Advertisement

ಕಾಂಗ್ರೆಸ್‌ ನಡಿಗೆ-ಸುರಾಜ್ಯದ ಕಡೆಗೆ ಅಭಿಯಾನ

12:01 PM Jan 03, 2017 | |

ಮೈಸೂರು: ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೃಷ್ಟಿಯಿಂದ ಹಮ್ಮಿ ಕೊಂಡಿರುವ “ಕಾಂಗ್ರೆಸ್‌ ನಡಿಗೆ – ಸುರಾಜ್ಯದ ಕಡೆಗೆ’ ಅಭಿಯಾನವನ್ನು ಜನವರಿ 30ರೊಳಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್‌ ಹೇಳಿದರು.

Advertisement

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಅಭಿಯಾನದ ಸಂದರ್ಭದಲ್ಲಿ ವಿತರಿಸಲು ರಾಜ್ಯ ಸರ್ಕಾರದ ಸಾಧನೆ, ಕೇಂದ್ರ ಸರ್ಕಾರದ ವೈಫ‌ಲ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಇತಿಹಾಸ ತಿಳಿಸುವ ಕಿರುಹೊತ್ತಿಗೆ ಹೊರತರಲಾಗಿದೆ.

ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ಈ ಕಿರುಹೊತ್ತಿಗೆ ಪಡೆದು, ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯಸರ್ಕಾರ ನೀಡಿರುವ ಅನುದಾನಗಳ ಸಮಗ್ರ ವಿವರವುಳ್ಳ ಪಟ್ಟಿ ತಯಾರಿಸಿಕೊಂಡು, ಸ್ಥಳೀಯ ಶಾಸಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಒಟ್ಟಾಗಿ ಅರ್ಧ ದಿನಗಳ ಕಾಲ ಕಾಲ್ನಡಿಗೆ ಮೂಲಕ ಜನರಿಗೆ ಈ ಕಿರುಹೊತ್ತಿಗೆ ವಿತರಿಸಿ, ರಾಜ್ಯ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಜತೆಗೆ ಕೇಂದ್ರ ಸರ್ಕಾರದ ವೈಫ‌ಲ್ಯಗಳ ಬಗ್ಗೆಯೂ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಶಾಸಕರು ತಮ್ಮ ಕೆಲಸವನ್ನಷ್ಟೇ ಮಾಡಿಕೊಂಡು ಪಕ್ಷದ ಕೆಲಸಗಳಿಗೆ ಗಮನ ಕೊಡದಿದ್ದರೆ, ಪಕ್ಷದಲ್ಲಿರುವ ಎಲ್ಲರಿಗೂ ತೊಂದರೆಯಾಗುತ್ತದೆ. ಹೀಗಾಗಿ ಶಾಸಕರು ಜವಾಬ್ದಾರಿ ಅರಿತು ಕೆಲಸ ಮಾಡುವಂತೆ ಹೇಳಿದ ಅವರು, ಪಕ್ಷದ ಮುಖಂಡರು ಎಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಬೇಕಿದೆ. ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬರುವುದರಿಂದ, ಒಮ್ಮತ ಇಲ್ಲದೇ ಪಕ್ಷದ ಸಂಘಟನೆಗೆ ಹಿನ್ನಡೆಯಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹಲವಾರು ಜನ ಹಿರಿಯ ಮುಖಂಡರು ಕಿವಿಮಾತು ಹೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದು, ಫೆಬ್ರವರಿ ನಂತರ ಪ್ರತಿ ಜಿಲ್ಲೆಗಳಲ್ಲಿ ಕುಳಿತು ಸ್ಥಳೀಯ ಮುಖಂಡರು, ಮುಂಚೂಣಿ ಘಟಕಗಳ ನಾಯಕರ ಜತೆ ಸಮಾಲೋಚನೆಗೆ ವೇದಿಕೆ ಕಲ್ಪಿಸಲಾಗುವುದು ಎಂದರು.

