Advertisement

ಎಲ್ಲರಲ್ಲೂ ಮಂತ್ರಿಗಿರಿ ಕನಸು; ಪೂರ್ಣ ಪುನಾರಚನೆಗೆ ಸಚಿವ ಆಕಾಂಕ್ಷಿಗಳ ಆಗ್ರಹ

01:16 AM Feb 03, 2022 | Team Udayavani |

ಬೆಂಗಳೂರು:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದಿಲ್ಲಿಗೆ  ತೆರಳುವುದಾಗಿ ಹೇಳಿದ್ದು, ಇದು ಸಚಿವಾಕಾಂಕ್ಷಿಗಳಲ್ಲಿ ಹೊಸ ಆಸೆ ಮೂಡುವಂತೆ ಮಾಡಿದೆ. ಕೆಲವರು ಈಗಲೇ ಲಾಬಿ ಆರಂಭಿಸಿದ್ದಾರೆ.

Advertisement

ಸದ್ಯ  ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇದ್ದು, ಕನಿಷ್ಠ 10-12 ಸಚಿವರನ್ನು ಕೈಬಿಡಬೇಕು ಎಂಬ ಆಗ್ರಹವಿದೆ. ಹೀಗಾಗಿ ಜಿಲ್ಲೆ, ಜಾತಿ ಮತ್ತು ಪ್ರಾದೇಶಿಕತೆ ಲೆಕ್ಕಾಚಾರದಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಶಾಸಕರಲ್ಲಿದೆ. ಸಂಪುಟ ಪುನಾ ರಚನೆಯಾದರೆ  ಕನಿಷ್ಠ 5ರಿಂದ 6 ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿಸಿಎಂ ಸ್ಥಾನದ ಮೇಲೆ ರಾಮುಲು ಕಣ್ಣು
ಈ ನಡುವೆ ಸಾರಿಗೆ ಸಚಿವ ಬಿ. ಶ್ರೀರಾಮುಲು  ದಿಲ್ಲಿಗೆ ತೆರಳಿದ್ದು, ಕೇಂದ್ರ ಸಂಸದೀಯ ವ್ಯವಹಾರ ಗಳ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ. ಜತೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನೂ ಭೇಟಿ ಮಾಡಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಅವರು ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ದಿಲ್ಲಿ ಮಟ್ಟದಲ್ಲಿ ಲಾಬಿ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಆಕಾಂಕ್ಷಿಗಳ ಕಸರತ್ತು
ಎಂ.ಪಿ. ರೇಣುಕಾಚಾರ್ಯ, ಎಂ.ಪಿ. ಕುಮಾರಸ್ವಾಮಿ, ರಾಜು ಗೌಡ, ಪಿ. ರಾಜೀವ, ಕೆ.ಜಿ. ಬೋಪಯ್ಯ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್‌, ದತ್ತಾತ್ರೇಯ ಪಾಟೀಲ್‌, ರಾಜಕುಮಾರ್‌ ತೇಲ್ಕೂರ್‌, ಶಿವನ ಗೌಡ ನಾಯಕ್‌, ಅಭಯ್‌ ಪಾಟೀಲ್‌, ಅರವಿಂದ ಬೆಲ್ಲದ, ಮಾಡಾಳು ವಿರೂಪಾಕ್ಷಪ್ಪ,  ಪೂರ್ಣಿಮಾ ಶ್ರೀನಿವಾಸ್‌, ರಘುಪತಿ ಭಟ್‌, ಎ. ರಾಮದಾಸ್‌, ಸಿ.ಪಿ. ಯೋಗೇಶ್ವರ್‌ ಮುಂತಾದವರೂ  ಸಂಪುಟ ಸೇರಲು ತೆರೆಮರೆಯ ಕಸರತ್ತು  ಆರಂಭಿಸಿದ್ದಾರೆ ಎನ್ನಲಾಗಿದೆ.  ರಮೇಶ್‌ ಜಾರಕಿಹೊಳಿ ಅವರು ಕೂಡ ಮುಖ್ಯಮಂತ್ರಿಯವರ ದಿಲ್ಲಿ ಪ್ರವಾಸ  ಪ್ರಕಟವಾದ ಬೆನ್ನಲ್ಲೇ  ಗೋವಾಕ್ಕೆ ತೆರಳಿದ್ದಾರೆ.

ರೇಣುವಿಗೆ ಬುಲಾವ್‌
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ಸಂಪುಟದ ಅರ್ಧದಷ್ಟು ಸಚಿವರು ನಿಷ್ಕ್ರಿಯ ರಾಗಿದ್ದು, ಶಾಸಕರ ಅಹವಾಲುಗಳಿಗೆ ಸ್ಪಂದಿಸು ವುದಿಲ್ಲ ಎಂದು ವರಿಷ್ಠರಿಗೆ ದೂರು ಸಲ್ಲಿಸಿದ್ದಾರೆ. ಅದ‌ಕ್ಕೆ ಪ್ರತಿಯಾಗಿ ಅನೇಕ ಸಚಿವರು ರೇಣುಕಾ ಚಾರ್ಯ ವಿರುದ್ಧವೂ ಆರೋಪ ಮಾಡಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ  ದಿಲ್ಲಿಗೆ ಬರುವಂತೆ ರೇಣುಕಾಚಾರ್ಯ ಅವರಿಗೆ ವರಿಷ್ಠರು ಸೂಚನೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Advertisement

