ದಕ್ಷಿಣ ಆಫ್ರಿಕದಲ್ಲಿ ನಡೆದ ಅಂಡರ್-19 ವರ್ಲ್ಡ್ಕಪ್ ಕ್ರಿಕೆಟ್ ಕೂಟದ ಫೈನಲ್ ಪಂದ್ಯ ಮುಗಿದ ಬಳಿಕ ಸಂಭವಿಸಿದ ಘಟನೆ ಕ್ರೀಡಾಸ್ಫೂರ್ತಿಗೆ ವ್ಯತಿರಿಕ್ತವಾಗಿತ್ತು. ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಪಂದ್ಯದಲ್ಲಿ ಭಾರತವನ್ನು 3 ವಿಕೆಟ್‌ಗಳಿಂದ ಸೋಲಿಸಿ ಕಪ್ ಎತ್ತಿಕೊಳ್ಳುವಲ್ಲಿ ಬಾಂಗ್ಲಾದೇಶದ ಕಿರಿಯರು ಯಶಸ್ವಿಯಾದರು. ಇದು ಬಾಂಗ್ಲಾದೇಶಕ್ಕೆ ಯಾವುದೇ ಮಟ್ಟದಲ್ಲಿ ಸಿಗುತ್ತಿರುವ ಮೊದಲ ವಿಶ್ವಕಪ್. ಸಹಜವಾಗಿಯೇ ಕ್ರಿಕೆಟಿಗರು ವಿಪರೀತ ರೋಮಾಂಚನಗೊಂಡಿದ್ದರು. ಆದರೆ ಈ ಉನ್ಮಾದದಲ್ಲಿ ಅವರು ವರ್ತಿಸಿದ ರೀತಿ ಮಾತ್ರ ಕ್ರಿಕೆಟ್ ಆಟದ ಉದಯೋನ್ಮುಖ ಪ್ರತಿಭೆಗಳಿಗೆ ತಕ್ಕುದಾಗಿ ಇರಲಿಲ್ಲ.
ಮಳೆಬಾಧಿತ ಪಂದ್ಯದಲ್ಲಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾಕ್ಕೆ ಗೆಲುವು ಒಲಿಯಿತು. ಈ ಒಂದು ಗೆಲುವಿಗೆ ಆ ತಂಡ ಅರ್ಹವೂ ಆಗಿತ್ತು. ಈ ಮೂಲಕ ಅಂಡರ್-19ನಲ್ಲಿ ಸತತ ಐದನೇ ಸಲ ಕಪ್ ಗೆಲ್ಲುವ ಭಾರತದ ನಾಗಾಲೋಟಕ್ಕೆ ಬ್ರೇಕ್ ಹಾಕಿತು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಭಾರತ 10 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದ ಹಿನ್ನೆಲೆಯಲ್ಲಿ ಹೇಳುವುದಾದರೆ ಬಲಿಷ್ಠ ಭಾರತ ತಂಡವನ್ನು ಸೋಲಿಸುವಲ್ಲಿ ಬಾಂಗ್ಲಾದ ಕಿರಿಯರು ತೋರಿಸಿದ ಕೆಚ್ಚೆದೆ ಅಭಿನಂದನಾರ್ಹವೇ. ಏಷ್ಯಾದ ಇನ್ನೊಂದು ಬಲಿಷ್ಠ ತಂಡವಾಗಿ ಹೊರಹೊಮ್ಮುವ ಎಲ್ಲ ಅರ್ಹತೆಗಳು ಬಾಂಗ್ಲಾಕ್ಕಿದೆ. ಪುಟ್ಟ ರಾಷ್ಟ್ರದಲ್ಲಿ ಕ್ರಿಕೆಟ್‌ಗೆ ಉತ್ತಮ ಭವಿಷ್ಯವಿದೆ ಎಂದು ಕಿರಿಯರು ತೋರಿಸಿಕೊಟ್ಟಿದ್ದಾರೆ.
