ಗದಗ: ಮಳೆಗೆ ಮನೆ ಕುಸಿದಿದೆ. ಹೊಸದಾಗಿ ಮನೆ ನಿರ್ಮಿಸಿಕೊಡುವಂತೆ ಕೋರಿ ವೃದ್ಧೆಯೊಬ್ಬರು ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ.ಪಾಟೀಲ ಅವರ ಕಾಲಿಗೆರಗಿ, ಅಳಲು ತೋಡಿಕೊಂಡರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಗದಗ- ಬೆಟಗೇರಿ ಅವಳಿ ನಗರದಲ್ಲಿ 150ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಮಳೆ ನೀರು ನುಗ್ಗಿದ್ದ ನಗರದ ಹಲವು ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಈ ವೇಳೆ ಶಾಸಕ ಎಚ್.ಕೆ.ಪಾಟೀಲ ವಾರ್ಡ್ ನಂ.19ರ ವ್ಯಾಪ್ತಿಯ ಮುಲ್ಲಾ ಓಣಿಗೆ ಆಗಮಿಸುತ್ತಿದ್ದಂತೆ ಕಣ್ಣೀರಿಡುತ್ತಲೇ ಮಾಬೂಬೀ ಎಲಿಗಾರ ಎಂಬ ಮಹಿಳೆ ಶಾಸಕರ ಕಾಲಿಗೆರಗಿದರು. ಇರೋ ಇಂದು ಮನೀನು ಬಿದೈತಿ. ಇರಾಕ್ ಜಾಗ ಇಲ್ಲ. ಪಾತ್ರೆ, ಪಗಡೆಗಳನ್ನು ಮನೆ ಮುಂದಿನ ಬಯಲಲ್ಲಿಟ್ಟು, ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ. ಕೂಲಿ ನಾಲಿ ಮಾಡಿ, ಉಪಜೀವನ ಸಾಗಿಸುತ್ತೇವೆ. ಮನೆ ನಿರ್ಮಿಸಿಕೊಳ್ಳಲು, ಮನೆ ಬಾಡಿಗೆ ಕಟ್ಟುವ ಶಕ್ತಿ ನಮಗಿಲ್ಲ. ಬಿದ್ದ ಮನೆಯನ್ನು ಸರಕಾರದಿಂದ ನಿರ್ಮಿಸಿಕೊಡಬೇಕು ಎಂದು ಪರಿಪರಿಯಾಗಿ ಬೇಡಿಕೊಂಡರು.
ಮಹಿಳೆಯನ್ನು ಸಮಾಧಾನ ಪಡಿಸಿದ ಎಚ.ಕೆ.ಪಾಟೀಲ, ಸರಕಾರದ ಪರಿಹಾರದೊಂದಿಗೆ ಯಾವುದಾದರೊಂದು ಯೋಜನೆಯಡಿ ಆದಷ್ಟು ಬೇಗ ಮನೆ ನಿರ್ಮಿಸಿ, ಸೂರು ಕಲ್ಪಿಸುವುದಾಗಿ ಧೈರ್ಯ ಹೇಳಿದರು.