Advertisement

ದುಡ್ಡು ಜನರ ದನಿ ಅಡಗಿಸಿತು

11:54 AM May 14, 2018 | |

ಬೆಂಗಳೂರು: ಪ್ರಜಾತಂತ್ರ ವ್ಯವಸ್ಥೆಗೆ ಮತದಾನ ಭದ್ರ ಬುನಾದಿ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕುರುಡು ಕಾಂಚಣ ತಾಂಡವವಾಡಿದು,ª ಜನರ ಧ್ವನಿಯನ್ನು ದುಡ್ಡು ಅಡಗಿಸಿತು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಜೆ.ಪಿ.ನಗರದ ಟ್ರೀ ಪಾರ್ಕ್‌ನಲ್ಲಿ ಅದಮ್ಯ ಚೇತನ ಸಂಸ್ಥೆ ಹಮ್ಮಿಕೊಂಡಿದ್ದ 124ನೇ ಹಸಿರು ಭಾನುವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ವೇಳೆ ಇತ್ತೀಚೆಗೆ ನಿಧನರಾದ ಶಾಸಕ ಬಿ.ಎನ್‌.ವಿಜಯಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಸರಳ, ಸಜ್ಜನಿಕೆಗೆ ಹೆಸರಾಗಿದ್ದ ವಿಜಯಕುಮಾರ್‌ ಅವರು ಮಳೆ ನೀರು ಕೊಯ್ಲು, ಉದ್ಯಾನವನ ನಿರ್ಮಾಣ, ಶಿಕ್ಷಣ, ಆರೋಗ್ಯ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬಡವರಿಗೆ ಶಿಕ್ಷಣ ನೀಡಬೇಕು. ಸೂರಿಲ್ಲದವರಿಗೆ ಸೂರು ಕಲ್ಪಿಸಬೇಕು ಎಂದು ಹಂಬಲಿಸುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ವ್ಯಕ್ತಿಗಳು ಹೆಚ್ಚೆಚ್ಚು ಆಯ್ಕೆಯಾಗಬೇಕು ಎಂದರು.

ಒಳ್ಳೆಯ ಜನಪ್ರತಿನಿಧಿಗಳಿದ್ದಾಗ ಮಾತ್ರ ಒಳ್ಳೆಯ ಸರ್ಕಾರ ಬರಲು ಸಾಧ್ಯ. ಸುಸಂಸ್ಕೃತ ಜನಪ್ರತಿನಿಧಿಗಳು ಆಯ್ಕೆಯಾಗದಿದ್ದರೆ ಉತ್ತಮ ಸರ್ಕಾರ ನಿರೀಕ್ಷಿಸುವುದು ತಪ್ಪು. ಬೆಂಗಳೂರನ್ನು ಭೂ ಮಾಫಿಯಾ ಮತ್ತು ರಿಯಲ್‌ ಎಸ್ಟೇಟ್‌ಗಳು ಹಾಳು ಮಾಡಿದ್ದು, ಉದ್ಯಾನ ನಗರಿಯ ಹಿಂದಿನ ಐಸಿರಿ ಮರುಕಳಿಸುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಮಾಜಿ ಮೇಯರ್‌ ಎಸ್‌.ಕೆ.ನಟರಾಜ್‌ ಮಾತನಾಡಿ, ಸರಳತೆಗೆ ಹೆಸರಾಗಿದ್ದ ವಿಜಯಕುಮಾರ್‌, ಸಮಯ ಪಾಲನೆಗೆ ಮಹತ್ವ ನೀಡುತ್ತಿದ್ದರು. ಜಯನಗರ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೂಡುಗೆ ನೀಡಿರುವ ಅವರು, ಸಾರಕ್ಕಿಯಲ್ಲಿ ಬಡವರಿಗಾಗಿ ಡಯಾಲಿಸಿಸ್‌ ಕೇಂದ್ರ ತೆರೆಯುವ ಕನಸು ಕಂಡಿದ್ದರು. ಅವರ ಕನಸುಗಳನ್ನು ಈಡೇರಿಸುವ ಕಾರ್ಯ ಮುಂದೆ ನಡೆಯಲಿದೆ ಎಂದು ತಿಳಿಸಿದರು.

Advertisement

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಮೆಟ್ರೋದಲ್ಲಿ ಜಯನಗರದತ್ತ ಪ್ರಯಾಣಿಸಿದರೆ ಕಾಡಿನೊಳಗೆ ತೆರಳುತ್ತಿದ್ದೇವೆ ಎಂಬ ಅನುಭವ ಆಗುತ್ತದೆ. ಇದಕ್ಕೆ ಶಾಸಕರಾಗಿದ್ದ ವೇಳೆ ವಿಜಯಕುಮಾರ್‌ ಅವರು ಪರಿಸರಕ್ಕೆ ನೀಡಿದ ಕೊಡುಗೆಗಳೇ ಕಾರಣ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಲಕ್ಷಿ ನಟರಾಜ್‌, ಗೋವಿಂದ ನಾಯ್ಡು, ಬಿಜೆಪಿ ಮುಖಂಡರಾದ ವೇಣುಗೋಪಾಲ ರೆಡ್ಡಿ, ಮಂಜುನಾಥ್‌ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಟ್ರೀ ಪಾರ್ಕ್‌ನಲ್ಲಿ ಹಸಿರು ಭಾನುವಾರ: ಅದಮ್ಯ ಚೇತನ ಸಂಸ್ಥೆಯ 124ನೇ ಹಸಿರು ಭಾನುವಾರದ ಅಂಗವಾಗಿ ಜೆ.ಪಿ.ನಗರದ ಟ್ರೀ ಪಾರ್ಕ್‌ನಲ್ಲಿ ಹಲಸು, ದಾಸವಾಳ, ನಿಂಬೆ, ಆಲ, ಹೆಬ್ಬಲಸು ಸೇರಿದಂತೆ ವಿಭಿನ್ನ ಜಾತಿಯ ಸುಮಾರು 60 ಗಿಡಗಳನ್ನು ನಡೆಲಾಯಿತು. ಕೇಂದ್ರ ಸಚಿವ ಅನಂತಕುಮಾರ್‌ ಮತ್ತು ತೇಜಸ್ವಿನಿ ಅನಂತಕುಮಾರ್‌ ಸಸಿನೆಟ್ಟು, ನೀರೆರೆದರು. ಇದೇ ವೇಳೆ ಪರಿಸರದ ಸಂರಕ್ಷಣೆ ಬಗ್ಗೆ ತಿಳಿ ಹೇಳಿದ ತೇಜಸ್ವಿನಿ ಅನಂತಕುಮಾರ್‌, ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next