲಿ ನಾಗರಿಕರಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ನಗರಸಭೆ ವಾರ್ಡಿನ ಸ್ವತ್ಛತೆ ಕುರಿತು ವಕ್ರದೃಷ್ಟಿ ಬೀರುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ. 

ಚರಂಡಿಗಳಲ್ಲಿ ಕಸದ ರಾಶಿ: ವಾರ್ಡಿನಲ್ಲಿ ಕಸ ವಿಲೇವಾರಿ ಮಾಡಿ ಮೂರ್‍ನಾರು ತಿಂಗಳುಗಳೇ ಕಳೆದಿವೆ. ವಾರ್ಡಿನಲ್ಲಿ ಎಲ್ಲಿ ನೋಡಿದರೂ ಕಸ ರಾಶಿ ರಾಶಿಯಾಗಿ ಕಾಣಿಸುತ್ತಿದ್ದು, ಗಾಳಿಗೆ ರಸ್ತೆಯುದ್ದಕ್ಕೂ ಹರಡಿಕೊಳ್ಳುವ ಮೂಲಕ ನಾಗರಿಕರಿಗೆ ಕಿರಿಕಿರಿ ಯನ್ನುಂಟು ಮಾಡುತ್ತಿದೆ.

ಇದೇ ವಾರ್ಡಿನಲ್ಲಿ ಚರಂಡಿಗಳನ್ನು ಸ್ವತ್ಛ ಮಾಡಿ ಹಲವಾರು ತಿಂಗಳುಗಳೇ ಕಳೆದಿವೆ. ಚರಂಡಿಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ದುರ್ವಾಸನೆ ಬೀರುತ್ತಿದೆ. ವಾರ್ಡಿನಲ್ಲಿ ಹಾದು ಹೋಗುವ ರಾಜಕಾಲುವೆಯೂ ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಸ್ವಲ್ಪ ಮಳೆ ಬಂದರೂ ನೀರು ಮನೆ, ಅಂಗಡಿಗಳಿಗೆ ನುಗ್ಗಿ ಅನಾಹುತ ಮಾಡುತ್ತಿದೆ.

ರೈಲ್ವೆ ಹಳಿ ಪಕ್ಕದ ರಸ್ತೆಯಲ್ಲೂ ಕಸದ ರಾಶಿ: ಇದೇ ವಾರ್ಡಿನ ಕೆಳ ಭಾಗದಲ್ಲಿ ರೈಲ್ವೆ ಹಳಿ ಹಾದು ಹೋಗಿದ್ದು, ಹಳಿ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲೂ ಕಸದ ರಾಶಿ ತುಂಬಿ ತುಳುಕುತ್ತಿದೆ. ಕಸದ ಸಮಸ್ಯೆಯಿಂದಾಗಿ ರೈಲ್ವೆ ಇಲಾಖೆ ಈ ರಸ್ತೆಯನ್ನೇ ಮುಚ್ಚುವ ನಿರ್ಧಾರಕ್ಕೆ ಬಂದಂತಿದೆ.

Advertisement

ಕುಡಿವ ನೀರು, ಬೀದಿ ದೀಪಗಳ ಸಮಸ್ಯೆ: ಟ್ಯಾಂಕರ್‌ ಮೂಲಕ ನೀರು ಪೂರೈಕೆ ಸ್ಥಗಿತಗೊಳಿಸಿದ ನಂತರ ಹದಿನೇಳನೇ
ವಾರ್ಡಿಗೆ ಸೇರುವ ಅನ್ಸಾರ್‌ ನಗರದ ನಿವಾಸಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಬೀದಿ ದೀಪಗಳ ವಿಚಾರ ಕೇಳು ವಂತೆಯೇ ಇಲ್ಲವಾಗಿದೆ. ಕೊಳವೆ ಬಾವಿ, ಪಂಪು ಮೋಟಾರು ದುರಸ್ತಿ ಇತ್ಯಾದಿ ಕಾರ್ಯಗಳು ಸಂಪೂರ್ಣ ನೆನೆಗುದಿಗೆ ಬಿದ್ದಿವೆ.

