Advertisement

ಕ್ರೀಡಾಕ್ಷೇತ್ರದ ಬಹುಮುಖ ಪ್ರತಿಭೆ ಮಾಣಿಯ ಅನೀಶ್‌ ಆಳ್ವ

12:39 PM Nov 03, 2019 | Team Udayavani |

ಸಾಧಿಸಲು ಹೊರಟವನ ನೆರಳನ್ನು ಹಿಡಿಯುವುದು ಸಹ ಸಾಧ್ಯವಾಗದ ಸಂಗತಿ. ಕಾರಣ ಆ ನೆರಳು ಅನೇಕ ನೋವು, ನಿಂದನೆ, ವೇದನೆಗಳನ್ನು ತಿಂದು ಬಲವಾಗಿರುತ್ತದೆ. ಕಲ್ಲು ಒಂದು ಸಾಧಾರಣ ಕಲ್ಲಾಗಿಯೇ ಉಳಿದು ಬಿಡುತ್ತಿದ್ದರೆ ಅದಕ್ಕೆ ಇಲ್ಲಿ ಬೆಲೆಯೇ ಇರುತ್ತಿರಲಿಲ್ಲ. ಅದುವೇ ಸರಿಯಾದ ಕೆತ್ತನೆ, ರೂಪ, ಆಕಾರ ಪಡೆದು ಒಂದು ಅರ್ಥವುಳ್ಳ ಸುಂದರವಾದ ಶಿಲೆಯಾದರೆ ಅದರಲ್ಲೇನೋ ಇದೆ ಎನ್ನುವ ಕುತೂಹಲ ಬರುತ್ತದೆ. ಇದೇ ರೀತಿ ಕ್ರಿಕೆಟ್‌, ಫ‌ುಟ್ಬಾಲ್, ಕಬಡ್ಡಿ ಸೇರಿದಂತೆ ಹಲವು ಕ್ರೀಡೆಗಳಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಅನೀಶ್‌ ಆಳ್ವ.

Advertisement

ಪ್ರತಿಯೊಂದು ವಿಷಯದಲ್ಲೂ ಸಹ ಛಲತೊಟ್ಟು ಗೆಲ್ಲುವ ಈ ಛಲಗಾರನಿಗೆ ಎಲ್ಲ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಳ್ಳುವುದರಲ್ಲಿ ಏನೋ ಆಸಕ್ತಿ. ಆ್ಯಕ್ಸಿಸ್‌ ಬ್ಯಾಂಕಿನ ರಿಲೇಶನ್‌ಶಿಪ್‌ ಅಧಿಕಾರಿಯಾಗಿ ವೃತ್ತಿಯಲ್ಲಿರುವ ಅವರು ತನ್ನ ಬಾಲ್ಯದಿಂದಲೇ ಕ್ರೀಡಾಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಮಾತ್ರವಲ್ಲದೆ ಅವರನ್ನು ಕ್ರೀಡಾಲೋಕಕ್ಕೆ ಪರಿಚಯಿಸಿದ್ದು ಪಿ.ಟಿ. ಗುರು ದಿನಕರ್‌ ಪೂಜಾರಿ. ಮುಂದೆ ಅವರ ಮಾರ್ಗದರ್ಶನದಲ್ಲಿ ಎರಡು ಬಾರಿ ರಾಜ್ಯಮಟ್ಟದ ತ್ರೋಬಾಲ್‌ ಹಾಗೂ ಜಿಲ್ಲಾ ಮಟ್ಟದ ಲಾಂಗ್‌ಜಂಪ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯ ತ್ರೋಬಾಲ್‌ ತಂಡದ ನಾಯಕನಾದರು. ಸಂತ ಫಿಲೋಮಿನಾ ಕಾಲೇಜಿನ ಎಲಿಯಾಸ್‌ ಪಿಂಟೋ ಅವರ ತರಬೇತಿಯಿಂದ ಕ್ರಿಕೆಟ್‌ ಲೋಕದಲ್ಲಿ ಮಿಂಚಿದ ಸಾಧನೆ ಮಾಡಿದರು.

