ಕೊಪ್ಪಳ: ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಕಾಲುವೆ ಬಗ್ಗೆ ನಗರಸಭೆ ತುಂಬಾ ನಿರ್ಲಕ್ಷ್ಯ ವಹಿಸಿದೆ. ಸಿರಸಪ್ಪಯ್ಯನಮಠದಿಂದ ರೈಲ್ವೆ ಹಳಿಯವರೆಗೂ ಎರಡೂ ಬದಿ ಹಾಗೂ ಮಧ್ಯದಲ್ಲಿ ಮನೆ, ಶೆಡ್ ನಿರ್ಮಿಸಿಕೊಂಡು, ಕಾಲುವೆ ಒತ್ತುವರಿ ಮಾಡಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ಕೊಪ್ಪಳದ ರಾಜಕಾಲುವೆ ಈಗ ನಿರ್ಮಾಣ ಮಾಡಿಲ್ಲ. ಹಿಂದೆ ನಿಜಾಮ ಕಾಲಾವಧಿಯಿಂದ ಕಾಲುವೆಯ ನಿರ್ಮಾಣದ ಚಹರೆ ಹೊಂದಿದೆ. ಮೊದಲು ನಗರದ ಜನಸಂಖ್ಯೆ ಕಡಿಮೆ ಪ್ರಮಾಣದಲ್ಲಿದ್ದ ಕಾರಣ ಕಾಲುವೆಯ ಬಗ್ಗೆ ಅಷ್ಟೊಂದು ಕಾಳಜಿ ಯಾರಿಗೂ ಇರಲಿಲ್ಲ. ಆದರೆ ಇತ್ತೀಚೆಗಿನ ವರ್ಷದಲ್ಲಿ ಜನ ಸಾಂಧ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಕಾಲುವೆ ಮಹತ್ವ ಪಡೆದಿದೆ.
ಪ್ರಸ್ತುತ ರಾಜಕಾಲುವೆ ಸಿರಸಪ್ಪಯ್ಯನಮಠದ ಸಮೀಪದಿಂದ ಆರಂಭವಾಗಿ ಕೋಟೆ ರಸ್ತೆ, ಹಸನ್ ರಸ್ತೆ ಮಾರ್ಗವಾಗಿ ಪೊಲೀಸ್ ಠಾಣೆ ಪಕ್ಕದಲ್ಲಿ ಹಾದು ನೇರ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿ ಸಾಗಿ ನಂತರದಲ್ಲಿ ರೈಲ್ವೆ ಹಳಿ ದಾಟಿ ಗಣೇಶ ನಗರಕ್ಕೆ ಹೊಂದಿಕೊಂಡಂತೆ ಹಿರೇಹಳ್ಳಕ್ಕೆ ಈ ಕಾಲುವೆ ಸಂಪರ್ಕ ಪಡೆದುಕೊಂಡಿದೆ. ಈ ಕಾಲುವೆಯ ಎರಡೂ ಬದಿಯಲ್ಲಿ ಒತ್ತುವರಿ
ಮಾತ್ರ ಭರ್ಜರಿಯಾಗಿ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ಕಾಲುವೆ ಮಧ್ಯದಲ್ಲಿಯೇ ಪಿಲ್ಲರ್ ನಿರ್ಮಿಸಿಕೊಂಡು ಬಹುಪಾಲು ಜನರು ಮನೆ-ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿಕೊಂಡಿರುವುದು ಕಣ್ಮುಂದೆಯೇ ಇದೆ. ಇನ್ನು ಸಿರಸಪ್ಪಯ್ಯನಮಠದ ಹತ್ತಿರದ ದಿಡ್ಡಿಕೇರಿ, ಮಿಟ್ಟಿಕೇರಿ, ಗಡಿಯಾರ ಕಂಬದವರೆಗೂ ಒತ್ತುವರಿ ಈಗಲೂ ನಡೆದಿದೆ.
