Advertisement

“ಹಿರಿಯರ ಆದರ್ಶದ ನಡೆಯೇ ಮಕ್ಕಳಿಗೆ ಪ್ರೇರಕ ಶಕ್ತಿ’

01:30 AM Jan 17, 2019 | Harsha Rao |

ಉಡುಪಿ:  ನಮ್ಮ ಮಕ್ಕಳು ಗೌರವಯುತ ಜೀವನ ನಡೆಸುವ ಹಾಗೂ  ದೇಶಭಕ್ತಿ, ಧರ್ಮ ನಿಷ್ಠರಾಗಿ ಭಾರತೀಯ ಜೀವನ ಮೌಲ್ಯ ಗಳನ್ನು ತುಂಬಿಕೊಂಡು ಆದರ್ಶ ಪ್ರಾಯರಾಗುವಂತೆ ಅವರನ್ನು ರೂಪಿಸುವ ಜವಾಬ್ದಾರಿ ತಂದೆ – ತಾಯಿ, ಗುರು ಹಿರಿಯರ ಮೇಲಿದೆ. ನಮ್ಮ ಆದರ್ಶದ ನಡೆ ಮಕ್ಕಳಿಗೆ ಪ್ರೇರಕ ಶಕ್ತಿಯಾಗಿ ಉತ್ತಮ ಶಿಕ್ಷಣ ನೀಡುತ್ತದೆ ಎಂದು ಮಾತೃಪಿತೃ ವಂದನೆ ಅಭಿಯಾನ ಸಮಿತಿ ಸಂಚಾಲಕ ಸಂತೋಷ ಕೋಣಿ ಹೇಳಿದರು.

Advertisement

ಅವರು ಉಡುಪಿ ತಾಲೂಕಿನ ಬಾಳೆಕುದ್ರು ಹಂಗಾರಕಟ್ಟೆಯ ಶ್ರೀಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ಮಾತೃಪಿತೃ ವಂದನೆ ಕಾರ್ಯ ಕ್ರಮದಲ್ಲಿ ಮಾತನಾಡಿದರು.

ತ್ರಿವರ್ಣ ಕಲಾ ಗ್ಯಾಲರಿಯಲ್ಲಿ  ತರಗತಿಯ ಕಲಾ ವಿದ್ಯಾರ್ಥಿಗಳ ತಂದೆ ತಾಯಿಯಂದಿರರಿಗೆ ಅವರ ಮಕ್ಕಳು ಪಾದಗಳಿಗೆ ಪುಷ್ಪ ನಮನ ಮಾಡಿ, ಹೂವು ಹಣ್ಣು ನೀಡಿ, ಆರತಿ ಬೆಳಗಿದರು. ಮಕ್ಕಳೇ ಹೆತ್ತವರಿಗೆ ಶಾಲು ಹೊದಿಸಿ ಗೌರವಿಸಿದರು. ಪರಿಸರದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ಸುಮಾರು 130ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉಡುಪಿ ಜಿಲ್ಲಾ  ಸತ್ಯಸಾಯಿ ಸೇವಾ ಸಂಸ್ಥೆ  ಗ್ರಾಮ ಸಂಘಟನೆಯ ಸಂಯೋಜಕ‌ ಡಿ. ವಿ. ಶೆಟ್ಟಿಗಾರ್‌ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆರ್ಡೂರಿನ ಶ್ರೀ ಕೃಷ್ಣ ಕ್ಲಿನಿಕ್‌ ವೈದ್ಯ ಡಾ| ಜಿ. ಎಸ್‌. ಕೆ. ಭಟ್‌, ತ್ರಿವರ್ಣ ಕಲಾ ಕೇಂದ್ರದ ಶಿಕ್ಷಕಿಯರಾದ ಪವಿತ್ರಾ ಸಿ., ನಯನಾ ಬಿ., ಕಲಾವಿದ ಪ್ರಸಾದ್‌ ಆರ್‌. ಇನ್ನಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸತ್ಯಸಾಯಿ ಸೇವಾ ಸಂಸ್ಥೆ ಶೈಕ್ಷಣಿಕ ವಿಭಾಗದ ಸಂಯೋಜಕಿ ಶಶಿಕಲಾ ಬಿಜೂರು ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಮಣಿಪಾಲದ ತ್ರಿವರ್ಣ ಕಲಾ ಕೇಂದ್ರದ ಕಲಾ ನಿರ್ದೇಶಕ ಹರೀಶ್‌ ಸಾಗಾ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next