ಅಕ್ಕಿಆಲೂರು: ಏ. 23ರಂದು ನಡೆಯಲಿರುವ ಲೋಕಸಭೆ ಚುನಾವಣೆ ನಿಮಿತ್ತ ಮತದಾರರನ್ನು ಮತದಾನ ಕೇಂದ್ರಗಳತ್ತ ಸೆಳೆಯುವ ಉದ್ಧೇಶದಿಂದ ಇಲ್ಲಿನ ಗ್ರಾಪಂ ಮತಗಟ್ಟೆ ಮಾದರಿ ಮತಗಟ್ಟೆಯಾಗಿ ಆಯ್ಕೆಯಾಗಿದ್ದು, ಗ್ರಾಪಂ ಆವರಣದಲ್ಲಿ ಮಾದರಿ ಮತಗಟ್ಟೆ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಲಯ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಗ್ರಾಮ ಪಂಚಾಯಿತಿ ಆಡಳಿತ ವರ್ಗ ಮತ್ತು ಸಿಬ್ಬಂದಿ ವರ್ಗದವರು ತಮ್ಮ ಇಚ್ಛಾಶಕ್ತಿಯಿಂದ ನಿರ್ಮಿಸಿರುವ ಈ ಮಾದರಿ ಮತಗಟ್ಟೆ ಮತ ಚಲಾವಣೆ ಮಾಡಲು ಹಿಂದೇಟು ಹಾಕುವ ಮತದಾರರಿಗೆ ಮತದಾನದ ಮಹತ್ವ ತಿಳಿಸಲು ಸನ್ನದ್ಧವಾಗಿ ನಿಂತಿದೆ. ತಾಲೂಕಿಗೆ ಒಂದರಂತೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಲ್ಲಿನ ಗ್ರಾಪಂ ಕಾರ್ಯಾಲಯ ವಿಶೇಷ ಮತಗಟ್ಟೆಯಾಗಿ ನಿರ್ಮಾಣಗೊಂಡಿದೆ.
ಮಾದರಿ ಮತಗಟ್ಟೆಯಲ್ಲಿ ಎಲ್ಲ ಸೌಕರ್ಯಗಳೂ ಶಿಸ್ತುಬದ್ಧವಾಗಿ ನಿರ್ಮಾಣಗೊಂಡಿದ್ದು, ಮತದಾನದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಗ್ರಾಪಂ ಕಾರ್ಯಾಲಯವೂ ಕೂಡ ಮದುವೆ ಮನೆಯಂತೆ ಸಿಂಗಾರಗೊಂಡಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂಪೂರ್ಣವಾಗಿ ಬಿಳಿ ಬಟ್ಟೆ, ಬಲೂನ್, ಪ್ರತ್ಯೇಕ ಆಸನಗಳ ವ್ಯವಸ್ಥೆ, ಫ್ಯಾನ್ ಸೇರಿದಂತೆ ಆಕರ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ.
ಗಾರ್ಡನ್ ಪ್ರಮುಖ ಆಕರ್ಷಣೆ: ತಾಲೂಕಿನಲ್ಲಿ ಅತ್ಯಂತ ಸುಂದರವಾದ ಗ್ರಾಪಂ ಕಾರ್ಯಾಲಯವಾಗಿ ಅಕ್ಕಿಆಲೂರು ಗ್ರಾಪಂ ರೂಪುಗೊಂಡಿದ್ದು, ಇಲ್ಲಿ ಸುತ್ತಲೂ ನಿರ್ಮಿಸಲಾಗಿರುವ ಗಾರ್ಡನ್‌ನಿಂದಾಗಿ ಮಾದರಿ ಮತಗಟ್ಟೆಯನ್ನು ಇಲ್ಲಿಯೆ ಸ್ಥಾಪಿಸಿಲಾಗಿದ್ದು ಮತದಾರರನ್ನು ಆಕರ್ಷಿಸುತ್ತಿದೆ. ಮತದಾನಕ್ಕಾಗಿ ಬರುವ ಮತದಾರರಿಗೆ ಬಿಸಿಲು ಕಾಡದಂತೆ ಪೆಂಡಾಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟಾರೆ ಮತದಾನದ ಜಾಗೃತಿ ಮತ್ತು ಮತದಾನದ ಪ್ರಮಾಣದಲ್ಲಿ ಹೆಚ್ಚಳ ತರುವುದು ಮಾದರಿ ಮತಗಟ್ಟೆಯ ಪ್ರಮುಖ ಉದ್ಧೇಶವಾಗಿದೆ.
Advertisement
ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಮತ್ತು ವಿಕಲಚೇತನರ ಕೊಠಡಿ, ವಿಶ್ರಾಂತಿ ಕೊಠಡಿ, ಮತಗಟ್ಟೆ ಅಧಿಕಾರಿಗಳ ಕೊಠಡಿಗಳು ಕೈಬೀಸಿ ಕರೆಯುವಂತೆ ಸಿಂಗಾರಗೊಂಡಿರುವ ಗ್ರಾಪಂ ಆವರಣ, ವಿಶೇಷ ಆಸನಗಳ ವ್ಯವಸ್ಥೆ ಸೇರಿದಂತೆ ಇನ್ನಿತರ ವಿಶೇಷ ಸೌಲಭ್ಯಗಳನ್ನು ಮಾದರಿ ಮತಗಟ್ಟೆ ಒಳಗೊಂಡಿದ್ದು, ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸದ್ಯ ಮತದಾರರನ್ನು ತನ್ನತ್ತ ಆಕರ್ಷಿಸುತ್ತಿದೆ.
Related Articles
ಮಾದರಿ ಮತಗಟ್ಟೆಯಾಗಿ ಅಕ್ಕಿಆಲೂರು ಗ್ರಾಪಂ ಕಾರ್ಯಾಲಯ ಆಯ್ಕೆಗೊಂಡಿರುವುದು ಸಂತಸ ತಂದಿದೆ. ಇಲ್ಲಿನ ಗಾರ್ಡನ್ ವ್ಯವಸ್ಥೆ, ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ, ಹಾಲ್ ವ್ಯವಸ್ಥೆ ಎಲ್ಲವನ್ನು ಪರಿಗಣಿಸಿ ಜಿಲ್ಲಾಡಳಿತ ಮಾದರಿ ಮತಗಟ್ಟೆ ಸ್ಥಾಪಿಸಲು ಅನುವು ಮಾಡಿಕೊಟ್ಟಿದೆ. ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಬೇಕಿದೆ.
• ಪಿ.ಎಸ್.ಬಿಜ್ಜೂರ, ಗ್ರಾಪಂ ಪಿಡಿಒ
• ಪಿ.ಎಸ್.ಬಿಜ್ಜೂರ, ಗ್ರಾಪಂ ಪಿಡಿಒ
Advertisement