Advertisement

ಪಾಠ ಕಲಿತ ತುಂಟ ನರಿ

10:32 PM Feb 07, 2020 | mahesh |

ಬಹಳ ಹಿಂದೆ ಪುಷ್ಪಗಿರಿ ಎನ್ನುವ ದಟ್ಟ ಅರಣ್ಯವಿತ್ತು. ವಿವಿಧ ಬಗೆಯ ಸಸ್ಯ ಸಂಕುಲಗಳ ಜತೆಗೆ ಅನೇಕ ಪ್ರಾಣಿ, ಪಕ್ಷಿ, ಕೀಟಗಳು ಅಲ್ಲಿದ್ದವು. ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತಿದ್ದವು. ಹೀಗಿರಲು ಒಂದು ದಿನ ಮರಿಗೆ ಜನ್ಮ ನೀಡಿದ ನರಿಯೊಂದು ಕಾಯಿಲೆಯಿಂದ ಸತ್ತು ಹೋಯಿತು.

Advertisement

ಪಾಪ ಹತ್ತು ದಿನದ ಮರಿ ಅದು. ಅದರ ಅಳು ನೋಡಿ ಉಳಿದ ಪ್ರಾಣಿಗಳಿಗೆ ಕನಿಕರ ಮೂಡಿತು. ಅನಾಥವಾದ ನರಿ ಮರಿಯನ್ನು ಎಲ್ಲ ಪ್ರಾಣಿಗಳು ಸೇರಿ ಆರೈಕೆ ಮಾಡತೊಡಗಿದವು. ಅದರ ಆಹಾರದಿಂದ ಹಿಡಿದು ರಕ್ಷಣೆವರೆಗೆ ನೋಡಿಕೊಳ್ಳತೊಡಗಿದವು. ಒಟ್ಟಿನಲ್ಲಿ ನರಿ ಮರಿಗೆ ಅನಾಥಭಾವ ಕಾಡದಂತೆ ಸಾಕತೊಡಗಿದವು.

ವರ್ಷಗಳು ಉರುಳಿದವು. ನರಿ ಮರಿ ಈಗ ದೊಡ್ಡದಾಗಿತ್ತು. ಜತೆಗೆ ಅಹಂಕಾರವು ಅದರ ಜತೆಗೇ ಬೆಳೆದಿತ್ತು. ಎಲ್ಲರೂ ಅದನ್ನು ಮುದ್ದಿನಿಂದ ಸಾಕಿದ್ದರಿಂದ ಅದರ ಚೇಷ್ಟೆ ಮಿತಿ ಮೀರಿತ್ತು. ಒಮ್ಮೆ ಆನೆ ಮಲಗಿದ್ದಾಗ ಅದರ ಸೊಂಡಿಲಿಗೆ ಧೂಳು ಎರಚಿ ಅದು ಒದ್ದಾಡುವುದನ್ನು ನೋಡಿ ನರಿ ಕೇಕೆ ಹಾಕಿ ನಕ್ಕಿತ್ತು. ಮತ್ತೂಮ್ಮೆ ಮೊಲದ ಬಿಲಕ್ಕೆ ನೀರು ಸುರಿದು ನರಿ ತಮಾಷೆ ನೋಡಿತ್ತು. ಇನ್ನೊಮ್ಮೆ ಮರದಲ್ಲಿ ಕುಳಿತಿದ್ದ ಮಂಗನ ಬಾಲ ಹಿಡಿದು ಜಗ್ಗಿತ್ತು. ಪಾಪ ಮಂಗಣ್ಣನಿಗೆ ನೋವಿನಿಂದ ಚೇತರಿಸಿಕೊಳ್ಳಲು ತಿಂಗಳೇ ಹಿಡಿದಿತ್ತು. ಆಗೆಲ್ಲ ಪ್ರಾಣಿಗಳು ಒಟ್ಟು ಸೇರಿ ನರಿಗೆ ಬುದ್ಧಿ ಕಲಿಸಲು ಮುಂದಾಗಿದ್ದವು. ಕಾಡಿನ ಹಿರಿಯಳಾದ ಕಾಗಕ್ಕ ಅವರನ್ನೆಲ್ಲ ತಡೆಯುತ್ತಿತ್ತು. “ನರಿ ತಂದೆ, ತಾಯಿ ಇಲ್ಲದ ಅನಾಥ ಕೂಸು. ಅದನ್ನು ನಾವಲ್ಲದೆ ಬೇರಿನ್ಯಾರು ನೋಡಿಕೊಳ್ಳಬೇಕು’ ಎಂದು ಕಾಗಕ್ಕ ಎಲ್ಲರನ್ನೂ ಸಮಾಧಾನ ಪಡಿಸುತ್ತಿತ್ತು.

