ಉಪೇಂದ್ರ (Upendra) ಮಾತುಗಳೇ ಹಾಗೆ.. ನೀವು ಒಂದು ಪ್ರಶ್ನೆ ಕೇಳಿ ಅವರಿಂದ ದೀರ್ಘ ಉತ್ತರ ಬಯಸುವಂತಿಲ್ಲ. ಒಂದೊಂದು ವಾಕ್ಯದಲ್ಲಿ ಉತ್ತರಿಸಿಬಿಡುತ್ತಾರೆ. ಇನ್ನೊಂದಿಷ್ಟು ಪ್ರಶ್ನೆಗಳಿಗೆ ಅವರದ್ದೇ ಶೈಲಿಯಲ್ಲಿ ಉತ್ತರ. ಅರ್ಥಮಾಡಿಕೊಂಡವರೇ ಪುಣ್ಯಾತ್ಮರು. ಅವರ ಬರ್ತ್‌ಡೇ ದಿನ ಉಪೇಂದ್ರ ಪತ್ರಿಕಾಗೋಷ್ಠಿ ಕರೆದು “ಯು-ಐ’ (UI) ಬಗ್ಗೆ ಮಾತನಾಡಿದರು.
ಹಲವು ಪ್ರಶ್ನೆಗಳು ಉಪ್ಪಿಗೆ ಎದುರಾಯಿತು. ಆದರೆ, ಉಪೇಂದ್ರ ಮಾತ್ರ ಉಪ್ಪಿಟ್ಟು ತಿಂದಷ್ಟೇ ಸಲೀಸಾಗಿ ಒಂದೊಂದೇ ವಾಕ್ಯದಲ್ಲಿ ಉತ್ತರಿಸಿದರು. ಉಪ್ಪಿ “ಯು-ಐ’ ಬಗ್ಗೆ ಹೆಚ್ಚಿನ ಅಂಶಗಳನ್ನು ಬಿಟ್ಟುಕೊಡದೇ ನಗು ನಗುತ್ತಲೇ ಕೆಲವೇ ಕೆಲವು ಮಾತುಗಳನ್ನಾಡಿದರು. ಅವರ ಮಾತಿನ ಹೈಲೈಟ್ಸ್ ಹೀಗಿವೆ…
ಎರಡೂವರೆ ವರ್ಷಗಳ ಶ್ರಮ ಯು-ಐ ಸಿನಿಮಾ. ಈಗ ತೆರೆಗೆ ಸಿದ್ಧವಾಗಿದೆ.
ಆರಂಭದಲ್ಲಿ ಇದು ಕನ್ನಡ ಸಿನಿಮಾ ಅಂದುಕೊಂಡೆ ಶುರು ಮಾಡಿದ್ವಿ, ಆದರೆ ಮುಂದೆ ಪ್ಯಾನ್ ಇಂಡಿಯಾ ಮಾಡುವ ಯೋಚನೆ ಬಂತು. ಆ ನಂತರ ಸಾಕಷ್ಟು ಅಂಶಗಳು ಸೇರಿಕೊಂಡವು. ಅದಕ್ಕೆ ನಿರ್ಮಾಣ ಸಂಸ್ಥೆ ಕೂಡಾ ಸಾಥ್ ನೀಡಿತು.