ಬೆಂಗಳೂರಿನಲ್ಲಿ ನಡೆದ ಅನೇಕ ಪಂದ್ಯಾವಳಿಯಲ್ಲಿ ಭಾಗವಹಿಸಿ ಸಂತ ಫಿಲೋಮಿನಾ ಪಿಯು ಕಾಲೇಜಿನ ಕ್ರಿಕೆಟ್‌ ತಂಡದ ಲೀಡರ್‌ ಆದರು. ಸೌತ್‌ ಝೋನ್‌ ಇಂಟರ್‌ ವಿವಿ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಮೊದಲ ಬಾರಿಗೆ ವಿಶಾಖಪಟ್ಟಣಂ, ಹೈದರಾಬಾದ್‌ ಹಾಗೂ ಎರಡನೇ ಬಾರಿ ಶಿವಮೊಗ್ಗ. ಮಂಗಳೂರು ವಿವಿ ಇಂಟರ್‌ ಕಾಲೇಜ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೆ ಎರಡು ಬಾರಿ ಗೆಲುವು ಸಾಧಿಸಿದ್ದರು. 2018-19ನೇ ಸಾಲಿನ ಮಂಗಳೂರು ವಿವಿ ಇಂಟರ್‌ ಕಾಲೇಜ್‌ ಕ್ರಿಕೆಟ್‌ ಟೂರ್ನಿಯಲ್ಲಿ ‘ದಿ ಬೆಸ್ಟ್‌ ಬ್ಯಾಟ್ಸ್‌ ಮನ್‌ ಅವಾರ್ಡ್‌ ಪಡೆದರು. ಅ-16, ಅ-19 ಹಾಗೂ ಅ-23ರ ಮಂಗಳೂರು ವಲಯವನ್ನು ಪ್ರತಿನಿಧಿಸಿದ್ದಾರೆ.

ಶತಕ ದಾಟಿದ ಪ್ರಶಸ್ತಿ!
ಮಂಗಳೂರು ಪ್ರೀಮಿಯರ್‌ ಲೀಗ್‌ 2016ನೇ ಸಾಲಿನಲ್ಲಿ ಓಶಿಯನ್‌ ಶಾರ್ಕ್ಸ್ ಕುಡ್ಲ ತಂಡವನ್ನು ಪ್ರತಿನಿಧಿಸಿ ಆಡಿದ ಪಂದ್ಯದಲ್ಲಿ ರನ್ನರ್ ಆಗುವುದರ ಜತೆಗೆ ಮಂಗಳೂರು ಯುನೈಟೆಡ್‌ ತಂಡವನ್ನು ಪ್ರತಿನಿಧಿಸಿ ಪಂದ್ಯದಲ್ಲಿ ಗೆದ್ದು ಮತ್ತೂಂದು ಬಾರಿ ಕ್ರಿಕೆಟ್‌ ಮೇಲಿನ ತನ್ನ ಪ್ರತಿಭೆಯನ್ನು ತೋರಿದ್ದಾರೆ. ಅಲ್ಲದೆ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಹುಮಾನಗಳನ್ನು ತನ್ನ ಮುಡಿಗೇರಿಸಿಕೊಂಡ ಹೆಮ್ಮೆ ಅವರದು.

ಗೆಲುವಿನ ಆಶಾವಾದಿಯಾದ ಅನೀಶ್‌ಗೆ
ಕೇವಲ ಕ್ರೀಡೆಗಳು ಮಾತ್ರ ಒಲಿದಿರಲಿಲ್ಲ, ಪಠ್ಯೇತರ ವಿಷಯಗಳಲ್ಲೂ ಸಹ ಇವರು ಸದಾ ಮುಂದು. ಬಾಲವಿಕಾಸ್‌ ಆಂಗ್ಲ ಮಾಧ್ಯಮ ಶಾಲೆ, ಮಾಣಿಯಿಂದ ದಿ ಸ್ಟೂಡೆಂಟ್‌ ಆಫ್ ದ ಇಯರ್‌ ಅವಾರ್ಡ್‌ಗೆ ಪಾತ್ರರಾಗಿದ್ದಾರೆ ಎಂಬುದು ಇನ್ನೊಂದು ಹೆಮ್ಮೆಯ ವಿಚಾರ. ಕ್ರೀಡೆಯ ಜತೆ ಓದನ್ನೂ ಸರಿದೂಗಿಸಿಕೊಂಡು ಮುಂದೆ ಹೋಗಬೇಕು ಎನ್ನುವುದಕ್ಕೆ ಅನೀಶ್‌ ಒಂದು ಉತ್ತಮ ಉದಾಹರಣೆ ಎಂದೂ ಹೇಳಬಹುದು.

