Advertisement
208ನೇ ಫಲಪುಪ್ಪ ಪ್ರದರ್ಶನದಲ್ಲಿ ಹೂಗುತ್ಛಗಳ ಸೊಬಗಿನ ಜತೆಗೆ ಭಾರತೀಯ ಸೇನೆಯ ಮಹತ್ವ ಸಾರುವ ಹಾಗೂ ಕನ್ನಡ ಚಿತ್ರರಂಗದ ವೈಭವ ಮೆಲುಕು ಹಾಕುವ ವಾತಾವರಣ ಸೃಷ್ಟಿಯಾಗಿದೆ. ಪ್ರಮುಖವಾಗಿ ಯುದ್ಧ ಟ್ಯಾಂಕರ್‌ಗಳು, ಸಮರನೌಕೆ, ಯುದ್ಧ ವಿಮಾನಗಳು ಸೇರಿದಂತೆ ಎಲ್ಲಾ ಯುದ್ಧ ಸಾಮಗ್ರಿ ಮಾದರಿಗಳು, ಸಿಯಾಚಿನ್ ಹಿಮಪರ್ವತ ಮಾದರಿಗಳನ್ನು ಹೂಗಳಲ್ಲೇ ಕಟ್ಟಿಕೊಟ್ಟ ಕಲಾವಿದರ ಕಲಾಭಿರುಚಿಗೆ ಪ್ರಕ್ಷಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
Related Articles
Advertisement
ಯುದ್ಧ ಮಾದರಿಗೆ 50 ಸಾವಿರ ಹೂ, ಚಲನಚಿತ್ರ ಮಾದರಿಗೆ 25 ಸಾವಿರ ಹೂ, ಸಿಂಹ ಹಾಗೂ ಇತರೆ ಮಾದರಿಗಳಿಗೆ 25 ಸಾವಿರ ಹೂಗಳು ಬೇಕಾಗುತ್ತವೆ. ನಾಲ್ಕು ದಿನಕ್ಕೊಮ್ಮೆ ಸತತ 12 ಗಂಟೆ ಕೆಲಸ ಮಾಡುವ ಕಲಾವಿದರು, ಬೆಳಗಿನ ವೇಳೆಗೆ ಯಾವುದೇ ಲೋಪವಿಲ್ಲದಂತೆ ಕೆಲಸ ಮುಗಿಸಿರುತ್ತಾರೆ ಎನ್ನುತ್ತಾರೆ ಸಸ್ಯತೋಟ ಉಪನಿರ್ದೇಶಕ ಚಂದ್ರಶೇಖರ್.
5 ಲಕ್ಷ ಹೂಗಳ ಬಳಕೆ: ಈ ಬಾರಿಯ ಪುಪ್ಪಪ್ರದರ್ಶನಕ್ಕೆ ಐದು ಲಕ್ಷ ಹೂಗಳನ್ನು ಬಳಸಲಾಗುತ್ತಿದೆ. ಪ್ರಾತ್ಯಕ್ಷಿಕೆಗಳ ನಿರ್ಮಾಣಕ್ಕೆ ಒಂದು ಲಕ್ಷ ಹೂ ಬೇಕಾಗುತ್ತದೆ. ನಾಲ್ಕು ದಿನಗಳಿಗೊಮ್ಮೆ ಬದಲಾವಣೆಗೆ 3 ಲಕ್ಷ ಹೂ ಹಾಗೂ ಪ್ರದರ್ಶನ ನಡೆಯುವ ಸ್ಥಳಗಳಲ್ಲಿ ಕುಂಡದಲ್ಲಿ ವಿವಿಧ ಜಾತಿಯ 2 ಲಕ್ಷ ಹೂಗಳನ್ನು ಇಡಲಾಗಿದೆ. ಒಟ್ಟು ಮೂರು ಬಾರಿ ಹೂಗಳನ್ನು ಬದಲಿಸುತ್ತಿದ್ದು, ವಿದೇಶಿ ಹೂಗಳನ್ನು ಹಾಲೆಂಡ್‌ನಿಂದ ಹಾಗೂ ಇತರೆ ಹೂಗಳನ್ನು ನಗರದ ಮಾರುಕಟ್ಟೆಗಳು ಹಾಗೂ ರಾಮನಗರ ಸುತ್ತಮುತ್ತಲ ರೈತರಿಂಧ ಖರೀದಿಸಲಾಗುತ್ತದೆ ಎಂದು ಲಾಲ್‌ಬಾಗ್ ಸಸ್ಯತೋಟ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಸೆಲೆಬ್ರಿಟಿ ಶೋ: ಈ ಬಾರಿ ವಿಶೇಷ ಎಂಬಂತೆ ಸೆಲೆಬ್ರಿಟಿಗಳಿಗಾಗಿಯೇ ಆ.11ರಂದು ಸಂಜೆ 7ರಿಂದ 9 ಗಂಟೆವರೆಗೆ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಸಾಮಾನ್ಯ ದಿನಗಳಲ್ಲಿ ಸಾರ್ವಜನಿಕರ ಮಧ್ಯೆ ಬಂದು ಪುಷ್ಪ ಮೇಳ ಕಣ್ತುಂಬಿಕೊಳ್ಳಲಾಗದ ಚಿತ್ರ ತಾರೆಯರು, ಕಿರುತರೆ ನಟ-ನಟಿಯರು ಈ ವಿಶೇಷ ಶೋಗೆ ಆಗಮಿಸಲಿದ್ದಾರೆ. ಪ್ರಮುಖವಾಗಿ ನಟ ಅಂಬರೀಷ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ರಾಕ್‌ಲೈನ್ ವೆಂಕಟೇಶ್, ಹಾಸ್ಯ ನಟ ದೊಡ್ಡಣ್ಣ ಸೇರಿದಂತೆ 100ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
ದಿನದಿಂದ ದಿನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ ಒಂದೇ ದಿನ 30 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಭೇಟಿ ನೀಡಿದ್ದಾರೆ. ವಾರಾಂತ್ಯದಲ್ಲಿ ರಾಜ್ಯದ ವಿವಿಧ ಭಾಗದ ಜನ ಆಗಮಿಸುವ ನಿರೀಕ್ಷೆ ಇದೆ.-ಚಂದ್ರಶೇಖರ್, ಲಾಲ್ ಬಾಗ್ ಸಸ್ಯತೋಟದ ಉಪನಿರ್ದೇಶಕ ಸೆಲ್ಫಿಗೆ ಬಡವಾಯ್ತು ಛಾಯಾಗ್ರಾಹಕರ ಉದ್ಯಮ: ಮೊಬೈಲ್ ಕ್ಯಾಮರಾ ತಂತ್ರಜ್ಞಾನ ಹೆಚ್ಚಿನ ಬಳಕೆಯಲ್ಲಿರುವ ಹಿನ್ನೆಲೆಯಲ್ಲಿ ಉದ್ಯಾನಕ್ಕೆ ಭೇಟಿ ನೀಡಿದ ಸಾರ್ವಜನಿಕರು ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆಯೇ ಹೊರತು, ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಮೂಲಕ ಫೋಟೋ ತೆಗೆಸಿಕೊಳ್ಳುವುದಿಲ್ಲ. ಉದ್ಯಾನಕ್ಕೆ ಬರುವ ಸಾರ್ವಜನಿಕರ ಫೋಟೋ ಕ್ಲಿಕ್ಕಿಸಿ, ಅಲ್ಲೇ ಪ್ರಿಂಟ್ ಹಾಕಿ ಕೊಡಲು 12 ಛಾಯಾಗ್ರಾಹಕರಿಗೆ ಅವಕಾಶ ನೀಡಲಾಗಿದೆ. ಆದರೆ ಜನ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಆಸಕ್ತಿ ವಹಿಸಿರುವುದು ಛಾಯಾಗ್ರಾಹಕರ ಆದಾಯಕ್ಕೆ ಕತ್ತರಿ ಹಾಕಿದೆ. ಲಾಲ್‌ಬಾಗ್‌ನಲ್ಲಿ ಅನುಮತಿ ಪಡೆದ 12 ಛಾಯಾಗ್ರಾಹಕರಿದ್ದಾರೆ. 6×8 ಅಳತೆಯ ಫೋಟೊ ಒಂದಕ್ಕೆ 50 ರೂ. ಫುಲ್ ಸೈಜ್‌ಗೆ 100 ರೂ. ಪಡೆಯುತ್ತಾರೆ. ಕಳೆದ ವರ್ಷ ಮೇಳದಲ್ಲಿ ಒಂದು ದಿನಕ್ಕೆ ಸುಮಾರು 100 ಫೋಟೊಗಳನ್ನು ತೆಗೆಯುತ್ತಿದ್ದೆವು. ಆದರೆ, ಈ ಬಾರಿ 10ರಿಂದ 15 ಫೋಟೋ ತೆಗೆದರೆ ಹೆಚ್ಚು ಎನ್ನುತ್ತಾರೆ ಛಾಯಾಗ್ರಾಹಕ ವೆಂಕಟರಸ್ವಾಮಿ.