ನಗರಸಭೆ ನಿರ್ಲಕ್ಷ್ಯ: ಹದಿನೇಳನೇ ವಾರ್ಡ್‌ನಲ್ಲಿರುವ ಈ ಎಲ್ಲ ಸಮಸ್ಯೆಗಳ ಬಗ್ಗೆ ನಗರಸಭೆಗೆ ಹಲವಾರು ಬಾರಿ ದೂರು
ನೀಡಿದರೂ ಯಾವೊಬ್ಬ ಅಧಿಕಾರಿಯೂ ವಾರ್ಡಿಗೆ ಬಂದು ಸಮಸ್ಯೆಗಳನ್ನು ಪರಿಶೀಲಿಸಿ, ಪರಿಹರಿಸಲು ಮುಂದಾ
ಗುತ್ತಿಲ್ಲವೆಂಬ ದೂರು ಸ್ಥಳೀಯ ನಾಗರಿಕರಿಂದ ಕೇಳಿ ಬರುತ್ತಿದೆ.

ಈ ಹಿಂದೆ ನಗರಸಭೆಯಲ್ಲಿ ರಮೇಶ್‌ ಎಂಬ ಒಬ್ಬರೇ ಆರೋಗ್ಯ ನಿರೀಕ್ಷಕರಿದ್ದಾಗಲೂ ನಗರದಲ್ಲಿ ಸ್ವತ್ಛತಾ ಕಾರ್ಯಗಳು ಸಮಾಧಾನಕರವಾಗಿ ನಡೆಯುತ್ತಿದ್ದವು. ಆದರೆ, ಈಗ ನಗರಸಭೆಯಲ್ಲಿ ಮೂವರು ಆರೋಗ್ಯ ನಿರೀಕ್ಷಕರಿದ್ದರೂ ಸ್ವತ್ಛತಾ ಕಾರ್ಯಗಳು ಆಗುತ್ತಿಲ್ಲ. ಹದಿನೇಳನೇ ವಾರ್ಡಿನಂತಹ ಪ್ರದೇಶಗಳ ಸ್ವತ್ಛತೆಯನ್ನು ನಗರಸಭೆ ಸಂಪೂರ್ಣ ಕಡೆಗಣಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕೋಲಾರ ನಗರಸಭೆ ಅಧಿಕಾರಿಗಳು ಇನ್ನಾದರೂ ಹದಿನೇಳನೇ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸಲು ಗಮನ ಹರಿಸದಿದ್ದರೆ, ವಾರ್ಡಿನ ಯುವಕರನ್ನು ಸೇರಿಸಿ ಅವರಿಂದಲೇ ಕಸದ ರಾಶಿ ತಂದು ನಗರಸಭೆ ಮುಂದೆ ಹಾಕುವ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಾರ್ಡಿನ ಸದಸ್ಯ ಅಫ್ರೋಜ್ಜ್‌ ಪಾಷಾ ಎಚ್ಚರಿಸಿದ್ದಾರೆ. 

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದ ಹದಿನೇಳನೇ ವಾರ್ಡಿಗೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ, ತುಂಬಿ ತುಳುಕುತ್ತಿರುವ ಚರಂಡಿಗಳು, ಕುಡಿಯುವ ನೀರಿನ ಅಭಾವ,
ವಿದ್ಯುದ್ದೀಪಗಳ ಸಮಸ್ಯೆ ನಾಗರಿಕರನ್ನು ಮೂರು ತಿಂಗಳಿಂದ ಕಾಡುತ್ತಿದೆ. 
  ಅಪ್ರೋಜ್‌ ಪಾಷಾ,17 ನೇ ವಾರ್ಡ್‌ ನಗರಸಭಾ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next