Advertisement

ಸಾಧಕರೇ ಆದರ್ಶ ವ್ಯಕ್ತಿಗಳು
ನಮ್ಮ ದೇಶವನ್ನು ಪ್ರತಿನಿಧಿಸಿ ನಾಡಿಗೆ ಒಳ್ಳೆ ಹೆಸರನ್ನು ತರುವಂತಹ ಸಾಧನೆ ಮಾಡಿದ ಎಲ್ಲ ಕ್ರೀಡಾಪಟುಗಳು ನನ್ನ ರೋಲ್‌ ಮಾಡೆಲ್‌ ಎಂದು ಹೇಳುವ ಅನೀಶ್‌, ಕಠಿಣ ಶ್ರಮದಿಂದ ಯಶಸ್ಸನ್ನು ಕಾಣಲು ಸಾಧ್ಯ ಎನ್ನುತ್ತಾರೆ. ಮಗನ ಆಸಕ್ತಿಗೆ ಸರಿಯಾಗಿ ತಂದೆ, ತಾಯಿ ಹಾಗೂ ತಂಗಿ ನೀಡುತ್ತಿದ್ದ ಸಹಕಾರ ಇಂದು ಅನೀಶ್‌ನ ಯಶಸ್ವಿ ಬದುಕಿಗೆ ಕಾರಣವಾಯಿತು. ಸದ್ಯಕ್ಕೆ ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ರಿಲೇಶನ್‌ಶಿಪ್‌ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿರುವ ಅನೀಶ್‌, ಕೊಂಚ ಸಮಯಕ್ಕೆ ಕ್ರೀಡಾಸಕ್ತಿಗೆ ಬ್ರೇಕ್‌ ಕೊಟ್ಟಿದ್ದಾರೆ. ಒಬ್ಬ ಒಳ್ಳೆಯ ನಾಗರಿಕನಾಗಿ ತನ್ನ ಸೇವೆ ಈ ನಾಡಿಗೆ ಅರ್ಪಿಸಬೇಕು ಎನ್ನುವ ಅವರ ಆಸೆ ನೆರವೇರಲಿ.

ಕೋಚಿಂಗ್‌ ಕ್ಯಾಂಪ್‌ಗೆ ಆಯ್ಕೆ
ಪುತ್ತೂರಿನ ಆರ್‌ಸಿ ಎಎಸ್‌ಸಿಎ ಕ್ರಿಕೆಟ್‌ ಕೋಚಿಂಗ್‌ ಕ್ಯಾಂಪ್‌ಗೆ ಆಯ್ಕೆಯಾದ ಅನೀಶ್‌ಗೆ ಅನಂತರದ ದಿನಗಳಲ್ಲಿ ಕಾದಿದ್ದು ಕ್ರಿಕೆಟ್‌ನಲ್ಲಿ ಗೆಲುವಿನ ಸಂಭ್ರಮ. ಅದಕ್ಕಾಗಿ ಕಠಿಣ ಶ್ರಮ ವಹಿಸಿದ್ದರ ಪರಿಣಾಮ ದಿ ಬೆಸ್ಟ್ ಬೌಲರ್‌ ಅವಾರ್ಡ್‌ಗೆ ಅರ್ಹರಾದರು. ಆದರೆ ಕಠಿನ ಅಭ್ಯಾಸದ ವೇಳೆ ತಗುಲಿದ ಗಂಭೀರ ಗಾಯಗಳಿಂದಾಗಿ ಕೋಚ್‌ ಸಾಮ್ಯುವೆಲ್‌ ಜಯರಾಜ್‌, ನಿತಿನ್‌ ಮುಲ್ಕಿ ಹಾಗೂ ಪ್ರಕಾಶ್‌ ಡಿ’ಸೋಜಾ ಅವರ ಸಹಕಾರದೊಂದಿಗೆ ಬೌಲಿಂಗ್‌ ಬಿಟ್ಟು ಬ್ಯಾಟಿಂಗ್‌ನತ್ತ ತನ್ನ ಗಮನ ಕೇಂದ್ರೀಕರಿಸಬೇಕಾಯಿತು.

-  ಶೋಭಿತಾ ಮಿಂಚಿಪದವು

Advertisement

Udayavani is now on Telegram. Click here to join our channel and stay updated with the latest news.

Next