ಬೆಳಗಾವಿ: ಗ್ರಾಮೀಣ ಕ್ಷೇತ್ರದ ಜನರಲ್ಲಿದ್ದ ಅನಾಥ ಪ್ರಜ್ಞೆ ಲಕ್ಷ್ಮೀ ಹೆಬ್ಟಾಳಕರ ಶಾಸಕರಾದ ನಂತರ ದೂರವಾಗಿದೆ. ಶಾಸಕರು ಕ್ಷೇತ್ರದ ಪರವಾಗಿ, ಕ್ಷೇತ್ರದ ಜನರ ಪರವಾಗಿ ಗಟ್ಟಿಯಾಗಿ ನಿಂತುಕೊಂಡು ಕೆಲಸ ಮಾಡುತ್ತಿರುವುದು ಎಲ್ಲರಿಗೂ ಸಮಾಧಾನ ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಹಿಂಡಲಗಾ ಗ್ರಾಮದ ಲಿಂಗರಾಜ ಕಾಲೋನಿಯ ಉದ್ಯಾನವನದ ಅಭಿವೃದ್ಧಿ ಸಲುವಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ 19.55 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡ ಬಸವ ಭವನ ಹಾಗೂ ಅಡುಗೆ ಮನೆಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಲಕ್ಷ್ಮೀ ಹೆಬ್ಟಾಳಕರ ಕ್ಷೇತ್ರದ ಜನರಿಗಾಗಿ 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಮಯದಲ್ಲಿ ಸಂಪರ್ಕಕ್ಕೆ ಸಿಗುತ್ತಾರೆ. ಶಾಸಕರು ಅಧಿವೇಶನ ಮತ್ತಿತರ ಕಾರಣಕ್ಕಾಗಿ ಬೆಳಗಾವಿಯಿಂದ ಹೊರಗಿದ್ದರೂ ನಾನು ಮತ್ತು ಮೃಣಾಲ ಹೆಬ್ಟಾಳಕರ ಕುಂದು ಕೊರತೆ ಆಲಿಸುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಜನರು ನಮ್ಮನ್ನು ತಮ್ಮ ಕುಟುಂಬದ ಸದಸ್ಯರೆಂದೇ ತಿಳಿದು ಕಷ್ಟ, ಸುಖ ಹಂಚಿಕೊಳ್ಳುತ್ತಿದ್ದಾರೆ ಎಂದರು.
ಪ್ರವಾಹ ಮತ್ತು ಕೊರೊನಾದಂತಹ ಪ್ರಕೃತಿ ವಿಕೋಪದಿಂದಾಗಿ ಅಡೆತಡೆ ಉಂಟಾದರೂ ನಾವು ಜಗ್ಗಲಿಲ್ಲ. ಆದ ಎಲ್ಲ ಹಾನಿಗಳನ್ನು ಪುನರ್ ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ರಾಜ್ಯದಲ್ಲೇ ಗಮನ ಸೆಳೆಯುವಂತೆ ಅಭಿವೃದ್ಧಿಪಡಿಸಿ ತೋರಿಸುವ ಸಂಕಲ್ಪ ನಮ್ಮದು ಎಂದು ತಿಳಿಸಿದರು. ಈ ವೇಳೆ ಸಂಸದೆ ಮಂಗಲಾ ಅಂಗಡಿ, ಕಾಂಗ್ರೆಸ್ ಯುವ ಮುಖಂಡ ಮೃಣಾಲ ಹೆಬ್ಟಾಳಕರ ಸೇರಿದಂತೆ ಗ್ರಾಮಸ್ಥರು, ಗುತ್ತಿಗೆದಾರರು ಇದ್ದರು.