Advertisement
ಲಿಪೋದ ಉತ್ತರ ಭಾಗದಲ್ಲಿ ಅವಶೇಷಗಳು ಬಿದ್ದಿರುವುದಾಗಿ ದಿಲ್ಲಿಯಲ್ಲಿ ಭಾರತೀಯ ವಾಯುಪಡೆ ತಿಳಿಸಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ 13 ಮಂದಿ ಜೀವಂತವಾಗಿ ಇದ್ದಾರೆಯೋ ಇಲ್ಲವೋ ಎಂಬ ಬಗ್ಗೆ ಇನ್ನೂ ಶೋಧ ನಡೆಯುತ್ತಿದೆ ಎಂದು ಹೇಳಿದೆ. ಐಎಎಫ್ನಲ್ಲಿರುವ ರಷ್ಯಾ ನಿರ್ಮಿತ ಎಎನ್-32 ವಿಮಾನ ಜೂ.3ರಂದು ಅಸ್ಸಾಂನ ಜೋರ್ಹಟ್ನಿಂದ ಯಾನ ಆರಂಭಿಸಿದ ಕೆಲವೇ ಸಮಯದಲ್ಲಿ ನಾಪತ್ತೆಯಾಗಿತ್ತು.
ಎಎನ್ 32 ವಿಮಾನದ ಪೈಲಟ್ ಆಶಿಶ್ ತನ್ವಾರ್ (29), ಅವರ ಪತ್ನಿ ಸಂಧ್ಯಾ ಅದೇ ಕೇಂದ್ರದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಆಗಿದ್ದರು. ವಿಮಾನ ಜೋರ್ಹಟ್ನಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ (12.25ಕ್ಕೆ) ರಾಡಾರ್ ಸಿಗ್ನಲ್ಗಳು ಕಡಿತಗೊಂಡಿತ್ತು. ತನ್ನ ಪತಿ ಪ್ರಯಾಣಿಸುತ್ತಿದ್ದ ವಿಮಾನ ಕಾಣೆಯಾಗುತ್ತಿರುವುದನ್ನು ಬಹಳ ಹತ್ತಿರದಿಂದ ಕಂಡಿದ್ದ ಆವರಿಗೆ ದುರ್ಘಟನೆ ಆ ಕ್ಷಣದಿಂದಲೇ ಅರಿವಾಗಿತ್ತು. ಜೂ.3ರ ಘಟನೆಯ ಆಘಾತದಿಂದ ಸಂಧ್ಯಾ ಇನ್ನೂ ಹೊರಬಂದಿಲ್ಲ.
ಅಸ್ಸಾಂಗೆ ತೆರಳಿದ್ದ ತಂದೆ
ಆಶಿಶ್ ತನ್ವಾರ್ ಅವರ ತಂದೆ ರಾಧೇಲಾ ಅವರು ಮಾಜಿ ಸೈನಿಕ. ತಮ್ಮ ಪುತ್ರನ ಕುರಿತು ತಿಳಿದುಕೊಳ್ಳುವ ಸಲುವಾಗಿ ಹರಿಯಾಣದಿಂದ ಅಸ್ಸಾಂಗೆ ತೆರಳಿ ಅಲ್ಲಿಯೇ ನಿಂತಿದ್ದರು.
ತರಬೇತಿ ಸಂದರ್ಭ ಪರಿಚಯವಾಗಿದ್ದ ಸಂಧ್ಯಾ
ಪೈಲಟ್ ತರಬೇತಿ ವೇಳೆ ಆಶಿಶ್‌ಗೆ ಸಂಧ್ಯಾ ಅವರ ಪರಿಚಯವಾಗಿತ್ತು. 2018ರ ಫೆಬ್ರವರಿಯಲ್ಲಿ ಸಂಧ್ಯಾ ಅವರನ್ನು ವಿವಾಹವಾಗಿದ್ದರು. ವಿವಾಹವಾದ ಬಳಿಕ ಒಟ್ಟಿಗೆ ಕರ್ತವ್ಯ ನಿರ್ವಹಿಸುವ ಭಾಗ್ಯ ಒದಗಿತ್ತು.
ಎಂಎನ್‌ಸಿ ಕಂಪನಿ ತೊರೆದು ಸೇನೆಗೆ
ಆಶಿಶ್ ಕಾನ್ಪುರದಲ್ಲಿ ಬಿ.ಟೆಕ್. ಪದವಿ ಪೂರೈಸಿ ಎಂಎನ್‌ಸಿ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2013ರ ಡಿಸೆಂಬರ್‌ನಲ್ಲಿ ತನ್ವಾರ್ ಭಾರತೀಯ ವಾಯುಸೇನೆ ಸೇರಿದ್ದರು.
ವಾರದಲ್ಲಿ ಮನೆಗೆ ಬರಲಿದ್ದರು
ಹರಿಯಾಣದ ಹುಡಾ ಸೆಕ್ಟರ್ 2ರ ಸಮೀಪದ ಪಲ್ವಾಲ್ನಲ್ಲಿ ಅಶಿಶ್ ತನ್ವಾರ್ ಅವರ ಕುಟುಂಬ ಇದೆ. ಒಂದು ತಿಂಗಳ ಹಿಂದೆಯಷ್ಟೇ ಪತ್ನಿಯ ಜತೆ ಆಶಿಶ್ ತಮ್ಮ ತಾಯಿ ಮನೆಗೆ ಬಂದಿದ್ದರು. ಬಳಿಕ ಒಂದು ವಾರದ ಪ್ರವಾಸಕ್ಕಾಗಿ ಥಾೖಲೆಂಡ್‌ಗೆ ತೆರಳಿದ್ದರು. ಪ್ರವಾಸ ಮುಗಿಸಿ ನೇರವಾಗಿ ಕರ್ತವ್ಯಕ್ಕೆ ಮರಳಿದ್ದರು. ಮುಂದಿನ ವಾರ ಪತ್ನಿ ಸಹಿತ ಮನೆಗೆ ಬರುವುದಾಗಿ ತಾಯಿ ಸರೋಜಾ ಅವರಿಗೆ ಆಶಿಶ್ ತಿಳಿಸಿದ್ದರು.