ಹೆಬ್ರಿ: ಹೆಬ್ರಿಯ ಹೃದಯ ಭಾಗದಲ್ಲೇ ಎಲ್ಲ ಕಂಪೆನಿಗಳ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಆನ್‌ಲೈನ್ ವಿದ್ಯಾರ್ಥಿಗಳು ಸೇರಿದಂತೆ ಜನ ಸಾಮಾನ್ಯರು ನಿರಂತರ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ಕೊರೊನಾದಿಂದಾಗಿ ಶಾಲೆ ಗಳು ತೆರೆಯದೇ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಿಗದೆ ವಿದ್ಯಾರ್ಥಿಗಳು ಬೆಟ್ಟ ಹಾಗೂ ಮರವೇರಿ ಆನ್ ತರಗತಿ ವೀಕ್ಷಿಸುತ್ತಿದ್ದರು. ಆದರೆ ಇದೀಗ ಅದಕ್ಕೂ ಅಡಚಣೆ ಉಂಟಾಗಿದೆ.
ನಗರ ಭಾಗದಲ್ಲೂ ಸಮಸ್ಯೆ :
ಗ್ರಾಮೀಣ ಭಾಗದಲ್ಲಿ ಟವರ್ ಇಲ್ಲದೆ ಸಮಸ್ಯೆ ಎಂದು ಹೇಳಬಹುದು ಆದರೆ ಹೆಬ್ರಿಯ ನಗರ ಭಾಗದಲ್ಲೂ ಯಾವುದೇ ಕಂಪೆನಿಗಳ ನೆಟ್‌ವರ್ಕ್ ಸಿಗುತ್ತಿಲ್ಲ. ರಾತ್ರಿ ಹೊತ್ತು ಅಥವಾ ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಲು ಆಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಇದಕ್ಕೆ ಭಾರೀ ತೊಂದರೆ ಎದುರಾಗಿದೆ. ಹಿಂದೆ ಏರ್‌ಟೆಲ್ ನೆಟ್‌ವರ್ಕ್ ನಗರ ಭಾಗದಲ್ಲಿ ಸಿಗುತ್ತಿತ್ತು. ಆದರೆ ಇದೀಗ ಅದು ಕೂಡ ದೊರೆಯುತ್ತಿಲ್ಲ.
ಪೋರ್ಟ್ ಮಾಡಿದವರು ಆತಂತ್ರದಲ್ಲಿ:
ಹೆಬ್ರಿ ಎಸ್.ಆರ್. ಸ್ಕೂಲ್ ಸಮೀಪ ಏರ್‌ಟೆಲ್ ಸೇರಿದಂತೆ ಇತರ ನೆಟ್ ವರ್ಕ್ ಸಮಸ್ಯೆಯಿಂದ ಬೇಸತ್ತು ಇತ್ತೀಚೆಗೆ ಕನ್ಯಾನದಲ್ಲಿ ಜಿಯೋ ಕಂಪೆನಿಯ ಟವರ್ ನಿರ್ಮಾಣವಾಗಿದೆ ಎಂಬ ಮಾಹಿತಿ ಮೇರೆಗೆ ಜಿಯೋ ನೆಟ್‌ವರ್ಕ್‌ಗೆ
ತನ್ನ ಹಳೆಯ ನಂಬರ್‌ನ್ನು ಪೋರ್ಟ್ ಮಾಡಿದ್ದರು. ಇದೀಗ ಟವರ್ ಆದರೂ ಜಿಯೋ ನೆಟ್ ವರ್ಕ್ ಸರಿಯಾಗಿ ಸಿಗದೆ ಪೋರ್ಟ್ ಮಾಡಿಕೊಂಡವರು ಇನ್ನು ಮೂರು ತಿಂಗಳುಗಳ ತನಕ ಮತ್ತೆ ಇನ್ನೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಲಾಗದೆ ಆತಂತ್ರದಲ್ಲಿದ್ದಾರೆ.
ಶೀಘ್ರ ಸಮಸ್ಯೆ ಬಗೆಹರಿಸಲು ಸೂಚನೆ :
ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಎಲ್ಲ ನೆಟ್‌ವರ್ಕ್ ಕಂಪೆನಿಗಳ ಪ್ರಮುಖರ ಸಭೆಯನ್ನು ಜು. 21ರಂದು ಕರೆದಿದ್ದು ಟವರ್ ನಿರ್ಮಾಣ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗುವುದು. –
ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