ಕೆಲ ನಿವಾಸಿಗಳು ಯಾರ ಭಯವೂ ಇಲ್ಲದೆ ಮನೆ, ಶೆಡ್ ನಿರ್ಮಿಸಿಕೊಳ್ಳಲು ಪಿಲ್ಲರ್ ಅಳವಡಿಕೆ ಮಾಡಿದ್ದಾರೆ. ಕೆಲವರಂತೂ ಚರಂಡಿ ಮಧ್ಯದಲ್ಲಿಯೇ ಮನೆ ನಿರ್ಮಾಣಕ್ಕೂ ಸಜ್ಜಾಗಿದ್ದಾರೆ. ಕೆಲವರು ವಿರೋಧಿಸಿ ನಗರಸಭೆ ಅಧಿಕಾರಿಗಳು, ಸದಸ್ಯರಿಗೆ ಹಲವು ಬಾರಿ ದೂರು ನೀಡಿದರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ. ಅಚ್ಚರಿ ಎಂಬಂತೆ ಹಿಂದೆ ಮಹೇಂದ್ರ ಛೋಪ್ರಾ, ಲತಾ ವೀರಣ್ಣ ಸಂಡೂರು ಸೇರಿದಂತೆ ಹಲವರು ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸುವಾಗ ರಾಜಕಾಲುವೆ ಅಕ್ರಮ ಒತ್ತುವರಿ ಗುರುತಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು.
Related Articles
ಕೆಲವೆಡೆ ಒತ್ತುವರಿ ತೆರವು ಮಾಡುವಂತೆಯೂ ಸೂಚನೆ ನೀಡಲಾಗಿತ್ತು. ಆದರೆ ಅಧಿಕಾರಿ ವರ್ಗ ತೆರವಿಗೆ ಮುಂದಾಗುತ್ತಿದ್ದಂತೆ ರಾಜಕೀಯ ಒತ್ತಡ ತಂದು ತಡೆ ಹಿಡಿಯುವ ಪ್ರಯತ್ನ ಮಾಡಲಾಯಿತು. ಇದರಿಂದ ಇಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ.
ಮಳೆ ಬಂದಾಗ ಮನೆ ಮನೆಯಲ್ಲಿ ನೀರು: ಪ್ರಸ್ತುತ ಮಳೆಗಾಲ ಆರಂಭವಾಗಿದೆ. ಮಳೆ ಬಂದರೆ ಈ ರಾಜ ಕಾಲುವೆ ಮೂಲಕವೇ ಇಡೀ ಕೊಪ್ಪಳ ನಗರದ ನೀರು ಸಾಗಿ ಹಿರೇಹಳ್ಳಕ್ಕೆ ಸೇರುತ್ತದೆ. ಆದರೆ ಅಲ್ಲಲ್ಲಿ ಮನೆ, ಶೆಡ್ ನಿರ್ಮಿಸಿ ಒತ್ತುವರಿ ಮಾಡಿದ್ದರಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೇ ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸುತ್ತದೆ. ಇಲ್ಲಿ ನಗರಸಭೆ ಅಧಿಕಾರಿಗಳು ಯಾವುದೇ ದಿಟ್ಟ ನಿರ್ಧಾರ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿದೆ.
ನಮ್ಮ ದಿಡ್ಡಿಕೇರಿ, ಮಿಟ್ಟಿಕೇರಿ ಭಾಗದಲ್ಲಿ ರಾಜಕಾಲುವೆಯನ್ನು ಎಲ್ಲೆಂದರಲ್ಲಿ ಒತ್ತುವರಿ ಮಾಡಲಾಗಿದೆ. ಈ ಬಗ್ಗೆ ನಗರಸಭೆ ಅಧಿ ಕಾರಿಗಳಿಗೆ ಸಂಬಂಧಿಸಿದ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿ ತೆರವಿಗೆ ಹೇಳಿದ್ದೇವೆ. ಆದರೆ ಯಾರೂ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಕಾಲುವೆ ಮಧ್ಯದಲ್ಲಿ ಕೆಲವರು ಮನೆ ನಿರ್ಮಿಸಿಕೊಳ್ಳಲು ಮುಂದಾಗಿ ಸ್ಥಳೀಯ ಜನರಿಗೆ ತೊಂದರೆಯಾಗುವಂತೆ ಮಾಡುತ್ತಿದ್ದಾರೆ.
ನಾಗರಾಜ ವಾಲಿಕಾರ, ಮಿಟ್ಟಿಕೇರಿ ನಿವಾಸಿ.
*ದತ್ತು ಕಮ್ಮಾರ