ನಂಜನಗೂಡು: ತೀವ್ರ ಬರಗಾಲಕ್ಕೆ ತುತ್ತಾಗಿದ್ದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಿದ ಟ್ಯಾಂಕರ್ ಮಾಲೀಕರಿಗೆ ಈವರಿಗೂ ಬಿಲ್ ಪಾವತಿಸದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ ಹಾಗೂ ಕುಡಿಯುವ ನೀರಿನ ಯೋಜನೆಯ ಎಇಇ ರವಿಚಂದ್ರರ ನಡವಳಿಕೆ ಕುರಿತು ಸಭೆಯಲ್ಲಿ ಶಾಸಕ ಕೇಶವ ಮೂರ್ತಿ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಯೋಜನೆಯ ತ್ರೆ„ಮಾಸಿಕ ಸಭೆಯಲ್ಲಿ ಮಾತನಾಡಿ, ಬರಗಾಲದಲ್ಲಿ ನೆರವಿಗೆ ಬಂದ ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿ ಮಾಡಲು ಮೀನ ಮೇಷ ಎನಿಸಿದರೆ ಮುಂದಿನ ದಿನಗಳಲ್ಲಿ ಕಷ್ಟಕಾಲದಲ್ಲಿ ನಿಮ್ಮ ನೆರವಿಗೆ ಯಾರು ಬರುತ್ತಾರೆ. ಹಣವನ್ನೇನು ನೀವು ಕೈಯಿಂದ ಕೋಡುತ್ತಿರಾ ? ಬಿಲ್ ಪಾವತಿಗೆ ವಿಳಂಬವಾಗಲು ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸಬೂಬು ಹೇಳಿಕೊಂಡು ಜವಾಬ್ದಾರಿ ರಹಿತರಾಗಿ ಕೆಲಸ ಮಾಡುವುದನ್ನು ಮೊದಲು ಬಿಡಿ, ಜಿಲ್ಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಯಾಮಾರಿಸುವ ಮೂಲಕ ನಿಮ್ಮ ಕರ್ತವ್ಯ ಮರೆತಿದ್ದೀರಿ ಎಂದು ಆರೋಪಿಸಿದರು. ದೊಡ್ಡಕವಲಂದೆ ಹೋಬಳಿಯ 53 ಶಾಶ್ವತ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ. ಕೇವಲ 35 ಹಳ್ಳಿಗಳಿಗೆ ಮಾತ್ರ ನೀರು ಹೋಗುತ್ತಿದೆ ಎಂದ ಕಳಲೆ ಸಭೆಯಲ್ಲಿದ್ದ ರವಿಚಂದ್ರರನ್ನು ತರಾಟೆಗೆ ತೆಗೆದುಕೊಂಡರು.
ಶಿಕ್ಷಣ ಇಲಾಖೆಯಲ್ಲಿ ಆರ್‌ಟಿಇ ಪೋಷಕರು ಹಾಗೂ ಖಾಸಗಿ ಶಾಲೆಗಳ ಸಭೆ ನಡೆಸದೇ ಇರುವ ಶಿಕ್ಷಣ ಇಲಾಖೆ ವಿರುದ್ಧ ಸಿಡಿಮಿಡಿಗೊಂಡ ಅವರು ನೀವು ಖಾಸಗಿ ಶಾಲೆಯ ಪರವೋ ಬಡ ಮಕ್ಕಳ ಪರವೋ ಎಂಬುದನ್ನು ಮೊದಲು ನಿರ್ಧರಿಸಿ ಎಂದರು. ತಾಲೂಕು ಆಸ್ಪತ್ರೆಗೆ ಹೆಚ್ಚುವರಿಯಾಗಿ ಪ್ರಸೂತಿ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶಿಸಿದರು. ಮಳೆಗಾದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳದಂತೆ ನಿಗಾವಹಿಸಬೇಕು. ಕಾಡಂಚಿನ ಭಾಗದಲ್ಲಿ ಆರೋಗ್ಯ ಸೇವೆ ಹೆಚ್ಚಿಸಲು ಗಮನ ಹರಿಸಬೇಕು ಎಂದು ಸೂಚಿಸಿದರು.
ಯಾವುದೇ ಸಮಯದಲ್ಲಿ ಶಾಸಕರ ನೆರವು ಬೇಕಾದರಲ್ಲಿ ಅಧಿಕಾರಿಗಳು ಇರುವ ಕಡೆಯೇ ನಾನು ಬರುತ್ತೇನೆ. ಸಾರ್ವಜನಿಕರ ನೆರವಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಬೇಕು. ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ನಿಭಾಯಿಸಬೇಕು. ಕಚೇರಿಗಳಿಗೆ ಬರುವ ಸಾರ್ವಜನಿರಕನ್ನು ಗೌರವದಿಂದ ಕಾಣಬೇಕು. ಅಧಿಕಾರಿಗಳ ವಿರುದ್ಧ ದೂರುಗಳು ಕೇಳಿಬಂದರೆ ಅಂತವರ ಪರವಾಗಿ ಈಗ ನಿಲ್ಲಬಲ್ಲವರಾರು ಇಲ್ಲ ಎಂಬುದನ್ನು ನೆನಪಿಡಿ ಎಂದು ತಾಲೂಕಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಉಪಾಧ್ಯಕ್ಷ ಆರ್.ಗೋವಿಂದರಾಜನ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಜಿಪಂ ಸದಸ್ಯರಾದ ಎಚ್.ಎಸ್.ದಯಾನಂದಮೂರ್ತಿ, ಪುಷ್ಪ ನಾಗೇಶ್‌ರಾಜ್, ಎಂ.ಲತಾಸಿದ್ದಶೆಟ್ಟಿ, ಮಂಗಳ ಸೋಮಶೇಖರ್, ಬಿ.ಎಸ್.ದಯಾನಂದ, ಟಿಎಪಿಸಿಎಂಎಸ್ ಅಧ್ಯಕ್ಷ ಮಹೇಶ್, ನಗರಸಭಾಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಎಂ.ಪ್ರದೀಪ್ ಉಪಸ್ಥಿತರಿದ್ದರು.