ಅದೊಂದು ದಿನ ನರಿಗೆ ಕೋಳಿಯನ್ನು ತಿನ್ನಬೇಕೆಂಬ ಮನಸ್ಸಾಯಿತು. ಕಾಡಿನಂಚಿನ ಊರಿಗೆ ಹೋದರೆ ಅಲ್ಲಿನ ಮನೆಗಳಲ್ಲಿ ಬೇಕಾದಷ್ಟು ಕೋಳಿ ಸಿಗುತ್ತದೆ ಎನ್ನುವ ಲೆಕ್ಕಾಚಾರ ಹಾಕಿ ನಡೆಯತೊಡಗಿತು. ನಾಟಿ ಕೋಳಿಯ ರುಚಿ ನೆನೆದೇ ಜೊಲ್ಲು ಸುರಿಯತೊಡಗಿತು.

ನರಿ ಊರ ಕಡೆಗೆ ಹೆಜ್ಜೆ ಹಾಕುವುದನ್ನು ನೋಡಿ ಸಂಶಯ ಬಂದ ಕಾಗಕ್ಕ ಮರದ ಮೇಲೆನಿಂದಲೇ ಕರೆಯಿತು. “ಎಲ್ಲಿಗೆ ಹೊರಟಿದ್ದು?’ಕೇಳಿತು. “ಊರ ಕಡೆಗೆ ಹೋಗುತ್ತಿದ್ದೇನೆ. ನಾಟಿ ಕೋಳಿ ತಿನ್ನದೆ ತುಂಬಾ ಸಮಯವಾಯಿತು’ ಎಂದಿತು ನರಿ ಬಾಯಿ ಚಪ್ಪರಿಸಿಕೊಂಡು.

Advertisement

“ಅಯ್ಯೋ ಊರ ಕಡೆಗೆ ಹೋಗಬೇಡ. ಬೋನು ಇಟ್ಟು ಕಾಡು ಪ್ರಾಣಿಗಳನ್ನು ಹಿಡಿಯುತ್ತಾರೆ. ನಿನ್ನೆ ನಾನೇ ನೋಡಿದ್ದೆ. ಮೃಗಾಲಯಕ್ಕೆ ಸಾಗಿಸುತ್ತಾರಂತೆ’ ಆತಂಕದ ಧ್ವನಿಯಲ್ಲಿ ಕಾಗಕ್ಕ ಹೇಳಿತು. “ಏಯ್‌ ನೀನು ಸುಮ್ಮನೆ ಕುಳಿತುಕೋ. ನಿನಗೆ ಧೈರ್ಯ ಇಲ್ಲಂದ್ರೆ ನನಗಿದೆ. ನಿನ್ನ ಹಾಗೆ ನಾನು ಹೇಡಿ ಅಲ್ಲ’ ನರಿ ಮೂದಲಿಸಿತು.

“ಹೇಳುದು ಕೇಳು. ಹಾಗೆಲ್ಲ ಹೋಗಿ ಅಪಾಯ ತಂದುಕೊಳ್ಳಬೇಡ’ ಮತ್ತೆ ಕಾಗಕ್ಕ ವಿನಂತಿಸಿತು. “ನಂಗೆ ಉಪದೇಶ ಕೊಡ್ಲಿಕ್ಕೆ ಬರಬೇಡ. ನಿನ್ನ ಕೆಲಸ ನೀನು ನೋಡು’ ಎಂದ ನರಿ ಊರೊಳಗೆ ಹೊರಟು ಹೋಯಿತು. ಕಾಗೆಗೆ ಆತಂಕವಾಯಿತು.

ಮೆಲ್ಲ ಹೆಜ್ಜೆ ಇಡುತ್ತಾ ನರಿ ಊರೊಳಗೆ ಪ್ರವೇಶಿಸಿತು. ಕಾಡಂಚಿನ ಮನೆಯೊಂದರ ಹಿಂಬಾಗ ಗೂಡಿನಲ್ಲಿ ದಷ್ಟಪುಷ್ಟವಾಗಿದ್ದ ಕೋಳಿ ಕಾಣಿಸಿತು. ನರಿ ಸುತ್ತಮುತ್ತ ನೋಡಿತು. ಯಾರೂ ಕಾಣಿಸಲಿಲ್ಲ. ವೇಗದಿಂದ ಗೂಡೊಳಗೆ ನುಗ್ಗಿತು. “ಟಪ್‌’ ಜೋರಾದ ಶಬ್ದದೊಂದಿಗೆ ಬಾಗಿಲು ಬಿತ್ತು. ಅದು ಕೋಳಿ ಗೂಡಾಗಿರದೆ ಬೋನಾಗಿತ್ತು. ನರಿ ಬೇಸ್ತು ಬಿದ್ದಿತ್ತು.

