ಎಲ್ಲೋ ದೂರದಲ್ಲಿ ಪುಸ್ತಕ ಕೈಯಲ್ಲಿ ಹಿಡಿದು ಹಾಸ್ಟೆಲ್‌ನಲ್ಲಿ ಕುಳಿತ ಹುಡುಗಿಗೆ ದಿಢೀರ್ ಅಮ್ಮ ನೆನಪಾಗುತ್ತಾಳೆ. ಅಮ್ಮನ ಕೈರುಚಿ, ಅಮ್ಮ ಹೇಳಿದ ಕತೆ, ಅಮ್ಮನ ಅಪ್ಪುಗೆ ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಇಲ್ಲಿ ಈ ಹುಡುಗಿಗೆ ಕಾಡಿದ್ದು ನಾಗರಪಂಚಮಿಯ ಕರದಂಟು…
ನಾಗರ ಪಂಚಮಿ ಹಬ್ಬದಲ್ಲಿ ಬಗೆ ಬಗೆಯ ತಿನಿಸುಗಳನ್ನು ಮೆಲ್ಲುವುದೇ ಒಂದು ರಸಕ್ಷಣ. ದಾನಿ (ಶೇವ್) ಉಂಡಿ, ಶೇಂಗಾ ಉಂಡಿ, ಎಳ್ಳುಂಡಿ, ಕರದಂಟು, ಚುರುಮುರಿ, ಚಕ್ಕುಲಿ, ಕರ್ಜಿಕಾಯಿ ತಿನಿಸುಗಳು, ಮದ್ವೆಯಾದ ಹೆಣ್ಮಕ್ಕಳನ್ನೂ ತವರಿನತ್ತ ನಡೆಯುವಂತೆ ಆಸೆ ಹುಟ್ಟಿಸುತ್ತವೆ. ಅಂದು ನಾಗದೇವತೆಗೆ ಹಾಲನ್ನು ಎರೆಯುವರು. ಉಂಡಿಗಳನ್ನು ತಿನ್ನುತ್ತ ಜೋಕಾಲಿ ಜೀಕುವರು. ಇದನ್ನೆಲ್ಲ ಕಂಡರೆ ಏನೋ ಹರುಷ.
ಈ ಬಾರಿ ನಾನು ಹಾಸ್ಟೆಲ್‌ನಲ್ಲಿ ಇದ್ದೆ. ಹಾಗಾಗಿ, ಆ ರಸಕ್ಷಣಗಳನ್ನೆಲ್ಲ ಅನುಭವಿಸಲು ಆಗಲಿಲ್ಲ. ಏಕೆಂದರೆ, ನಮ್ಮೂರು ಸೊಲ್ಲಾಪುರ. ನಾನು ಇರುವ ಹುಬ್ಬಳ್ಳಿಯಿಂದ 290 ಕಿ.ಮೀ ದೂರ. ಅಲ್ಲಿಗೆ ಹೋಗಿಬರಲು ಒಂದು ದಿನ ಸಾಲುವುದಿಲ್ಲ. ಕಾಲೇಜಿಗೂ ಒಂದೇ ದಿನ ರಜೆಯಿತ್ತು. ಅಲ್ಲಿ ಮರಾಠಿಗರು ತುಂಬಾ ಜಾಸ್ತಿ. ಅವರು ಹೀಗೆ ನಾಗರ ಪಂಚಮಿಯನ್ನು ಆಚರಿಸುವುದಿಲ್ಲ. ಕೇವಲ ಅಳ್ಳಿಟ್ಟಿನ ಉಂಡಿಗಳನ್ನು ಮಾಡಿರುತ್ತಾರೆ. ನನ್ನ ಅಮ್ಮ ಆದರೂ ಚುರುಮುರಿ ಹಾಗೂ ಕರದಂಟು ಮಾಡುತ್ತಿದ್ದಳು. ಅದನ್ನು ನಾನು ಜಗಳವಾಡಿ ಮಾಡಿಸಿಕೊಳ್ಳುತ್ತಿದ್ದೆ. ಅವಳು “ಇಲ್ಲಿ ಯಾರೂ ಮಾಡುವುದಿಲ್ಲ, ಅದಕ್ಕೇ ನಾನೂ ಮಾಡುವುದಿಲ್ಲ’ ಎನ್ನುತ್ತಿದ್ದಳು. ಜಗಳವಾಡಿ ಮಾಡಿಸಿಕೊಳ್ಳುವುದರಲ್ಲೂ ಏನೋ ಖುಷಿ. ಅಮ್ಮನ ಸಿಟ್ಟು ನೋಡಬೇಕು ಅವಳ ಮುಖ ಆಗ ಕೆಂದಾವರೆ. ಇವುಗಳನ್ನು ಮಾಡುವಾಗ ಸುಮ್ಮನೇ ಮಾಡುವುದಿಲ್ಲ, ಬಯ್ಯುತ್ತ ಮಾಡುವಳು. ಆದರೂ ಅದು ಎಷ್ಟೊಂದು ರುಚಿಯಾಗಿರುತ್ತದೆ. ಬಾಯಲ್ಲಿಟ್ಟರೆ, ಕರಗಿ ಹೋಗುತ್ತದೆ. ನಾನು ಈ ಬಾರಿ ಅಮ್ಮಳ ಹತ್ತಿರ ಹೋಗದೆ, ಇಲ್ಲೇ ನನ್ನ ಚಿಕ್ಕಮ್ಮಳಿರುತ್ತಾಳೆ. ಅವಳ ಮನೆಗೆ ಹೋಗಿದ್ದೆ. ಈ ಬಾರಿ ಅವಳೂ ಏನೂ ಮಾಡಿದ್ದಿಲ್ಲ. ಅವಳ ಮನೆಯಲ್ಲಿ ಯಾರೂ ತಿನ್ನುವವರಿಲ್ಲವೆಂದು ಅವಳೂ ಮಾಡಿದ್ದಿಲ್ಲ. ತುಂಬಾ ಬೇಸರವಾಯಿತು. ನಾನು ಅವಳು ಮಾಡಿರುತ್ತಾಳೆಂದು ಹೋಗಿದ್ದರೆ, ಮಾಡಿರಲಿಲ್ಲ. ನಾಗದೇವತೆಗೆ ಎಡೆ ಹಿಡಿಯಬೇಕೆಂದು ಕೇವಲ ಅಳ್ಳಿಟ್ಟಿನ ಉಂಡಿ ಮಾಡಿದ್ದಳು. ಹಬ್ಬ ಮುಗಿದ ಮರುದಿನವೇ ಶುಕ್ರಗೌರಿ ಪೂಜೆಯಿತ್ತು. ಪೂಜೆಯನ್ನು ಮುಗಿಸಿಕೊಂಡು ಹಾಸ್ಟೆಲ್‌ಗೆ ಬಂದೆ. ಅಷ್ಟರಲ್ಲೇ ಅಮ್ಮನ ಫೋನ್ ಕರೆ ಬಂದಿತು. “ನಿನಗಾಗಿ ಚುರುಮುರಿ ಹಾಗೂ ಕರದಂಟನ್ನು ಸೊಲ್ಲಾಪುರ- ಹುಬ್ಬಳ್ಳಿ ಬಸ್‌ನಲ್ಲಿ ಕಳುಹಿಸಿರುವೆ, ಹೋಗಿ ತೆಗೆದುಕೊಂಡು ಬಾ. ಮಧ್ಯಾಹ್ನ 3 ಗಂಟೆಗೆ ಬಸ್ ಬರಬಹುದು ನೋಡು’ ಎಂದಳು. ನನಗೆ ತುಂಬಾ ಖುಷಿಯಾಯಿತು. ಆದರೂ ಸುಮ್ಮನೆ, “ಯಾಕಮ್ಮಾ, ಇಷ್ಟೆಲ್ಲ ತೊಂದರೆ ತೆಗೆದುಕೊಂಡೆ?’ ಎಂದಾಗ, “ಪ್ರತಿವರ್ಷ ನೀನು ಮನೆಯಲ್ಲಿದ್ದಾಗ ಜಗಳವಾಡಿ ಇವೆಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದೆ. ಆದರೆ, ಈ ಬಾರಿ ಜಗಳವಾಡಲು ನೀನೂ ಇಲ್ಲ, ನೀನಿರದೆ ಪಂಚಮಿಯೂ ಚೆನ್ನಾಗಿ ಆಗುವುದಿಲ್ಲ’ ಎಂದಳು. “ನೀನು ಪ್ರತಿವರ್ಷ ಮಾಡುವ ಜಗಳವು ನನಗೆ ತುಂಬ ನೆನಪಾಗುತ್ತಿತ್ತು. ಅದಕ್ಕೇ ಮಾಡಿ ಕಳುಹಿಸಿರುವೆ. ನೀನು ತಿಂದರೇನೇ ನನಗೆ ತೃಪ್ತಿ’ ಎಂದಳು. ನನ್ನ ಕಣ್ಣಿಂದ ನನಗೇ ಗೊತ್ತಾಗದೇ ಕಣ್ಣೀರು ತುಂಬಿ ಬಂದಿತ್ತು.
