ವಾಡಿ: ನಮಾಜ್ ಮತ್ತು ರೋಜಾ ರಂಜಾನ್ ಹಬ್ಬದಲ್ಲಿ ಪಾಲಿಸಲಾಗುವ ದಿನದ ಪ್ರಮುಖ ಆಚರಣೆಗಳು. ನಮಾಜ್ ನಡೆಯುವ ಮಸೀದಿ ಅಲ್ಲಾಹನ ಮನೆಯಾಗಿದ್ದು, ಅದರ ಪ್ರಗತಿ ಪ್ರತಿಯೊಬ್ಬ ಮುಸಲ್ಮಾನನ ಕರ್ತವ್ಯ ಎಂದು ಹೈದರಾಬಾದ ಜಾಮೀಯಾ ಮಸೀದಿಯ ಅಬ್ದುಲ್ ಸಾಜೀರ್ ಬಾರಿ ಹೇಳಿದರು.
ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ನಮಾಜ್ ಸಂದರ್ಭದಲ್ಲಿ ಧರ್ಮ ಉಪದೇಶ ನೀಡಿ ಅವರು ಮಾತನಾಡಿದರು. ಹಬ್ಬದ ದಿನಗಳಲ್ಲಿ ಚಂದ್ರ ಕಂಡಾಗಲೊಮ್ಮೆ ಖುರಾನ್ ಪುಸ್ತಕ ಹೊರ ತೆಗೆದರೆ ಸಾಲದು. ಪ್ರತಿದಿನವೂ ಖುರಾನ್ ಪಠಣ ಮಾಡಬೇಕು.
ಮಕ್ಕಳಿಗೆ ಕಡ್ಡಾಯವಾಗಿ ಮಸೀದಿಯ ಪಾಠಗಳ ಅಧ್ಯಯನಕ್ಕೆ ಕಳುಹಿಸಬೇಕು. ಯಾವುದೇ ಆಡಳಿತ ನಮ್ಮನ್ನು ರಕ್ಷಿಸುವುದಿಲ್ಲ. ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕಿದೆ. ಪರಸ್ಪರ ಕದನ ಇಸ್ಲಾಂ ಬೋಧನೆಯಲ್ಲ. ದುಷ್ಕೃತ್ಯ ಬಿಟ್ಟು ಬದುಕಬೇಕು ಎಂದು ವಿವರಿಸಿದರು. ಪಟ್ಟಣದ ಜಾಮೀಯಾ ಮಸೀದಿಯ ಅಬ್ದುಲ್ ಖಾಲೀದ್ ಮಾತನಾಡಿದರು.
ಎಸಿಸಿ ಮುಖ್ಯಸ್ಥರಾದ ಡಾ| ಎಸ್.ಬಿ. ಸಿಂಗ್, ಉದಯ ಪವಾರ, ಜಯಪ್ರಕಾಶ ಪವಾರ, ಸಿಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ಸಂತೋಷ ರಾಠೊಡ, ಕಾರ್ಮಿಕ ಸಂಘದ ಮುಖಂಡರಾದ ರಮೇಶ ಕಾರಬಾರಿ, ವಿಶಾಲ ನಂದೂರಕರ, ಠಾಕೂರ ರಾಥೋಡ ಹಾಗೂ ಅನುರಾಗ ದ್ವಿವೇದಿ ಅವರನ್ನು ಮುಸ್ಲಿಂ ಸಮಾಜದ ಅಧ್ಯಕ್ಷ ಮುಕುºಲ್ ಜಾನಿ ಸನ್ಮಾನಿಸಿದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಏಕಕಾಲದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದರು.
ಹಳಕರ್ಟಿ ದರ್ಗಾದ ಈದ್ಗಾ ಸೇರಿದಂತೆ ಕುಂದನೂರ, ಇಂಗಳಗಿ, ರಾವೂರ, ಕಮರವಾಡಿ, ಲಾಡ್ಲಾಪುರ, ಸನ್ನತಿ, ನಾಲವಾರ ಗ್ರಾಮಗಳಲ್ಲಿ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಂ ಮತ್ತು ಹಿಂದೂ ಬಂದುಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ವಿಶೇಷ ಸಿಹಿ ಖಾದ್ಯ ಸುರ್ಕುಂಭಾ ಸವಿದರು.