ಆದರೆ ಕೂಟದುದ್ದಕ್ಕೂ ಅವರು ತೋರಿಸಿದ ಅದ್ಭುತ ಸಾಧನೆಯನ್ನು ಅವರ ಈ ಒಂದು ಕ್ಷಣದ ವರ್ತನೆ ನಗಣ್ಯವಾಗಿಸಿತು. ಎಲ್ಲ ಬಣ್ಣವನ್ನು ಮಸಿನುಂಗಿತು ಎಂಬಂತೆ ಗೆಲುವಿನ ಉನ್ಮಾದದಲ್ಲಿ ಮಾಡಿದ ಯಡವಟ್ಟು ಬಾಂಗ್ಲಾದ ಕಿರಿಯರ ಬಗ್ಗೆ ಕ್ರಿಕೆಟ್ ಜಗತ್ತು ಹೊಂದಿದ್ದ ಭಾವನೆಯನ್ನು ಬದಲಾಯಿಸಿದೆ. ಗೆಲುವಿನ ಸಂಭ್ರಮಾಚಾರಣೆಯಲ್ಲಿದ್ದ ಬಾಂಗ್ಲಾ ಕಿರಿಯರು, ಭಾರತ ತಂಡದವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದನ್ನು ಭಾರತೀಯರು ವಿರೋಧಿಸಿದಾಗ ಉಭಯ ತಂಡಗಳ ನಡುವೆ ಮೈದಾನದಲ್ಲೇ ನೂಕಾಟ-ತಳ್ಳಾಟ ನಡೆದು ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇದಷ್ಟೇ ಅಲ್ಲದೇ, ಪಂದ್ಯದ ವೇಳೆಯಲ್ಲೂ ಭಾರತೀಯ ಕ್ರಿಕೆಟಿಗರೆಡೆಗೆ ಬಾಂಗ್ಲಾದೇಶಿ ಆಟಗಾರರು ಅನವಶ್ಯಕವಾಗಿ ಅಗ್ರೆಸಿವ್ ವರ್ತನೆ ತೋರಿಸಿದರು.
ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕಿರಿಯರ ತಂಡದ ಈ ವರ್ತನೆ ಬಾಂಗ್ಲಾದೇಶದ ಹಿರಿಯರ ತಂಡದ ಪ್ರತಿರೂಪದಂತಿರುವುದು. ಮೊದಲಿನಿಂದಲೂ ಬಾಂಗ್ಲಾದೇಶ ತಂಡ ತನ್ನ ದುರ್ವರ್ತನೆಗಳಿಂದಲೇ ಕುಖ್ಯಾತಿ ಪಡೆದಿದೆ. ಗೆಲುವು ಸನ್ನಿಹಿತವಾದಂತೆಯೇ ಎದುರಾಳಿ ತಂಡವನ್ನು ಅದು ಕೆಣಕುವ ರೀತಿ ನಿಜಕ್ಕೂ ಅಸಹ್ಯ ಹುಟ್ಟಿಸುವಂತಿರುತ್ತದೆ. ಶ್ರೀಲಂಕಾದಲ್ಲಿ ನಡೆದ ನಿಧಾಸ್ ಟ್ರೋಫಿಯಲ್ಲಿ ಶ್ರೀಲಂಕನ್ ಟೀಂ ಅನ್ನು ಸೋಲಿಸಿ ಬಾಂಗ್ಲಾದೇಶ ಮಾಡಿದ ನಾಗಿನ್(ಹಾವಿನಂತೆ) ಡ್ಯಾನ್ಸ್ ಎಷ್ಟು ಟೀಕೆಗೊಳಗಾಯಿತೆಂದರೆ, ಈಗ ಆ ರೀತಿಯ ಸಂಭ್ರಮಾಚರಣೆಯನ್ನೇ ಆ ತಂಡ ಕೈ ಬಿಟ್ಟಿದೆ. ಅದರಲ್ಲೂ ಭಾರತದ ವಿರುದ್ಧದ ಪಂದ್ಯಗಳ ವೇಳೆಯಂತೂ ಬಾಂಗ್ಲಾದೇಶಿ ಕ್ರೀಡಾಭಿಮಾನಿಗಳ, ಪತ್ರಿಕೆಗಳ ಹಾಗೂ ಆಟಗಾರರ ವರ್ತನೆ ಹದ್ದು ಮೀರುತ್ತದೆ.