ನಾನು ಲಘುಬಗೆಯಿಂದ ಎರಡೂವರೆಗೆ ಹೋಗಿ ಮೂರು ಗಂಟೆಯವರೆಗೆ ದಾರಿ ಕಾದು, ಅಮ್ಮ ಕಳುಹಿಸಿದ ಊಟದ ಚೀಲವನ್ನು ತೆಗೆದುಕೊಂಡು ಬಂದೆ. ಹಾಸ್ಟೆಲ್ಲಿಗೆ ಬಂದು ಒಂದೇ ಒಂದು ತುಣುಕನ್ನು ಬಾಯಿಗೆ ಹಾಕಿಕೊಂಡೆ. “ಆಹಾ, ಎಷ್ಟೊಂದು ರುಚಿಯಾಗಿತ್ತು’ ಎಂದರೆ, ಬಾಯಲ್ಲಿಟ್ಟರೆ ಕರಗುತ್ತಿತ್ತು. ಒಂದೆಡೆ ಎಲ್ಲವನ್ನೂ ಈಗಲೇ ಖಾಲಿ ಮಾಡಿಬಿಡುವೇನೋ ಎಂದಂತೆ ಅನಿಸಿದರೆ, ಇನ್ನೊಂದೆಡೆ ಕಣ್ಣೀರು. ಇದನ್ನೆಲ್ಲ ನೆನೆಸಿಕೊಂಡರೆ ನಗು ಬರುತ್ತದೆ.
ನನ್ನಮ್ಮ ನನಗಾಗಿ ಬಹಳಷ್ಟು ಕರದಂಟನ್ನು ಕಳುಹಿಸಿಕೊಟ್ಟಿದ್ದಳು. ಅಂದೇ ನಾನು ಚುರುಮುರಿ ಜೊತೆಗೆ ಕರದಂಟನ್ನು ತಿಂದು ಖುಷಿಪಟ್ಟೆ. ನನ್ನ ನಿಜವಾದ ನಾಗರಪಂಚಮಿ ಅಂದು ನೆರವೇರಿತು. ಇದೆಲ್ಲ ಮನಸ್ಸಿಗೆ ಎಷ್ಟೊಂದು ಖುಷಿ ಕೊಡುತ್ತದೆ ಎಂದರೆ ಬಾಯಿ ಮಾತಲ್ಲಿ ಹೇಳಲು ಆಗುವುದಿಲ್ಲ. ಪಂಚಮಿಯ ಮೊದಲು ನಾನು ಅದೇ ಕನಸನ್ನು ಕಂಡಿದ್ದೆ. ಅಮ್ಮ ನನಗಾಗಿ ಪಂಚಮಿಯ ತಿನಿಸುಗಳನ್ನು ಕಳುಹಿಸಿದ್ದು, ನಾನು ಅದನ್ನು ತಿಂದು ತೇಗಿದ್ದು, ಅಮ್ಮನಿಗೆ ಚೆನ್ನಾಗಿತ್ತು ಎಂದು ಹೇಳಿದ್ದು, ಅಮ್ಮ ನನಗೆ ಒಂದೆರಡು ಒಳ್ಳೆಯ ಮಾತುಗಳನ್ನು ಹೇಳಿ ಮುದ್ದು ಮಾಡಿದ್ದು, ಇದೆಲ್ಲ ಈಗ ನಿಜವಾಗಿದೆ ಎಂದರೆ ನಂಬಲೂ ಆಗುತ್ತಿಲ್ಲ. ಬಹುಶಃ ನಾನು ನಸುಕಿನಲ್ಲಿ ಕಂಡಿದ್ದೆ. ಆದ್ದರಿಂದ ಇದು ನೆರವೇರಿತು ಎಂದು ಅನಿಸುತ್ತದೆ.
– ರಶ್ಮಿ ಕುರ್ಲೆ, ಹುಬ್ಬಳ್ಳಿ