Advertisement

ಬದುಕಿನ ಬಹುಮುಖ್ಯ ಅಂಗವೇ ಸಾಹಿತ್ಯ

12:39 PM Mar 06, 2017 | Team Udayavani |

ದಾವಣಗೆರೆ: ಸಾಹಿತ್ಯದ ಶಕ್ತಿ, ಸಾಹಿತ್ಯ ಜನರಿಗೆ ತಲುಪಬೇಕಾದರೆ ಸಾಹಿತ್ಯ ಸಮ್ಮೇಳನಗಳಿಂದ ಮಾತ್ರ ಸಾಧ್ಯ ಎಂದು ದಾವಣಗೆರೆ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ|ಎಚ್‌.ಎಸ್‌. ಹರಿಶಂಕರ್‌ ಅಭಿಪ್ರಾಯಪಟ್ಟಿದ್ದಾರೆ. 

Advertisement

ಭಾನುವಾರ ತಾಲೂಕಿನ ಹದಡಿ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಡಾ| ನಾ. ಲೋಕೇಶ್‌ ಒಡೆಯರ್‌ರಿಂದ ಸಾಹಿತ್ಯ ಪರಿಷತ್ತಿನ ಧ್ವಜ ಸೀಕರಿಸಿದ ನಂತರ ಮಾತನಾಡಿದರು.

ಬಹು ಮಂದಿ ಟೀಕಾಕಾರರು ಸಾಹಿತ್ಯ ಸಮ್ಮೇಳನಗಳನ್ನು ಜಾತ್ರೆ ಎಂದು ಹೀಯಾಳಿಸುವುದುಂಟು. ಅಂತಹವರಿಗೆ ಜಾತ್ರೆಯ ಮಹತ್ವ ತಿಳಿದಿಲ್ಲ. ಹಿಂದಿನ ಮಹತ್ವ ತಿಳಿದಿದ್ದ ನಮಗೆ ಆ ಜಾತ್ರೆಗಳು ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾಗಿದ್ದವು. ಮಾನವನ ಬದುಕಿನ ಬಹುಮುಖ್ಯ ಅಂಗವೇ ಸಾಹಿತ್ಯ.

ಸಾಹಿತ್ಯ ಕೃತಿಗಳು ಮನುಷ್ಯನನ್ನು ಸಂಸ್ಕಾರಗೊಳಿಸುವಂತಹವು ಎಂದರು. ಹಿಂದಿನ ಕಾಲದಲ್ಲಿ ಪ್ರತಿ ಹಳ್ಳಿಹಳ್ಳಿಯಲ್ಲೂರಾಮಾಯಣ, ದೇವಿಪುರಾಣ, ಶನಿ ಮಹಾತೆ ಪುರಾಣ, ಭಾರತ ವಾಚನಗಳನ್ನು ಗುಡಿ, ಊರಮುಂದಣ ಅರಳೀಮರದ ಕಟ್ಟೆಯ ಮೇಲೆ ಕುಳಿತು ಕೇಳುತ್ತಿದ್ದರು. ಮನಸ್ಸಿಗೆ ಧರ್ಮಸಂಕಟ ಉಂಟಾದಾಗ, ಜೀವನದಲ್ಲಿ ಜಿಗುಪ್ಸೆ ಉಂಟಾದಾಗ ಸಾಹಿತ್ಯದ ಮೊರೆಹೋಗುತ್ತಿದ್ದರು ಎಂದು ಹೇಳಿದರು. 

ಇಂದು ಅನೇಕ ಸಾಹಿತ್ಯ ಸಮ್ಮೇಳನ,ವಿಚಾರಗೋಷ್ಠಿ, ಕವಿಗೋಷ್ಠಿ,ನಡೆದರೂ ಕನ್ನಡದ ಭವಿಷ್ಯ ಅತಂತ್ರವಾಗಿದೆ. ಕನ್ನಡ ನಾಡಿನ ನೆಲ, ಜಲಗಳು ಅನ್ಯಭಾಷಿಕರ ಸ್ವತ್ತಾಗುತ್ತಿವೆ. ಇದಕ್ಕೆ ಕಾರಣ ಒಂದು ಕಾಲದಲ್ಲಿ ಅಭಿಮಾನಧನರಾಗಿದ್ದ ನಾವು ಈಗ ಅಭಿಮಾನ ಶೂನ್ಯರಾಗಿದ್ದೇವೆ. ವಾಸ್ತವದಲ್ಲಿ ಕನ್ನಡ ಭಾಷೆ ಭಾರತದ ಅತೀ ಪ್ರಾಚೀನ ಭಾಷೆಗಳಲ್ಲೊಂದು. 

Advertisement

ಅದಕ್ಕೆ 2000 ವರ್ಷಗಳ ಇತಿಹಾಸ ಇದೆ. ಆದರೆ, ಇಂದು ನಾವು ಮರಾಠಿ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷಿಕರು ನಮ್ಮ ತಲೆ ಮೇಲೆ ಕುಳಿತು ನಮ್ಮನ್ನು ಹೊಸಕಿಹಾಕುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ನಮ್ಮ ಭಾಷೆ ಅತ್ಯಂತ ಶ್ರೀಮಂತವಾಗಿದೆ. ಇದೀಗ ಮೊಬೈಲ್‌, ಕಂಪ್ಯೂಟರ್‌ಗಳಿಗೂ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಿದೆ.

ಆದರೂ ನಾವು ನಮ್ಮ ಭಾಷೆಯ ಕುರಿತು ಅಸಡ್ಡೆ ಮಾಡುತ್ತಿರುವುದು ಏಕೆ? ಎಂಬುದರ  ಕುರಿತು ಪದೇ ಪದೇ ಚಿಂತಿಸಬೇಕು.ಮಕ್ಕಳಿಗೆ ಬಲವಂತವಾಗಿ ಇಂಗ್ಲಿಷ್‌ ಕಲಿಸಬಾರದು. ಹಾಗೆ ಮಾಡುವುದರಿಂದ ನೀರೇ ಇಳಿಯದ ಗಂಟಲಿಗೆ ಕಡುಬು ತುರುಕಿದಂತೆ ಆಗುತ್ತದೆ.

ಹಾಗಾಗಿ ಮಕ್ಕಳಿಗೆ ಮೊದಲು ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಿಸಬೇಕು ಎಂದು ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಮ್ಮೇಳನ ಉದ್ಘಾಟಿಸಿದರು. ಹದಡಿ ಚಂದ್ರಗಿರಿ ಮಠದ ಸದ್ಗುರು ಪರಮಹಂಸ ಮುರಳೀಧರ ಸ್ವಾಮೀಜಿ ಸಾನ್ನಿಧ್ಯ, ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.

ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ ಕುರ್ಕಿ, ತಾಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಜಿಪಂ ಸದಸ್ಯ ಜಿ.ಸಿ. ನಿಂಗಪ್ಪ, ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌, ಉಪಾಧ್ಯಕ್ಷ ಎಂ.ಬಿ. ಹಾಲಪ್ಪ, ಹದಡಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಹಾಲೇಶಪ್ಪ, ಕೆಡಿಪಿ ಮಾಜಿ ಸದಸ್ಯ ಬಿ. ದಿಳ್ಳೆಪ್ಪ, ತಾಪಂ ಸದಸ್ಯ ಎಂ. ಮಂಜಪ್ಪ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next