ಅಕ್ಟೋಬರ್‌ನಲ್ಲಿ ರಿಲೀಸ್ ಎಂದಿದ್ದೇವೆ. ಆದರೆ, ಏನು ರಿಲೀಸ್ ಎಂದು ಹೇಳಿಲ್ಲ. ರಿಲೀಸ್ ಡೇಟ್ ಸದ್ಯದಲ್ಲೇ ತೀರ್ಮಾನ ಆಗಲಿದೆ. ಪ್ಯಾನ್ ಇಂಡಿಯಾ ಹಾಗೂ ತಂತ್ರಜ್ಞಾನ ಕೆಲಸ ಹೆಚ್ಚಿರುವುದರಿಂದ ಬಿಡುಗಡೆಯಲ್ಲಿ ವಿಳಂಬ ಆಗುತ್ತಿದೆ. ಅಕ್ಟೋಬರ್‌ನಲ್ಲೆ ಚಿತ್ರ ಬರಲಿದೆ. ಸಿನಿಮಾ ತಯಾರಾಗಿದೆ. ಒಮ್ಮೆ ನಾನು ಥಿಯೇಟರ್‌ನಲ್ಲಿ ನೋಡಬೇಕು. ಅದಾದ ನಂತರ ಬಿಡುಗಡೆ ದಿನಾಂಕ ಘೋಷಿಸುತ್ತೇವೆ.
ಚಿತ್ರದಲ್ಲಿ ಲಾಜಿಕಲ್, ಸೈಕಾಲಾಜಿಕಲ್ ಅಂಶಗಳಿವೆ. ಸಿನಿಮಾ ನೋಡಿದ ನಂತರ ನೀವೇ ಮಾತನಾಡುತ್ತೀರಿ.
ಈ ಸಿನಿಮಾ ಮುಗಿದ ಮೇಲೆ ವರ್ಷಕ್ಕೆರಡು ಸಿನಿಮಾ ಮಾಡುವ ಯೋಚನೆ ಇದೆ.
ನನ್ನ ಸಿನಿಮಾ ಎಂದರೆ ಹುಳ ಬಿಡೋದು ಎನ್ನುತ್ತಾರೆ ಆದರೆ, ಇದು ತಲೆಯಲ್ಲಿರೋ ಹುಳ ತೆಗೆಯುವ ಸಿನಿಮಾ.
ಬೇಕಾದರೆ ಐದೈದು ಮದುವೆಯಾಗಬಹುದು. ಆದರೆ, ನಿರ್ದೇಶನ ಮಾಡೋದು ಬಹಳ ಕಷ್ಟ.
ಲೋಕೇಶ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ಮಾಡ್ತಾ ಇದಿನಿ. ಅಲ್ಲಿ ವಿಲನ್ ಪಾತ್ರ ಅಲ್ಲ. ಬೇರೆಯೇ ಶೇಡ್‌ನಲ್ಲಿ ನನ್ನ ಪಾತ್ರವಿದೆ.
ಪ್ರೇಕ್ಷಕರು ಅತಿ ಬುದ್ಧಿವಂತರು, ಅವರ ಮೇಲಿನ ವಿಶ್ವಾಸದಿಂದಲೇ ಈ ಸಿನಿಮಾ ಮಾಡಿರುವೆ. ಅಭಿಮಾನಿಗಳು ಯೆಸ್ ಎಂದರೆ ಸಿನಿಮಾ ಗೆದ್ದಂತೆ. ಎಲ್ಲರೂ ಸಿನಿಮಾ ಮೇಕರ್‌ಳಾಗಿದ್ದಾರೆ. ಹೀಗಾಗಿ, ಒಳ್ಳೆಯದನ್ನು ನೀಡಲು ನಾವು ಪ್ರಯತ್ನಿಸಬೇಕು.
ಸಿನಿಮಾ ನಿರ್ದೇಶನ ಅನ್ನೋದು ದೊಡ್ಡ ಫೈಟ್. ಪ್ರತಿ ಒಂದು ಹಂತದಲ್ಲೂ ಫೈಟ್ ಮಾಡಿ ಸಿನಿಮಾ ತಲುಪಿಸಬೇಕು. ಹಲವು ಕಾರಣದಿಂದ ಸಿನಿಮಾ ವಿಳಂಬ ಆಗಿದೆ. ಯೂಟ್ಯೂಬ್‌ನಲ್ಲಿ ಲೈವ್ ಹೋಗುವ ಸ್ಪೀಡ್‌ನಲ್ಲಿ ಸಿನಿಮಾ ಮಾಡೋಕೆ ಆಗಲ್ಲ.