Advertisement

ತಾಯಿಯ ಕಣ್ಣೀರಿಗೂ ಕರಗದ ಉಗ್ರ ಮನಸ್ಸು

06:00 AM Sep 23, 2018 | Team Udayavani |

ಶ್ರೀನಗರ: “ದಯವಿಟ್ಟು, ನನ್ನ ಮಗನನ್ನು ಕೊಲ್ಲಬೇಡಿ. ನನಗಿರುವುದು ಅವನೊಬ್ಬ. ಮಧ್ಯಾಹ್ನದ ಪ್ರಾರ್ಥನೆ ಮುಗಿದೊಡನೆ ಅವನಿಂದ ರಾಜೀನಾಮೆ ಕೊಡಿಸುತ್ತೇನೆ.’ ಹೀಗೆಂದು 70 ವರ್ಷದ ವೃದ್ಧೆ ಕಣ್ಣೀರಿಡುತ್ತಾ, ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಉಗ್ರರ ಕಲ್ಲುಹೃದಯ ಕರಗಲೇ ಇಲ್ಲ. ಶುಕ್ರವಾರ ಜಮ್ಮು- ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿ, ಕೊಂದು ಹಾಕಿದ ಉಗ್ರರ ಬಳಿ ವಯೋವೃದ್ಧೆಯು ತನ್ನ ಮಗನ ಪ್ರಾಣಭಿಕ್ಷೆ ಬೇಡುತ್ತಿದ್ದ ಪರಿ, ಆ ತಾಯಿಹೃದಯದ ಕೂಗನ್ನು ಕಿವಿಗೆ ಹಾಕಿಕೊಳ್ಳದೇ ಉಗ್ರರು ಮೆರೆದ ಅಟ್ಟಹಾಸಕ್ಕೆ ಇಡೀ ಕಣಿವೆ ರಾಜ್ಯವೇ ಕಣ್ಣೀರಾಗಿದೆ.

Advertisement

 ಅಪಹರಣಕ್ಕೀಡಾದ ಪೊಲೀಸ್‌ ಸಿಬ್ಬಂದಿ ನಿಸಾರ್‌ ಅಹ್ಮದ್‌ 70ರ ವೃದ್ಧೆ ಸಾಯಿದಾ ಬೇಗಂ ಅವರ ಏಕೈಕ ಪುತ್ರ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮನೆಯೊಳಗೆ ನುಗ್ಗಿದ ಉಗ್ರರು, ನಾಸೀರ್‌ರನ್ನು ಅಪಹರಿಸಿ ಕರೆದೊಯ್ದರು. ನಿಸಾರ್‌ ತಾಯಿ ಸಾಯಿದಾ ಬೇಗಂ, ಮಧ್ಯಾಹ್ನದ ಪ್ರಾರ್ಥನೆ ಮುಗಿ ದೊಡನೆ ಸಾರ್ವಜನಿಕ ವಾಗಿ ರಾಜೀನಾಮೆ ಘೋಷಣೆ ಮಾಡಿಸುತ್ತೇವೆ. ಅವನು ನನ್ನ ಒಬ್ಬನೇ ಮಗ. ಈ ಕೆಲಸ ಹೋದರೂ ಚಿಂತೆಯಿಲ್ಲ. ಅವನು ಬದುಕಬೇಕು. ದಯವಿಟ್ಟು ಅವನನ್ನು ಕೊಲ್ಲ ಬೇಡಿ ಎಂದು ಕೈಮುಗಿದು ಬೇಡಿಕೊಂಡರೂ ಉಗ್ರರು, ನಾಸೀರ್‌ನನ್ನು ಅಪಹರಿಸಿದ ಅರ್ಧ ಗಂಟೆಯಲ್ಲೇ ಗುಂಡಿಕ್ಕಿ ಹತ್ಯೆಗೈದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಪಾಕ್‌ ಪಿಎಂ ಉದ್ಧಟತನ: ಪೊಲೀಸರ ಹತ್ಯೆ ಹಿನ್ನೆಲೆ ಭಾರತ-ಪಾಕ್‌ ಮಾತು ಕತೆ ಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಉದ್ಧಟತನ ಮೆರೆದಿದ್ದಾರೆ. ಶನಿವಾರ ಟ್ವೀಟ್‌ ಮಾಡಿರುವ ಅವರು, “ಮಾತುಕತೆ ಕುರಿತು ಭಾರತವು ಅಹಂಕಾರದ ಮತ್ತು ನಕಾರಾತ್ಮಕ ಪ್ರತಿಕ್ರಿಯೆ ನೀಡಿರುವುದು ನಿರಾಸೆಯಾಗಿದೆ. ದೊಡ್ಡ ಹುದ್ದೆಗಳಲ್ಲಿ ಕುಳಿತ ಸಣ್ಣತನದ ವ್ಯಕ್ತಿಗಳು ವಿಶಾಲವಾಗಿ ಆಲೋಚಿಸುವಲ್ಲಿ ವಿಫ‌ಲರಾಗುವುದನ್ನು ನಾನು ಕಂಡಿದ್ದೇನೆ’ ಎಂದು ಹೇಳಿದ್ದಾರೆ.