ಶಬ್ದ ಕೇಳಿ ಮರೆಯಲ್ಲಿ ಅಡಗಿ ಕುಳಿತಿದ್ದವ ಬೋನು ಬಳಿ ಬಂದ. ಕಬ್ಬಿಣದ ಬೋನಿಗೆ ಬೀಗ ಹಾಕಿ ಕೋಳಿಯನ್ನು ಹೊರ ತೆಗೆದ. ನರಿಯತ್ತ ನೋಡಿ, “ಮೃಗಾಲಯಕ್ಕೆ ನಿನ್ನ ಮಾರಿದರೆ ಕೈ ತುಂಬಾ ಹಣ ಸಿಗುತ್ತದೆ. ಗಾಡಿ ತೆಗೆದುಕೊಂಡು ಬರುತ್ತೇನೆ’ ಎಂದು ಕೀಯನ್ನು ಮನೆಯೊಳಗಿಟ್ಟು ಹೊರಟು ಹೋದ.

ನರಿಗೆ ಆತಂಕ ಶುರುವಾಯಿತು. ಹೊರ ಬರಲು ಪ್ರಯತ್ನಿಸಿತು. ಕಬ್ಬಿಣದ ಸರಳು ತಾಗಿ ಕೈ, ಕಾಲು ಎಲ್ಲ ಗಾಯವಾಗಿ ಸುಸ್ತಾಗಿ ಮಲಗಿತು. ಕಾಗಕ್ಕನ ಮಾತು ಕೇಳಿದ್ದರೆ ಈ ದುಸ್ಥಿತಿ ಬರುತ್ತಿರಲಿಲ್ಲವೆಂದು ಪರಿತಪಿಸಿತು.

ಇತ್ತ ಕಾಡಿನಲ್ಲಿ ಕಾಗಕ್ಕನಿಗೆ ಆತಂಕವಾಗತೊಡಗಿತು. ಊರೊಳಗೆ ಹೋದ ನರಿ ಇನ್ನೂ ಬಾರದ ಕಾರಣ ಅದಕ್ಕೆ ಏನೋ ಅಪಾಯವಾಗಿದೆ ಎನ್ನುವುದು ಕಾಗೆಯ ಅನುಭವಕ್ಕೆ ಬಂತು. ಉಳಿದ ಪ್ರಾಣಿಗಳನ್ನು ಕರೆದುಕೊಂಡು ಊರಿನತ್ತ ಸಾಗಿತು. ಪ್ರಾಣಿಗಳೆಲ್ಲ ಬಂದು ನೋಡುವಾಗ ಬೋನಿನಲ್ಲಿ ಕುಸಿದು ಬಿದ್ದ ನರಿ ಕಾಣಿಸಿ ಪಾಪ ಎನಿಸಿತು. ಕಾಗೆ ಮನೆಯೊಳಗೆ ಹಾರಿ ಕೀ ಕಚ್ಚಿಕೊಂಡು ಬಂತು. ಮಂಗ ಬೇಗ ಬೇಗ ಬೀಗ ತೆರೆಯಿತು. ಆಗಲೆ ವಾಹನದ ಸದ್ದು ಕೇಳಿಸತೊಡಗಿತು.

ಎದ್ದು ಓಡಲೂ ನರಿಗೆ ತ್ರಾಣವಿರಲಿಲ್ಲ. ಆನೆ ಮಂಡಿಯೂರಿ ಕುಳಿತಿತ್ತು. ಮಂಗ ನರಿಯನ್ನು ಅದರ ಬೆನ್ನ ಮೇಲೆ ಕೂರಿಸಿತು. ನಂತರ ಪ್ರಾಣಿಗಳೆಲ್ಲ ಕಾಡಿನತ್ತ ವೇಗವಾಗಿ ಹೆಜ್ಜೆ ಹಾಕಿದವು. ಎಲ್ಲರ ಪ್ರೀತಿ-ವಿಶ್ವಾಸ ಕಂಡು ನರಿಗೆ ಕಣ್ಣು ತುಂಬಿ ಬಂತು. ಎಲ್ಲರಲ್ಲೂ ಕ್ಷಮೆ ಕೇಳಿತು. ಬಳಿಕ ನರಿ ಚೇಷ್ಟೆ ಎಲ್ಲ ಬಿಟ್ಟು ಎಲ್ಲರೊಂದಿಗೆ ಸೌಹಾರ್ದಯುತವಾಗಿ ಬದುಕತೊಡಗಿತು.

-ರಮೇಶ್‌ ಬಳ್ಳಮೂಲೆ

Advertisement

Udayavani is now on Telegram. Click here to join our channel and stay updated with the latest news.

Next