Advertisement
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಪರ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ನೂತನ ಎಸ್‌ಪಿ ಎಂ. ಅಶ್ವಿನಿ ಅವರು ಅಧಿಕಾರ ವಹಿಸಿಕೊಂಡ ಅನಂತರ ಕಚೇರಿ ಮೇಲಿದ್ದ ದಾಸ್ತಾನು ಕೊಠಡಿಯಲ್ಲಿನ 8-10 ವರ್ಷಗಳ ಪೇಪರ್, ರಿಜಿಸ್ಟರ್ ಇರುವ ಕೊಠಡಿಯನ್ನು ಸ್ವತ್ಛ ಮಾಡಲು ಸೂಚಿಸಿದ್ದರು. ಅದರಂತೆ ಸೋಮವಾರ ಸ್ವತ್ಛತಾ ಕಾರ್ಯ ಆರಂಭವಾಗಿತ್ತು. ಈ ವೇಳೆ ಗೌರಮ್ಮ ಎಂಬ ಸಿಬಂದಿಗೆ ಪೇಪರ್‌ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಆನೆ ದಂತ ಪತ್ತೆಯಾಗಿದೆ. ಈ ಮಾಹಿತಿ ತಿಳಿಸಿದ ಕೂಡಲೇ ಅದನ್ನು ತತ್‌ಕ್ಷಣ ವಶಕ್ಕೆ ಪಡೆಯಲಾಗಿದೆ. ಈ ವಿಷಯವನ್ನು ಸಿಐಡಿ ಅ ಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದರು.
2018ನೇ ಮೇ 22ರಂದು ಎಸ್‌ಪಿ ಕಚೇರಿಯ ರಹಸ್ಯ ಶಾಖೆಯ ಶೀಘ್ರ ಲಿಪಿಗಾರ ಎ.ಬಿ. ಶ್ರೀನಾಥ್ ಅವರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ರಾಜ್ಯ ಕಾನೂನು, ಸುವ್ಯವಸ್ಥೆಯ ಎಡಿಜಿಪಿ ಕಮಲ್ ಪಂತ್ ಆಗಮಿಸಿ ತನಿಖೆಗೆ ಚುರುಕು ನೀಡುವ ಪ್ರಯತ್ನ ನಡೆಸಿದ್ದರು. ಅದರ ಭಾಗವಾಗಿ ಕರ್ತವ್ಯ ಲೋಪದ ಆಧಾರದ ಮೇಲೆ ಇಬ್ಬರು ಪೇದೆಗಳನ್ನು ಅಮಾನತು ಗೊಳಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ 2019ರ ಜನವರಿ ಸಿಐಡಿ ತನಿಖೆಗೆ ವಹಿಸಲಾಗಿತ್ತು. ಅಧಿಕಾರ ಹಸ್ತಾಂತರ ಸಂದರ್ಭಗಳಲ್ಲೆಲ್ಲ ಅಧಿಕಾರಿಗಳು ದಂತಗಳ ಮುಂದೆ ನಿಂತು ಫೋಟೋ ತೆಗೆಸಿ ಕೊಳ್ಳುತ್ತಿದ್ದರು. ಮುರುಗನ್ ಅಧಿಕಾರ ಸ್ವೀಕರಿಸಿದಾಗಲೂ ಇದ್ದವು. ಅನಂತರ ನಾಪತ್ತೆಯಾಗಿದ್ದವು. ಮೇಜಿನ ಮೇಲೆ ಅಲಂಕೃತ ಮರದ ಪೀಠದ ಮೇಲೆ ಸುಂದರವಾಗಿ ಇಡಲಾಗಿದ್ದ ದಂತವನ್ನು ಅಪಹರಿಸಿದ್ದವರಾರು? ಮತ್ತೆ ತಂದಿಟ್ಟರೇ? ಎಂಬುದು ನಿಗೂಢವಾಗಿದೆ.