ವಿಜಯಪುರ: ಜಿಲ್ಲೆಯಲ್ಲಿ ಮುಂಗಾರು ಮಳೆ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದರೂ ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಬಸವನಾಡಿನ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ 6.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದ್ದು, ಈಗಾಗಲೇ ಸಿದ್ಧಗೊಂಡಿರುವ ಜಮೀನಿನಲ್ಲಿ ಮಳೆ ಆಗಿರುವ ಕಡೆಗಳಲ್ಲಿ ಬಿತ್ತನೆ ಆರಂಭಗೊಂಡಿದೆ.
ಜಿಲ್ಲೆಯಲ್ಲಿ ಕಳೆದ ಎರಡು ವಾರಗಳ ಅವ ಧಿಯಲ್ಲಿ ಆಗಾಗ ಸುರಿದ ಮಳೆಯಿಂದ ಭೂಮಿ ಹದ ಮಾಡಿಕೊಂಡಿರುವ ರೈತರು, ಇದೀಗ ಸುರಿಯುವ ಮಳೆಗೆ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ 6,49,940 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇರಿಸಿಕೊಂಡಿರುವ ಕೃಷಿ ಇಲಾಖೆ, ಇದಕ್ಕಾಗಿ ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬಿತ್ತನೆಗೆ ಬೇಕಿರುವ ಬೀಜ-ಗೊಬ್ಬರ ದಾಸ್ತಾನು ಮಾಡಿಕೊಂಡು ವಿತರಣೆ ಆರಂಭಿಸಿದೆ. ಒಟ್ಟು ಬಿತ್ತನೆ ಗುರಿಯಲ್ಲಿ 4.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯುವ ಗುರಿ ಇರಿಸಿಕೊಂಡಿದ್ದು, ಇದಕ್ಕಾಗಿ ಕೃಷಿ ಇಲಾಖೆ 45 ಸಾವಿರ ಕ್ವಿಂಟಲ್ ಬೀಜ ಸಂಗ್ರಹಿಸಿದೆ. 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇರಿಸಿಕೊಂಡ ಕಾರಣ 2 ಸಾವಿರ ಕ್ವಿಂಟಲ್ ಮೆಕ್ಕೆಜೋಳ ದಾಸ್ತಾನು ಮಾಡಿಕೊಳ್ಳಲಾಗಿದೆ.
ಇದಲ್ಲದೇ ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಜ್ಜೆ, 43 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಸೇರಿದಂತೆ ಪ್ರಮುಖವಾಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡುವ ಬೀಜಗಳ ದಾಸ್ತಾನು ಮಾಡಿಕೊಂಡಿದೆ. ಇದಲ್ಲದೇ ಜಿಲ್ಲೆಗೆ ಮುಂಗಾರು ಹಂಗಾಮಿನ ಬಿತ್ತನೆಗೆ ಅಗತ್ಯವಾಗಿರುವ ರಸಗೊಬ್ಬರ ಸಂಗ್ರಹವೂ ಮಾಡಿಕೊಂಡಿರುವ ಕೃಷಿ ಇಲಾಖೆ ವಿತರಣೆಗೆ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಲ್ಲಿ 7,500 ಮೆಟ್ರಿಕ್ ಟನ್ ಡಿಎಪಿ, 8500 ಮೆ.ಟ. ಯೂರಿಯಾ ಹಾಗೂ 10 ಸಾವಿರ ಮೆ.ಟ. ಕಾಂಪ್ಲೆಕ್ಸ್ ರಸಗೊಬ್ಬರ ದಾಸ್ತಾನಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಉತ್ತಮ ಮಳೆ ಮುನ್ಸೂಚನೆ ದೊರೆಯುತ್ತಲೇ ರೈತರು ಬಿತ್ತನೆ ಬೀಜ, ಗೊಬ್ಬರ ಖರೀದಿಗೆ ಅಂಗಡಿಗಳ ಮುಂದೆ, ರೈತ ಸಂಪರ್ಕ ಕೇಂದ್ರಗಳ ಮುಂದೆ ಸಾಲುಗಟ್ಟಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬೀಜ-ಗೊಬ್ಬರಕ್ಕಾಗಿ ಜಿಲ್ಲೆಯ ರೈತರು ಅಂಗಡಿ-ರೈತ ಸಂಪರ್ಕ ಕೇಂದ್ರಗಳಲ್ಲಿ ಕೋವಿಡ್ ನಿಯಮ ಮೀರಿ, ಜೀವದ ಹಂಗು ತೊರೆದು ಒಬ್ಬರ ಮೇಲೆ ಒಬ್ಬರು ಮುಗಿಬಿದ್ದು ಬೀಜ-ಗೊಬ್ಬರ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಬೀಜ-ಗೊಬ್ಬರ ವಿತರಣೆಗೆ ಹೆಚ್ಚುವರಿ ಕೇಂದ್ರ ತೆರೆಯುವಂತೆ ಆಗ್ರಹವೂ ಕೇಳಿ ಬಂದಿದೆ. ಈ ಕುರಿತು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅ ಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.