ಶಹಾಬಾದ: ನಾನು ದೇಶದ ಕಾವಲುಗಾರ ಎನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿಲ್ಲ.ಅದು ದೇಶಾದ್ಯಂತ ಆಂದೋಲನವಾಗಿ ಮಾರ್ಪಟ್ಟಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹೇಳಿದರು.
ರವಿವಾರ ನಗರದ ಶ್ರೀ ರಾಮ ವೃತ್ತದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ನಾನು ಚೌಕಿದಾರ್ ಅಭಿಯಾನದಲ್ಲಿ ಬೂತ್ ಸಂಖ್ಯೆ 244, 248, 249 ಹಾಗೂ 253ವರೆಗೆ ಶಕ್ತಿ ಕೇಂದ್ರದ ಪ್ರಮುಖರನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಿಯಂತವರು ಉನ್ನತ ಸ್ಥಾನದಲ್ಲಿದ್ದರೂ ನಾನು ಚೌಕಿದಾರ ಎನ್ನುವ ಮೂಲಕ ದೇಶಾದ್ಯಂತ ಕಾವಲು
ಕಾಯುವ ಕಾರ್ಯ ನಿರ್ವಹಿಸುತ್ತಿರುವ ಸಾಮಾನ್ಯರೊಂದಿಗೆ ಮೋದಿ ಅವರು ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ಆದರೆ ಚೌಕಿದಾರ್ ಚೋರ ಹೈ ಎನ್ನುವ ಮೂಲಕ ಕಾಂಗ್ರೆಸ್ ಪಕ್ಷದ ಕಳ್ಳರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು.
ಹಿಂದಿನ ಯುಪಿಎ ಸರ್ಕಾರದಲ್ಲಿ ಆಗುತ್ತಿದ್ದ ಸೋರಿಕೆ ತಡೆಗಟ್ಟುವ ಮೂಲಕ ಕಾವಲುಗಾರರ ಕೆಲಸವನ್ನು ಮೋದಿಯವರು ಮಾಡುವುದು ಪ್ರತಿಪಕ್ಷಗಳಿಗೆ ಬೇಕಾಗಿಲ್ಲ. ಮೋದಿ ಮತ್ತೆ ಆಯ್ಕೆಯಾದರೆ ಕಳೆದ ಐದಾರು ದಶಕಗಳ ಕಾಲ ದೇಶವನ್ನು ಆಳಿ, ಅಕ್ರಮ ಎಸಗಿದವರಿಗೆ ಸಿಕ್ಕಿ ಬೀಳುವ ಅಪಾಯ ಇರುವುದರಿಂದ ನಿದ್ರೆ ಬರುತ್ತಿಲ್ಲ ಎಂದು ಹೇಳಿದರು.
ಈ ಬಾರಿ ಅತಿ ಹೆಚ್ಚು ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಅದಕ್ಕಾಗಿ
ಈ ಚುನಾವಣೆಯಲ್ಲಿ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ನಿರ್ವಹಿಸಬೇಕಾಗಿದೆ. ಕಲಬುರಗಿ ಲೋಕಸಭೆ ಚುನಾವಣೆಯಿಂದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ್ ಸ್ಪರ್ಧಿಸುತ್ತಿದ್ದು ಅವರನ್ನು ಭಾರಿ ಮತಗಳಿಂದ ಗೆಲ್ಲಿಸಲು, ಮತದಾರರ ಮನೆಮನೆಗೆ ತೆರಳಿ ಮನವೊಲಿಸಿ ಎಂದರು.
ಕಲಬುರಗಿ ಗ್ರಾಮೀಣ ಜಿಲ್ಲಾ ಸ್ಲಂ- ಮೋರ್ಚಾ ಅಧ್ಯಕ್ಷ ಅಶೋಕ ಹೂಗಾರ, ಬಿಜೆಪಿ ಅಧ್ಯಕ್ಷ ಸುಭಾಷ ಜಾಪೂರ,ಶಕ್ತಿ
ಕೇಂದ್ರದ ಪ್ರಮುಖರಾದ ಚಂದ್ರಕಾಂತ ಗೊಬ್ಬೂರಕರ್, ಭೀಮರಾವ್ ಸಾಳುಂಕೆ, ಕನಕಪ್ಪ ದಂಡಗುಲಕರ್, ಬಸವರಾಜ ಬಿರಾದಾರ, ಸಿದ್ರಾಮ ಕುಸಾಳೆ, ಶಿವಕಾಂತ ಮಾನೆ, ಸಾಬಣ್ಣ ನಾಟೇಕಾರ, ತಿಮ್ಮಣ್ಣ ಕುರುಡೆಕರ್, ಮೋಹನ ಘಂಟಿ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.