Advertisement

ಜಲ ಸಂಘರ್ಷಕ್ಕೆ ಕಾರಣವಾಯ್ತೇ ಸಚಿವರ ಆದೇಶ?

01:52 AM May 21, 2019 | Team Udayavani |

ಬೆಳಗಾವಿ: ಭೀಕರ ಬರದಿಂದ ನಲುಗುತ್ತಿರುವ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಜಲ ಸಂಘರ್ಷ ಆರಂಭವಾಗಿದೆ. ಸತತ ಹೋರಾಟ ನಡೆದಿದ್ದರೂ ಇದುವರೆಗೆ ಕೃಷ್ಣಾ ನದಿಗೆ ನೀರು ಬಂದಿಲ್ಲ. ದಾಹ ತಣಿದಿಲ್ಲ. ಆದರೆ ಹಿಡಕಲ್ ಜಲಾಶಯದಿಂದ ಕೃಷ್ಣೆಗೆ ನೀರು ಬಿಡಬೇಕೆಂಬ ಜಲಸಂಪನ್ಮೂಲ ಸಚಿವರ ಆದೇಶ ನೀರು ಕೊಡುವ ಬದಲು ರಾಜಕೀಯದ ಬೆಂಕಿ ಹಚ್ಚಿದೆ. ಆದೇಶದ ವಿರುದ್ಧ ಆರಂಭವಾಗಿರುವ ಹೋರಾಟ ಹಲವಾರು ಆತಂಕಗಳನ್ನು ತಂದಿಟ್ಟಿದೆ.

Advertisement

ಇದಕ್ಕೆ ಸೋಮವಾರ ನಡೆದ ಪ್ರತಿಭಟನೆಗಳೇ ಸಾಕ್ಷಿ. ಅಥಣಿ ಭಾಗದಲ್ಲಿ ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಒತ್ತಾಯಿಸಿ ನಿರಂತರ ಹೋರಾಟ ನಡೆದಿದ್ದರೆ ಅದಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ಹಿಡಕಲ್ ಜಲಾಶಯ ವ್ಯಾಪ್ತಿಯ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರು ಯಾವುದೇ ಕಾರಣಕ್ಕೂ ಹಿಡಕಲ್ದಿಂದ ನೀರು ಬಿಡಬಾರದು. ಈ ಆದೇಶ ಕೈಬಿಡಬೇಕೆಂದು ಪ್ರತಿಭಟನೆ ನಡೆಸಿ ಇದಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲ ಇದೆ ಎಂಬ ಎಚ್ಚರಿಕೆಯ ಸಂದೇಶವನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ರವಾನಿಸಿದರು.

ಈಗ ನಡೆದಿರುವ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಾರಕಿಹೊಳಿ ಮತ್ತು ಶಿವಕುಮಾರ್‌ ನಡುವೆ ಹೊಸ ಜಲ ಸಂಘರ್ಷ ಆರಂಭವಾಗುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತಿವೆ. ಸಚಿವ ಶಿವಕುಮಾರ್‌ ಆದೇಶ ಗೋಕಾಕ ಭಾಗದಲ್ಲಿ ರಾಜಕೀಯ ಬೆಂಕಿ ಹಚ್ಚಿದೆ.

ಮಹಾರಾಷ್ಟ್ರ ಸರಕಾರ ಕರ್ನಾಟಕದ ಮನವಿಗಳಿಗೆ ಸೊಪ್ಪು ಹಾಕದೇ ಇದ್ದಾಗ ಅಥಣಿ ಹಾಗೂ ಕಾಗವಾಡ ತಾಲೂಕಿನ ಜನರ ಕುಡಿಯುವ ನೀರಿನ ಸಂಕಷ್ಟ ಇನ್ನಷ್ಟು ಹೆಚ್ಚಾಯಿತು. ಅಲ್ಲಿನ ಹೋರಾಟಗಾರರ ಹಾಗೂ ಶಾಸಕರ ಒತ್ತಡ ತೀವ್ರವಾದಾಗ ಅದಕ್ಕೆ ಸ್ಪಂದಿಸಿದ ಸಚಿವರು ಹಿಡಕಲ್ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡುವ ನಿರ್ಧಾರ ಮಾಡಿ ಆದೇಶ ಹೊರಡಿಸಿದರು.

ಸಚಿವರು ಈ ಆದೇಶ ಹೊರಡಿಸುವ ಮುನ್ನ ಗೋಕಾಕ ಭಾಗದ ಶಾಸಕರ ಸಲಹೆ ಕೇಳಲಿಲ್ಲ. ಅವರ ಗಮನಕ್ಕೂ ಇದನ್ನು ತರಲಿಲ್ಲ ಎಂಬ ಅಸಮಾಧಾನ ಬೆಂಬಲಿಗರಲ್ಲಿ ಕಾಣುತ್ತಿದೆ. ಇದೇ ಕಾರಣದಿಂದ ಈಗ ಸಚಿವರ ಆದೇಶದ ವಿರುದ್ಧ ಪ್ರತಿಭಟನೆ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.

