ಬೆಂಗಳೂರು: ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮತ್ತೂಂದೆಡೆ ಪುಸ್ತಕ ಬರೆಯುವವರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಹೀಗಾಗಿ ಕನ್ನಡ ಪುಸ್ತಕ ಓದುಗರ ಸಂಖ್ಯೆ ಹೆಚ್ಚಳಕ್ಕಾಗಿ ಆಂದೋಲನ ನಡೆಸಬೇಕಿದೆ ಎಂದು ಸಾಹಿತಿ ಡಾ.ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರಕಾಶಕರ ಸಂಘ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳವಾರ ನಗರದ ಕೇಂದ್ರ ಸಾಹಿತ್ಯ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕ ಓದುಗರ ಹೆಚ್ಚಿದ್ದರೂ, ಕನ್ನಡ ಓದುಗರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಆಂದೋಲನ ನಡೆಸಬೇಕಿದ್ದು, ರಾಜಕಾರಣಿಗಳು ಸಾಹಿತ್ಯ ಓದುವುದರಿಂದ ಜನರ ಸಮಸ್ಯೆ, ಅಭಿವೃದ್ಧಿಗೆ ಸರಿಯಾದ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದರು.
ಸರ್ಕಾರ ಬಾಕಿ ಉಳಿಸಿಕೊಂಡಿರುವ 400 ಕೋಟಿ ರೂ. ಗ್ರಂಥಾಲಯ ಸೆಸ್ ಕೂಡಲೇ ಪಾವತಿಸುವ ಮೂಲಕ ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಓದುಗರ ಸಂಖ್ಯೆ ಹೆಚ್ಚಳಕ್ಕೆ ಗ್ರಂಥಾಲಯಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ಗ್ರಂಥಾಲಯಗಳಿಗೆ ಹೊಸ ಪುಸ್ತಕ ಮತ್ತು ಗ್ರಂಥಾಲಯಗಳ ಅವಶ್ಯವಿದೆ. ಗ್ರಂಥಾಲಯಗಳ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಬಾಕಿ ಉಳಿಸಿಕೊಂಡಿರುವ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ಜ್ಞಾನಭಾರತಿ ವ್ಯಾಪ್ತಿಯಲ್ಲಿ 1 ಎಕರೆ ಭೂಮಿ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಲಭ್ಯವಾಗಿದ್ದು, ದಕ್ಷಿಣ ಭಾಗದ 6 ರಾಜ್ಯಗಳ ಸಾಹಿತ್ಯ ಚಟುವಟಿಕೆಗಳಿಗೆ ಪ್ರಾದೇಶಿಕ ಕೇಂದ್ರ ವೇದಿಕೆಯಾಗಲಿದೆ. ಆದರಂತೆ ಶೀಘ್ರದಲ್ಲಿಯೇ ಪ್ರಾದೇಶಿಕ ಕಚೇರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ತಂತ್ರಜ್ಞಾನ ಬೆಳವಣಿಗೆಯಿಂದ ಬರವಣಿಗೆ ನಶಿಸುತ್ತಿದೆ. ಪ್ರಸ್ತುತ ಓದುಗರು ಮೊಬೈಲ್ ಮೂಲಕವೇ ಪುಸ್ತಕ ಓದುತ್ತಿದ್ದು, ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ. ತಾಂತ್ರಿಕತೆಯೊಂದಿಗೆ ಜನ ಸಂಪರ್ಕ ಬೆಳೆಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.
ಸಿರಿಗನ್ನಡ ಪ್ರಕಾಶನದ ಕೆ.ರಾಜಕುಮಾರ್, ಸೀತಾ ಬುಕ್ ಸೆಂಟರ್‌ನ ಶಾಂಭವಿ ಪ್ರಭುರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಸಾಹಿತ್ಯ ಅಕಾಡೆಮಿಯ ದಕ್ಷಿಣ ಪ್ರಾದೇಶಿಕ ಕೇಂದ್ರ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ನವ ಕರ್ನಾಟಕ ಪ್ರಕಾಶನದ ರಮೇಶ್ ಉಡುಪ ಸೇರಿ ಪ್ರಮುಖರು ಹಾಜರಿದ್ದರು.