Advertisement

ಸರ್ಕಾರದ ಸಾಧನೆ ಮೇಲೆಯೇ 2018ರ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 175 ಭರವಸೆಗಳ ಪೈಕಿ ಈಗಾಗಲೇ 125 ಭರವಸೆಗಳನ್ನು ರಾಜ್ಯಸರ್ಕಾರ ಈಡೇರಿಸುವ ಮೂಲಕ ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ತೋರಿಸಿದ್ದೇವೆ. ರಾಜ್ಯದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬೇರಾವ ಸರ್ಕಾರ ಮಾಡದಷ್ಟು ಕೆಲಸ ಮಾಡಿದ್ದೇವೆ. ಆದರೆ, ಇದನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

ಪಕ್ಷದ ಸಂಘಟನೆ ಇಲ್ಲದಿದ್ದರೆ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲಾಗಲ್ಲ. ಹೀಗಾಗಿ ಜಿಲ್ಲಾ, ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳನ್ನು ಕೂಡಲೇ ರಚಿಸಿ, ಸಕ್ರಿಯರಾಗಿರುವವರಿಗೆ ಕರೆದು ಹುದ್ದೆ ಕೊಡಿ, ಸಕ್ರಿಯರಲ್ಲದವರನ್ನು ಹುದ್ದೆಯಿಂದ ತೆಗೆದು ಪಕ್ಷ ಸಂಘಟನೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಿ. ಫೆಬ್ರವರಿ 2ರೊಳಗೆ ವಾರ್ಡ್‌, ಬ್ಲಾಕ್‌, ಜಿಲ್ಲಾ ಸಮಿತಿ ಹಾಗೂ ಎಲ್ಲಾ ಘಟಕಗಳನ್ನು ರಚಿಸುವಂತೆ ಸೂಚಿಸಿದರು.

ಮಾಜಿ ಸಂಸದ ಎಚ್‌. ವಿಶ್ವನಾಥ್‌ ಮಾತನಾಡಿದರು. ನಗರ ಕಾಂಗ್ರೆಸ್‌ ಅಧ್ಯಕ್ಷ ಟಿ.ಎಸ್‌.ರವಿಶಂಕರ್‌ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್‌, ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಫಿಉಲ್ಲಾ, ಕಾಡಾ ಮಾಜಿ ಅಧ್ಯಕ್ಷ ಸಿ. ದಾಸೇಗೌಡ, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಮಾಜಿ ಶಾಸಕಿ ಮುಕ್ತಾರುನ್ನೀಸಾ ಬೇಗಂ, ನಗರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ನಗರ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ನೂತನವಾಗಿ ನೇಮಕವಾಗಿರುವ ರಾಧಾಮಣಿ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ವಹಿಸಿಕೊಡಲಾಯಿತು.

ಪಕ್ಷ ಕಡೆಗಣಿಸಿದರೆ ಅನಾಹುತ: ವಿಶ್ವನಾಥ್‌
ಮೈಸೂರು:
ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿದರೆ ಮುಂದೆ ನಿಮಗೆ ಅನಾಹುತ ಆಗುತ್ತದೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಎಚ್ಚರಿಕೆ ನೀಡಿದರು. ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ನಗರ ಕಾಂಗ್ರೆಸ್‌ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರಲ್ಲಿ ಸರ್ಕಾರ ನಡೆಸುತ್ತಿರುವವರ ಬಗ್ಗೆ ಅಸಹನೆ ಮತ್ತು ಸಾತ್ವಿಕ ಸಿಟ್ಟಿದೆ. ಅದನ್ನು ನಿವಾರಣೆ ಮಾಡದೆ, ಮಾತನಾಡುತ್ತಾ ಹೋದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕು ಎಂದರು.

ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್‌ ಅವರಿಗೆ ಪಕ್ಷದ ಕೆಲಸಕ್ಕೆ ಸಮಯ ಕೊಡಲಾಗುತ್ತಿಲ್ಲ. ಪಕ್ಷದ ಅಧ್ಯಕ್ಷರಿಗೆ ಬೇಕಾದಷ್ಟು ಕೆಲಸವಿದೆ. ಹೀಗಾಗಿ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಸ್ವತಂತ್ರಅಧ್ಯಕ್ಷರ ನೇಮಕ ಆಗಬೇಕಿದೆ. ಅಧಿಕಾರವೆಲ್ಲ ಶಾಸಕರ ಕೈಯಲ್ಲಿದೆ, ಪಕ್ಷದ ಜಿಲ್ಲಾಧ್ಯಕ್ಷರಿಗೆ ಸರ್ಕಾರದ ಮಟ್ಟದಲ್ಲಿ ಸಣ್ಣಪುಟ್ಟ ಕೆಲಸಗಳನ್ನೂ ಮಾಡಿಸಿಕೊಳ್ಳಲಾಗುತ್ತಿಲ್ಲ. ಆದ್ದರಿಂದ ಪಕ್ಷದ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪ್ರಮುಖರು, ಬ್ಲಾಕ್‌ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಕರೆಸಿಕೊಂಡು ಒಂದೆರಡು ಗಂಟೆಗಳ ಕಾಲ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ,