ಇದೀಗ ಐಸಿಸಿ ಈ ಕ್ರಿಕೆಟಿಗರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಆದರೆ ಇದರಿಂದ ಕಳಂಕವೇನೂ ತೊಡೆದು ಹೋಗುವುದಿಲ್ಲ . ಬಾಂಗ್ಲಾ ನಾಯಕ ಅಕºರ್ ಅಲಿಯೇನೋ ತನ್ನ ತಂಡದ ದುರ್ವರ್ತನೆಗೆ ಕ್ಷಮೆಯಾಚಿಸಿದ್ದಾರೆ. ಆದರೆ ಆಟಗಾರರು ಗೆಲುವಿನ ಸಂಭ್ರಮದಲ್ಲಿ ಭಾವನಾತ್ಮಕವಾಗಿ ಉನ್ಮತ್ತರಾಗಿದ್ದರು. ಹೀಗಾಗಿ ಅವರಿಂದ ಈ ಪ್ರಮಾದ ಸಂಭವಿಸಿದೆ ಎಂಬ ಅವರ ಸಮಾಜಾಯಿಷಿ ಒಪ್ಪತಕ್ಕದ್ದಲ್ಲ. ಇಂಥ ಸಂದರ್ಭದಲ್ಲಿ ಕ್ರಿಕೆಟ್ ಕೋಚ್‌ಗಳ ಜವಾಬ್ದಾರಿ ದೊಡ್ಡದು.
ಇವರೆಲ್ಲ ಇನ್ನೂ ಹದಿಹರೆಯದ ಹುಡುಗರು. ಅವರನ್ನು ಆಟದಲ್ಲಿ ಮಾತ್ರ ಪಳಗಿಸುವುದಲ್ಲ. ಮೈದಾನದಲ್ಲಿ ಯಾವ ರೀತಿ ವರ್ತಿಸಬೇಕೆಂಬುದನ್ನೂ ಕಲಿಸಿಕೊಡಬೇಕು. ಆಟದ ಆವೇಶದಲ್ಲಿ ಹುಡುಗರು ತಟ್ಟನೆ ಕೆರಳುವುದು ಸಾಮಾನ್ಯ. ಯಾವ ಪರಿಸ್ಥಿತಿಯಲ್ಲೂ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳದಿರುವುದು ಹೇಗೆ ಎನ್ನುವುದು ಕೂಡ ಕೋಚಿಂಗ್‌ನ ಅಂಗವಾಗಿರಬೇಕು.
ಸೋಲು-ಗೆಲುವು ಯಾವುದೇ ಆಟದ ಅವಿಭಾಜ್ಯ ಅಂಗವಾಗಿರುತ್ತದೆ. ಕೆಲವು ಪಂದ್ಯಗಳಲ್ಲಿ ಗೆಲ್ಲಬಹುದು, ಕೆಲವು ಪಂದ್ಯಗಳಲ್ಲಿ ಸೋಲಬಹುದು. ಗೆದ್ದಾಗ ವಿಪರೀತ ಬೀಗದೆ ಸೋತಾಗ ವಿಪರೀತ ಕುಗ್ಗದೆ ಸಮಚಿತ್ತವನ್ನು ಕಾಪಾಡಿಕೊಳ್ಳುವವನೇ ನಿಜವಾಗಿ ಕ್ರೀಡಾಪಟು ಎಂದೆನಿಸಿಕೊಳ್ಳುತ್ತಾನೆ ಹಾಗೂ ಇದುವೇ ನಿಜವಾದ ಕ್ರೀಡಾಸ್ಫೂರ್ತಿ. ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿಲ್ಲಿಯಮ್ಸನ್ ಮುಂತಾದ ಕ್ರಿಕೆಟಿಗರು ಯಾವ ಒತ್ತಡದ ಪರಿಸ್ಥಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಶಾಂತಚಿತ್ತದ ವರ್ತನೆಯಿಂದಾಗಿ ಕ್ರಿಕೆಟ್ ಲೋಕದಲ್ಲಿ ಎತ್ತರಕ್ಕೇರಿದವರು. ಕಿರಿಯರು ಇಂಥ ಹಿರಿಯ ಕ್ರಿಕೆಟಿಗರಿಂದ ಕಲಿಯುವುದು ಸಾಕಷ್ಟಿದೆ.