ಸಂಪುಟ ಚರ್ಚೆ ಅನುಮಾನ?
ಬಿಜೆಪಿ ವರಿಷ್ಠರು   ಐದು ರಾಜ್ಯಗಳ ವಿಧಾನ ಸಭೆ  ಚುನಾವಣೆಗಳಲ್ಲಿ  ಸಕ್ರಿಯರಾಗಿದ್ದು,  ಬೇರೆ ಯಾವುದೇ ರಾಜ್ಯಗಳ ಚಟುವಟಿಕೆಗಳ ಕುರಿತು ಚರ್ಚಿಸುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಪಕ್ಷದ ಉನ್ನತ ಮೂಲಗಳು ತಿಳಿಸುವ ಪ್ರಕಾರ, ಸಂಪುಟ ಪುನಾರಚನೆಗೆ  ಚುನಾವಣೆ ಜತೆಗೆ ಸಂಬಂಧ ಕಲ್ಪಿಸದೆ  ಮುಂದುವರಿ ಯುವಂತೆ ರಾಜ್ಯದ ನಾಯಕರಿಗೆ ವರಿಷ್ಠರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಫೆ.14ರಿಂದ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದ್ದು, ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ  ಬಜೆಟ್‌ ಸಿದ್ಧತೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಮಾರ್ಚ್‌ ಮೊದಲ ವಾರದಲ್ಲಿ ಬಜೆಟ್‌ ಅಧಿವೇಶನವೂ ಆರಂಭವಾಗಲಿದೆ.

ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲಿ  ರಾಜ್ಯದ ಸಂಸದರ ಜತೆ ಮುಖ್ಯಮಂತ್ರಿ ಸಭೆ ನಡೆಸಲು ಸೋಮವಾರ ದಿಲ್ಲಿಗೆ ತೆರಳಲು ನಿರ್ಧರಿಸಿದ್ದು,  ವರಿಷ್ಠರ ಭೇಟಿಗೂ ಸಮಯ ಕೇಳಿದ್ದಾರೆ ಎನ್ನಲಾಗಿದೆ.

ಯತ್ನಾಳ್‌, ವಿಜಯೇಂದ್ರರಿಗೂ ಅದೃಷ್ಟ?
ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುವ ಪಟ್ಟಿಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ  ಹೆಸರುಗಳು ಕೇಳಿ ಬರುತ್ತಿವೆ. ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಅವಕಾಶ ದೊರೆತರೆ  ಯತ್ನಾಳ್‌ಗೂ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.

ಇದನ್ನೂ ಓದಿ:ಯುಗಾದಿ ಹೊತ್ತಿಗೆ ಬದಲಾವಣೆ ನಿಶ್ಚಿತ: ಬಸನಗೌಡ ಪಾಟೀಲ್‌ ಯತ್ನಾಳ್‌

ಸೋಮವಾರ ದಿಲ್ಲಿಗೆ ತೆರಳಲಿದ್ದು, ಅಲ್ಲಿ ರಾಜ್ಯದ ಸಂಸದರು ಹಾಗೂ ಕಾನೂನು ತಜ್ಞರೊಂದಿಗೆ ಸಭೆ ನಡೆಸಬೇಕಾಗಿದೆ. ಸಂಪುಟ ವಿಸ್ತರಣೆ ವಿಚಾರವನ್ನು ಬಹಿರಂಗವಾಗಿ ಚರ್ಚಿಸ ಲಾಗುವುದಿಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

ರಾಜ್ಯದಲ್ಲಿ  ಪರ್ಯಾಯ ನಾಯಕತ್ವದ ಅಗತ್ಯವಿದೆ. ಯುಗಾದಿ ಬಳಿಕ ಹೊಸ  ಬದಲಾವಣೆ  ನಿಶ್ಚಿತ. ರಾಜ್ಯದಲ್ಲಿ ಒಳ್ಳೆಯ ಬದಲಾವಣೆ ಆಗಲಿದೆ. ಕೆಲವರನ್ನು ಮಂತ್ರಿ ಸ್ಥಾನದಿಂದ ಮುಕ್ತಗೊಳಿಸಿ ಪಕ್ಷದ ಜವಾಬ್ದಾರಿ ಕೊಡಲಾಗುತ್ತದೆ.
– ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ಶಾಸಕ

ಎರಡು ದಿನಗಳ ಹಿಂದೆ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ದೂರವಾಣಿ ಕರೆ ಮಾಡಿದ್ದರು. ಬಹಿರಂಗ ಹೇಳಿಕೆ ಕೊಡಬೇಡಿ, ಅದರಿಂದ ಪಕ್ಷದ ವರ್ಚಸ್ಸಿಗೆಧಕ್ಕೆ ಆಗುತ್ತದೆ ಎಂದಿದ್ದಾರೆ. ಅಲ್ಲದೆ ದಿಲ್ಲಿಗೆ ಬರುವಂತೆ ತಿಳಿಸಿದ್ದಾರೆ
– ರೇಣುಕಾಚಾರ್ಯ,ಹೊನ್ನಾಳಿ ಶಾಸಕ

ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬುದು ಮುಖ್ಯಮಂತ್ರಿಯವರಿಗೆ  ಗೊತ್ತಿಲ್ಲ. ಹಾಗಿರುವಾಗ ನನಗೆ ಹೇಗೆ ಗೊತ್ತಾಗಬೇಕು? ಅಲ್ಲಿಗೆ ಹೋಗಿ ಬಂದ ಬಳಿಕ ಮುಖ್ಯ ಮಂತ್ರಿಗಳೇ  ಎಲ್ಲವನ್ನೂ ಹೇಳುತ್ತಾರೆ.
-ಕೆ.ಎಸ್‌. ಈಶ್ವರಪ್ಪ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next