ಬೆಳ್ತಂಗಡಿ: ಗ್ರಾಮೀಣ ಜನರ ಕನಸುಗಳು, ಅವರ ಸಮಸ್ಯೆಗಳು, ಅವರು ಆರ್ಥಿಕ ಸೇರ್ಪಡೆಯಲ್ಲಿ ತೊಡಗಿಸಿಕೊಂಡರೆ ಅವರ ಬಾಳು ಹೇಗೆ ಹಸನಾಗುತ್ತದೆ ಎಂಬುದನ್ನು ಕಾನೂರಾಯಣ ಚಲನಚಿತ್ರ ತೋರಿಸುತ್ತದೆಯೇ ಹೊರತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಚಾರದ ಉದ್ದೇಶ ಇದರಲ್ಲಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಳದ ಬಳಿಯ ಪ್ರವಚನ ಮಂಟಪದಲ್ಲಿ ಟಿ. ಎಸ್. ನಾಗಾಭರಣ ನಿರ್ದೇಶನದಲ್ಲಿ ನಿರ್ಮಾಣವಾಗಲಿರುವ “ಕಾನೂರಾಯಣ’ ಎಂಬ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಮಾತನಾಡಿದರು.
ನಿರ್ದೇಶಕ ಟಿ. ಎಸ್. ನಾಗಾಭರಣ ಮಾತನಾಡಿ, ಸಬಲೀಕರಣ ಕೇವಲ ಬಾಯಿ ಮಾತಾಗದೆ ಅದು ಕಾರ್ಯರೂಪಕ್ಕೆ ಹೇಗೆ ಬರುತ್ತದೆ ಎಂಬುದನ್ನು ಚಿತ್ರ ಒಳಗೊಂಡಿದೆ. ದೇಶದಲ್ಲಿ ಇದುವರೆಗೆ ಕ್ರೌಡ್ ಫಂಡಿಂಗ್ ಮೂಲಕ ನಡೆಸಿದ ಚಿತ್ರವೆಂದರೆ ಅಮುಲ್ ಸಂಸ್ಥೆಯ ಬಗ್ಗೆ ಮಾತ್ರ ಇದೆ. ಇದೀಗ ಕಾನೂರಾಯಣ ಅದೇ ರೀತಿಯ ಎರಡನೇಯ ಚಿತ್ರವಾಗಿದ್ದು ಕರ್ನಾಟಕದಲ್ಲಿ ಮೊದಲನೆಯದಾಗಿದೆ ಎಂದು ತಿಳಿಸಿದರು.
20 ಲಕ್ಷ ಜನರ ಹಣ: ಈ ಚಿತ್ರಕ್ಕಾಗಿ 20 ಲಕ್ಷ ಸದಸ್ಯರು ತಲಾ ರೂ. 20ರಂತೆ ಸಂಗ್ರಹಿಸಿ ನೀಡಿದ್ದಾರೆ. ಒಟ್ಟಾರೆ 5 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಹೀಗಾಗಿ ಸದಸ್ಯರೇ ಇದರ ನಿರ್ಮಾಪಕರು ಎಂದರು.
ಹೇಮಾವತಿ ವೀ. ಹೆಗ್ಗಡೆಯವರು ಮೂಹೂರ್ತದ ಕ್ಲಾಪ್ ಮಾಡಿ, ಹಷೇಂದ್ರಕುಮಾರ್, ಸುಪ್ರಿಯಾ ಹಷೇಂದ್ರಕುಮಾರ್ ಛಾಯಾಗ್ರಹಣಕ್ಕೆ ಚಾಲನೆ ನೀಡಿದರು. ಶ್ರದ್ಧಾ ಅಮಿತ್, ಚಿತ್ರದ ಸಹನಿರ್ದೇಶಕ ಪನ್ನಗ ಭರಣ, ಸಂಭಾಷಣೆಗಾರ ಹರೀಶ್ ಹಾಗಲವಾಡಿ, ಅವಿನಾಶ ಬಲೆಕ್ಕಳ್, ಛಾಯಾಗ್ರಾಹಕ ಶ್ರೀನಿವಾಸ ರಾಮಯ್ಯ, ನಾಯಕ ಸ್ಕಂದ, ನಾಯಕಿಯರಾದ ಸೋನು ಗೌಡ ಮತ್ತು ಜಾಹ್ನವಿ ಮತ್ತಿತರರು ಉಪಸ್ಥಿತರಿದ್ದರು.