Advertisement

ಇಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಹಿಡಕಲ್ ಜಲಾಶಯ ನಿರ್ಮಾಣ ಆದಾಗಿನಿಂದ ಇದುವರೆಗೆ ಒಮ್ಮೆಯೂ ಕೃಷ್ಣಾ ನದಿಗೆ ನೀರು ಬಿಟ್ಟಿಲ್ಲ. ಏನೇ ಇದ್ದರೂ ಅಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕು. ಅದಕ್ಕೆ ನಾವೆಲ್ಲ ಪ್ರಯತ್ನ ಮಾಡಿ ಮಹಾರಾಷ್ಟ್ರ ಸರಕಾರದ ಮನವೊಲಿಸಬೇಕು. ಅದನ್ನು ಬಿಟ್ಟು ಒಬ್ಬರಿಗೆ ನೆರವಾಗಲು ಇನ್ನೊಬ್ಬರಿಗೆ ತೊಂದರೆ ಕೊಡುವುದು ಸರಿಯಲ್ಲ. ನೀರು ಬಿಡುಗಡೆ ಆದೇಶ ಮಾಡುವ ಮೊದಲು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಲಾಶಯ ವ್ಯಾಪ್ತಿಯ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಶಾಸಕರ ಸಭೆ ಕರೆಯಬೇಕು. ಅಂತಹ ಯಾವ ಪ್ರಯತ್ನಗಳೂ ನಡೆಯಲಿಲ್ಲ ಎಂಬುದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಾದ.

ಮಹದಾಯಿ ಮಾದರಿ ಹೋರಾಟ ಅನಿವಾರ್ಯ

ರಾಜ್ಯ ಸರಕಾರದ ನಿರ್ಲಕ್ಷ್ಯ ಹಾಗೂ ಮಹಾರಾಷ್ಟ್ರ ಸರಕಾರದ ಮೊಂಡುತನ ಕುಡಿಯುವ ನೀರಿಗಾಗಿ ಸಾಕಷ್ಟು ಪರದಾಡುತ್ತಿರುವ ಕೃಷ್ಣಾ ನದಿ ತೀರದ ನೂರಾರು ಗ್ರಾಮಗಳ ಜನರ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಪ್ರತಿಭಟನೆಯ ವ್ಯಾಪ್ತಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತಾರಗೊಳ್ಳುತ್ತಿದೆ.

ಸರಕಾರದ ವಿರುದ್ಧ ಈಗ ಮಠಾಧೀಶರು ಬೀದಿಗೆ ಇಳಿದಿದ್ದಾರೆ. ಉ.ಕ.ದಲ್ಲಿ ಕಳೆದ ಹಲವು ವರ್ಷಗಳಿಂದ ಮಹದಾಯಿ ನೀರಿಗಾಗಿ ನಿರಂತರ ಹೋರಾಟ ನಡೆದಿದೆ. ಈಗ ಅದೇ ಮಾದರಿಯ ಹೋರಾಟ ಕೃಷ್ಣಾ ನದಿ ತೀರದ ಜನರಿಗೆ ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕುಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಜನರಿಗೆ ನಮ್ಮಪರವಾಗಿ ಯಾವತ್ತೂ ಸರಕಾರ ಬಂದಿಲ್ಲ.

ನಮ್ಮ ಸಂಕಷ್ಟಕ್ಕೆ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಅಸಮಾಧಾನ ಇದೆ. ಇದು ಈಗ ಈ ರೀತಿ ಸ್ಫೋಟಗೊಳ್ಳುತ್ತಿದೆ. ‘ಹಿಡಕಲ್ನ‌ಲ್ಲಿ ಈಗ ಇರುವುದೇ 4 ಟಿಎಂಸಿ ನೀರು. ಅದರಲ್ಲಿ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ತಲಾ 1 ಟಿಎಂಸಿ ನೀರು ಬೇಕು. ಇದಾದ ನಂತರ ಘಟಪ್ರಭಾ ನದಿಗೆ 1.5 ಟಿಎಂಸಿ ನೀರು ಬಿಡಲೇಬೇಕು. ಈಗಿನ ಸ್ಥಿತಿಯಲ್ಲಿ ಜಲಾಶಯ ವ್ಯಾಪ್ತಿಯ ನಮಗೇ ನೀರು ಸಾಲುವುದಿಲ್ಲ. ಬೇರೆಯವರಿಗೆ ಹೇಗೆ ನೀರು ಕೊಡುತ್ತಾರೆ’ ಎಂಬುದು ಜಿಪಂ ಸದಸ್ಯ ಗೋವಿಂದ ಕೊಪ್ಪದ ಪ್ರಶ್ನೆ.
-ಕೇಶವ ಆದಿ
Advertisement

Udayavani is now on Telegram. Click here to join our channel and stay updated with the latest news.

Next