ಪ್ರತ್ಯುತ್ತರದ‌ ಸಮಯ ಬಂದಿದೆ
ಜಮ್ಮು ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ಪೈಶಾಚಿಕ ಕೃತ್ಯಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಮಯ ಬಂದಿದೆ ಎಂದು ಸೇನಾ ಮುಖ್ಯಸ್ಥ ಜ.ಬಿಪಿನ್‌ ರಾವತ್‌ ಹೇಳಿದ್ದಾರೆ. ಉಗ್ರರು, ಪಾಕ್‌ ಸೇನೆಯ ಕುಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕಿದೆ. ನಾವು ಅದೇ ರೀತಿ ಕುಕೃತ್ಯ ನಡೆಸುವುದಿಲ್ಲ. ಆದರೆ ಅವರೂ ಇದೇ ರೀತಿಯ ನೋವನ್ನು ಅನುಭವಿಸುವಂತೆ ಮಾಡುತ್ತೇವೆ ಎಂದಿದ್ದಾರೆ. ಮಾತುಕತೆ ಮತ್ತು ಉಗ್ರ ಚಟುವಟಿಕೆ ಒಟ್ಟಿಗೆ ನಡೆಯಲು ಬಿಡುವುದಿಲ್ಲ ಎಂಬ ನಮ್ಮ ಸರ್ಕಾರದ ನಿಲುವು ಸ್ಪಷ್ಟ. ಉಗ್ರವಾದವನ್ನು ಪಾಕಿಸ್ತಾನ ಮೊದಲು ಮಟ್ಟಹಾಕಬೇಕಿದೆ ಎಂದು ಹೇಳಿದ್ದಾರೆ.
ಯುದ್ಧಕ್ಕೆ ಸಿದ್ಧ ಎಂದ ಪಾಕ್‌: ನಾವು ಯುದ್ಧಕ್ಕೆ ಸಿದ್ಧವಿದ್ದೇವೆ. ಆದರೆ ಶಾಂತಿಯ ದಾರಿ ಹಿಡಿದಿದ್ದೇವೆ. ಅಣ್ವಸ್ತ್ರ ಹೊಂದಿರುವ ರಾಷ್ಟ್ರವನ್ನು ಕೆಣಕುವ ಕೆಲಸಕ್ಕೆ ಭಾರತ ಕೈಹಾಕಬಾರದು ಎಂದು ಪಾಕ್‌ ಸೇನಾ ವಿಭಾಗದ ಮೇಜರ್‌ ಜ. ಅಸಿಫ್ ಗಫ‌ೂರ್‌ ಹೇಳಿದ್ದಾರೆ. ದೀರ್ಘ‌ಕಾಲದಿಂದಲೂ ನಾವು ಉಗ್ರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದೇವೆ. ಶಾಂತಿಯ ಬೆಲೆ ನಮಗೆ ಗೊತ್ತಿದೆ ಎಂದಿದ್ದಾರೆ.

ಸೇನೆಯ ಆಣತಿಯಂತೆ ಪ್ರಧಾನಿ ಹುದ್ದೆಯಲ್ಲಿ ಕುಳಿತಿರುವ ಇಮ್ರಾನ್‌ ಖಾನ್‌ರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ನಮ್ಮ ಯೋಧರ ಹತ್ಯೆ ನಿಲ್ಲುವವರೆಗೂ ಪಾಕಿಸ್ತಾನದ ಜೊತೆ ನಾವು ಮಾತುಕತೆ ನಡೆಸುವುದಿಲ್ಲ.
ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ
 

Advertisement
Advertisement

Udayavani is now on Telegram. Click here to join our channel and stay updated with the latest news.

Next