Advertisement

ಮಳೆಗಾಲ ಆರಂಭ ಬಿರುಸುಗೊಂಡಿದೆ ಕೃಷಿ ಚಟುವಟಿಕೆ

11:33 PM Jun 01, 2019 | mahesh |

ಇನ್ನೇನು ಮಳೆಗಾಲ ಆರಂಭವಾಗುತ್ತದೆ ಎನ್ನು ವಾಗ ಗ್ರಾಮೀಣ ಭಾಗದ ಕೃಷಿಕರು ಚುರುಕಾಗುತ್ತಾರೆ. ಮನೆಯ ಉಪಯೋಗಕ್ಕೆ ಬೇಕಾದ ಪರಿಕರಗಳ ಜೋಡಣೆಯ ಕೆಲಸ ಒಂದೆಡೆಯಾದರೆ ಮಳೆ ಸುರಿದ ಕೂಡಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇನ್ನೊಂದೆಡೆ.

Advertisement

ಇತರ ಎಲ್ಲಾ ಕೆಲಸಗಳು ಇದ್ದರೂ ಮಳೆಗಾಲದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮೀಣ ಕೃಷಿ ಜೀವನದ್ದು. ಮಳೆ ಆರಂಭವಾಗುವ ಮುನ್ಸೂಚನೆ ದೊರೆಯುತ್ತಿದ್ದಂತೆ ಗ್ರಾಮೀಣ ಭಾಗದ ಶ್ರಮಜೀವಿಗಳು ಕೊಂಚ ಸಮಯ ವ್ಯರ್ಥ ಮಾಡದೆ, ಕೃಷಿ ಚಟುವಟಿಕೆಗಳ ಕುರಿತಂತೆ ಅವರ ಕಾರ್ಯಗಳು ಸಾಗುತ್ತವೆ.

ಕೃಷಿ ಚಟುವಟಿಕೆಗಳಿಗೆ ಸಿದ್ಧತೆ
ಆರಂಭದ ಒಂದೆರಡು ಮಳೆ ಇಳೆಗೆ ತಂಪೆರೆಯುತ್ತಿದ್ದಂತೆ ಗ್ರಾಮೀಣ ಶ್ರಮಜೀವಿಗಳು ಕೃಷಿ ಚಟುವಟಿಕೆಗಳ ಸಿದ್ಧತೆಯೂ ಬಿರುಸುಗೊಳ್ಳುತ್ತದೆ. ಅಡಿಕೆ, ತೆಂಗಿನ ತೋಟವನ್ನು ಹೊಂದಿರುವ ಕೃಷಿಕರು ತೋಟದಲ್ಲಿರುವ ಕಣಿಗಳನ್ನು ಸ್ವತ್ಛಗೊಳಿಸಲು ಆರಂಭಿಸುತ್ತಾರೆ. ಹಿಂದೆ ಹತ್ತನಾವಧಿಯ ಸಂದರ್ಭದಲ್ಲಿ ಮಳೆ ಆರಂಭವಾಗುತ್ತಿದ್ದಾಗ ತೋಡಿನ ಬದಿಗಳಲ್ಲಿರುವ ತೆಂಗಿನ ಮರಗಳಿಂದ ಕಾಯಿಗಳು ಬಿದ್ದು ನೀರಿನೊಂದಿಗೆ ಹೋಗದಂತೆ ಮೊದಲೇ ಕಾಯಿಗಳನ್ನು ಕೀಳಿಸಲಾಗುತ್ತಿತ್ತು. ಆದರೆ ಈಗ ಪ್ರಕೃತಿಯ ವೈಪರೀತ್ಯದಿಂದ ವ್ಯತ್ಯಾಸವಾಗುವುದರಿಂದ ಮೇ ತಿಂಗಳ ಆರಂಭದಲ್ಲೇ ಮಾಡಿಸಬೇಕಾದ ಅನಿವಾರ್ಯತೆಯಿದೆ.