ಅವರ ಮನಸ್ಥಿತಿ ಅರ್ಥಮಾಡಿಕೊಂಡು ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು. ಯುವ ಜನರನ್ನು ಪಕ್ಷದತ್ತಸೆಳೆದು, ಪಕ್ಷದ ಬಗ್ಗೆ ತಿಳಿಸುವ ಕೆಲಸ ಮಾಡಿ, ಇಲ್ಲವಾದರೆ ಎಲ್ಲವನ್ನೂ ಮೋದಿಯೇ ಮಾಡಿದ್ದು ಎನ್ನುವ ಭಾವನೆ ಜನರಲ್ಲಿ ಬರಲಿದೆ ಎಂದರು. ಮುಖ್ಯಮಂತ್ರಿ, ಲೋಕೋಪಯೋಗಿ ಮಂತ್ರಿ ಇರುವ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಸ್ವಂತದ್ದೊಂದು ಕಟ್ಟಡವಿಲ್ಲ. ಪಕ್ಷದ ಸಭೆ ನಡೆಸಲು ಸಾಹುಕಾರ್‌ ಚೆನ್ನಯ್ಯ ಮನೆಗೆ ಹೋಗಬೇಕಾಯಿತು ಎಂದರು.

ನೂತನ ತಂತ್ರಜ್ಞಾನ ಬಳಕೆ ಅಗತ್ಯ: ಸೋಮಶೇಖರ್‌
ಶಾಸಕ ಎಂ.ಕೆ. ಸೋಮಶೇಖರ್‌ ಮಾತನಾಡಿ, ಬೇರೆ ಪಕ್ಷಗಳು ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದರೆ, ನಾವು ಕಳೆದ ಕೆಲ ವರ್ಷಗಳಿಂದ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಅನಾಣ್ಯೀಕರಣದ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡುವ ಮೂಲಕ ಬಡವರನ್ನು ಪಕ್ಷದ ಹತ್ತಿರ ತರುವ ಕೆಲಸವಾಗಬೇಕಿದೆ ಎಂದರು. ಶಾಸಕ ವಾಸು ಮಾತನಾಡಿ, ಚುನಾವಣೆ ಮುಗಿದ ನಂತರ ಕಾರ್ಯಕರ್ತರನ್ನು ಕೈಬಿಡುತ್ತಿರುವುದರಿಂದ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತಿದೆ. ಕಾಂಗ್ರೆಸ್‌ಗೆ ವಿರೋಧ ಮಾಡಿ ಗೊತ್ತಿಲ್ಲ.

ಬಿಜೆಪಿಗೆ ಆಡಳಿತ ಮಾಡಿ ಗೊತ್ತಿಲ್ಲ ಎಂಬಂತಾಗಿದೆ ಪರಿಸ್ಥಿತಿ ಎಂದರು. ವಿಧಾನಪರಿಷತ್‌ ಸದಸ್ಯ ಆರ್‌.ಧರ್ಮಸೇನ ಮಾತನಾಡಿ, ಸಾಮಾಜಿಕ ಜಾಲ ತಾಣದಂತಹ ತಂತ್ರಜಾnನವನ್ನು ಬಳಸಿಕೊಂಡು ಸರ್ಕಾರದ ಸಾಧನೆ, ಪಕ್ಷದ ಬಗ್ಗೆ ಪ್ರಚಾರ ಮಾಡುವಲ್ಲಿ ಹಿಂದೆ ಬಿದ್ದಿದ್ದೇವೆ. ಹೀಗಾಗಿ ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬರೂ ಫೇಸ್‌ಬುಕ್‌, ವಾಟ್ಸಪ್‌ ಬಳಸುವಂತಾಗಬೇಕು ಎಂದು ಹೇಳಿದರು.

ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರಮೋದಿ ಮಾತಿಗೆ ಹೆಚ್ಚು ಪುಷ್ಠಿ ಸಿಗುತ್ತಿದೆ. ನಮ್ಮ ಮಾತಿಗೆ ಯಾವ ಮಾಧ್ಯಮಗಳೂ ಪ್ರಚಾರ ಕೊಡುತ್ತಿಲ್ಲ. ಡಿ.ಕೆ.ರವಿಯಿಂದ ಗಣಪತಿ ಪ್ರಕರಣದವರೆಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಾಗುತ್ತಿದೆ.
-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next