ಮನೆಯ ಅಂಗಣ ಸಿದ್ಧತೆ
ಮಳೆಗಾಲ ಮುಗಿದಾಗ ತಾವು ಬೆಳೆದ ಭತ್ತವನ್ನು ಬೇರ್ಪಡಿಸುವ ಹಾಗೂ ಸಿದ್ಧಪಡಿಸುವ ಕಾರ್ಯಕ್ಕಾಗಿ ಮಳೆಗಾಲದಲ್ಲಿ ಮನೆಯ ಅಂಗಣ ಹಾಳಾಗದಂತೆ ತೆಂಗಿನಗರಿ, ಅಡಿಕೆ ಮರದ ಗರಿ ಹಾಸಲಾಗುತ್ತಿತ್ತು. ಈಗ ಅಡಿಕೆ ಒಣಗಿಸಲು ಹಾಗೂ ಇತರ ಕಾರ್ಯಗಳಿಗಾಗಿ ಅಂಗಣ ಸರಿಯಾಗಿರಬೇಕಾಗಿರುವ ಕಾರಣದಿಂದ ಅಂಗಣವನ್ನು ಕಾಪಾಡುವ ಕಾರ್ಯ ಹಾಗೇ ಮುಂದುವರೆದಿದೆ. ಮಳೆಗಾಲದಲ್ಲಿ ಮಳೆಯ ರಭಸಕ್ಕೆ ಅಂಗಣ ಗುಳಿ ಬೀಳುವುದನ್ನು ತಪ್ಪಿಸಲು ಈ ಕೆಲಸ ಮಾಡಬೇಕಾಗಿರುವುದು ಅನಿವಾರ್ಯ.

ಅನುಸರಿಸಿಕೊಂಡು ಬಂದ ಕ್ರಮ
ಕೃಷಿ ವ್ಯವಸ್ಥೆ ನಮ್ಮ ಜೀವನಕ್ಕೆ ಅನಿವಾರ್ಯ. ಈ ಕಾರಣದಿಂದ ಮಳೆಗಾಲದ ಪೂರ್ವ ಚಟುವಟಿಕೆಗಳಿಗೆ ಆದ್ಯತೆ ನೀಡಿ ಬಿಡುವಾದಾಗ ಮಾತ್ರ ಇತರ ಚಟುವಟಿಕೆಗಳಿಗೆ ಗಮನಹರಿಸುತ್ತೇವೆ. ಹಿಂದಿನಿಂದಲೇ ಅನುಸರಿಸಿಕೊಂಡು ಬಂದ ಸಿದ್ಧತಾ ಕ್ರಮಗಳನ್ನು ಕೈಬಿಟ್ಟರೆ ಮಳೆಗಾಲಕ್ಕೆ ಕಷ್ಟವಾಗುತ್ತದೆ.
– ವಸಂತ, ಕೃಷಿಕರು, ಕಾವು

Advertisement

ಬೇಸಾಯಗಾರ
ಇದರ ಜತೆಗೆ ಭತ್ತದ ಗದ್ದೆಯನ್ನು ಹೊಂದಿರುವ ಎತ್ತುಗಳ ಮೂಲಕ ಉಳುಮೆ ಮಾಡುವ ರೈತರು ಯಥೇಚ್ಚವಾಗಿ ಸಿಗುವ ಹಲಸಿನ ಹಣ್ಣನ್ನು ಬೇಯಿಸಿ ಎತ್ತುಗಳಿಗೆ ಆಹಾರವಾಗಿ ನೀಡುವ ಮೂಲಕ ಅವುಗಳ ದೈಹಿಕ ಬಲವನ್ನು ಹೆಚ್ಚಿಸುತ್ತಿದ್ದರು. ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಸಿದ್ಧಪಡಿಸಿಕೊಳ್ಳುತ್ತಾರೆ. ಗದ್ದೆಯ ಬದುಗಳನ್ನು ಸಮತಟ್ಟುಗೊಳಿಸುವುದು, ಗದ್ದೆ ಉಳುವ ಪರಿಕರಗಳನ್ನು ದುರಸ್ಥಿಪಡಿಸುವ ಕಾರ್ಯ ವೇಗ ಮಾಡುತ್ತಾರೆ. ಗದ್ದೆಯ ಸುತ್ತಲಿನ ಮರಗಳ ಕೊಂಬೆಗಳನ್ನು ಕಡಿದು ಮಳೆಗಾಲದಲ್ಲಿ ಅಪರೂಪಕ್ಕೆ ಬೀಳುವ ಬಿಸಿಲು ಸರಿಯಾಗಿ ಗದ್ದೆಗೆ ಬೀಳುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಬಾವಿಯ ಹೂಳೆತ್ತುವ ಕೆಲಸವೂ ಅಗತ್ಯದ ಕಾರ್ಯಗಳಲ್ಲಿ ಒಂದು.

-   ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next