ವಿಧಾನಸಭೆ: ಆರ್‌ಟಿಇ ಕಾಯ್ದೆ ಸಂಬಂಧ ಚರ್ಚೆ ವೇಳೆ ಶಿಕ್ಷಣ ಸಚಿವ ಎನ್.ಮಹೇಶ್ ಮೌನ ಧರಿಸಿದ್ದರೆ, ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಸರ್ಕಾರದ ಪರ ಮಾತನಾಡಿದ್ದು ಕುತೂಹಲಕ್ಕೆ ಕಾರಣವಾಯಿತು.
ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಪರ ಮಾತನಾಡುತ್ತಿದ್ದ ಜೆಡಿಎಸ್‌ನ ಎ.ಟಿ.ರಾಮಸ್ವಾಮಿ ಸಮ್ಮಿಶ್ರ ಸರ್ಕಾರದ ಆದ್ಯತೆಗಳ ಬಗ್ಗೆ ಪ್ರಸ್ತಾಪಿಸಿ ಸರ್ವರಿಗೂ ಶಿಕ್ಷಣ ವಿಚಾರದಲ್ಲಿ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದಂತೆ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಬಡಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ರೂಪಿಸಿರುವ ಆರ್‌ಟಿಇ ಕಾಯ್ದೆ ಉಳ್ಳವರ ಪಾಲಾಗಿದೆ. ಎಷ್ಟು ಕೊಳೆಗೇರಿ ಹಾಗೂ ತರಕಾರಿ ಮಾರುವವರ ಮಕ್ಕಳಿಗೆ ಅದು ನೆರವಾಗಿದೆ, ತನ್ವೀರ್ ಸೇಠ್ ಹೇಳಲಿ ಎಂದು ಪ್ರಶ್ನಿಸಿದರು.
ಆಗ ಮಧ್ಯಪ್ರವೇಶಿಸಿದ ತನ್ವೀರ್ ಸೇಠ್, ಆರ್‌ಟಿಇ ಕಾಯ್ದೆಯಡಿ ಪಾರದರ್ಶಕ ವ್ಯವಸ್ಥೆಯಡಿ ಪ್ರವೇಶ ನಡೆಯುತ್ತದೆ. 1.21 ಲಕ್ಷ ಮಕ್ಕಳಿಗೆ ಸೀಟು ದೊರೆತಿದೆ. ಜತೆಗೆ ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟ ಹೆಚ್ಚಿಸಲು ಹಿಂದಿನ ಸರ್ಕಾರ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ನೇಮಕಗೊಂಡ ಶಿಕ್ಷಕರಿಗೆ ಗ್ರಾಮಿಣ ಸೇವೆ ಕಡ್ಡಾಯ ಮಾಡಲಾಗಿದೆ. ಹತ್ತು ವರ್ಷ ಗ್ರಾಮೀಣ ಸೇವೆ ಮುಗಿದವರಿಗೆ ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಆದರೆ, ತನ್ವೀರ್ ಸೇಠ್ ಮಾತು ಒಪ್ಪದ ಜೆಡಿಎಸ್‌ನ ಶಿವಲಿಂಗೇಗೌಡ, ಗ್ರಾಮಾಂತರ ಪ್ರದೇಶದಲ್ಲಿ ಕೂಲಿ ಮಾಡುವವರು ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಬೇಕು ಎಂದು ಬಯಸುತ್ತಾರೆ. ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿ ಎಂದು ನಾವು ಬಾಯಿ ಬಡಿದುಕೊಂಡರೂ ಕೇಳಲಿಲ್ಲ ಎಂದು ಹೇಳಿದರು.
ಅರವಿಂದ ಬೆಲ್ಲದ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲೇ ಖಾಸಗಿಯವರ ನೆರವಿನಿಂದ ಪ್ರೀ ನರ್ಸರಿ ಹಾಗೂ ಎಲ್‌ಕೆಜಿ ಪ್ರಾರಂಭಿಸಿದ್ದರಿಂದ 2300 ಮಕ್ಕಳು ಹೆಚ್ಚಾಗಿ ಸೇರ್ಪಡೆಯಾಗಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಯಾರಿಗೂ ಕೀಳರಿಮೆ ಬೇಕಿಲ್ಲ ಎಂದರು. ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಮಾತು ಮುಂದುವರಿಸಿ ಆರ್‌ಟಿಇ ದೊಡ್ಡ ದಂಧೆ, ಮೊದಲು ಅದನ್ನು ರದ್ದುಪಡಿಸಬೇಕು. 8 ಸಾವಿರ ರೂ. ಇದ್ದ ಶುಲ್ಕ 16,500 ರೂ. ಮಾಡಿಕೊಟ್ಟಿದ್ದೀರಿ. 6 ಲಕ್ಷ ರೂ.ವರೆಗೂ ವಾರ್ಷಿಕ ಆದಾಯ ಮಿತಿ ಇರುವವರ ಮಕ್ಕಳಿಗೂ ಅವಕಾಶ ಕಲ್ಪಿಸಿದ್ದೀರಿ. ಖಾಸಗಿ ಶಾಲೆಗಳನ್ನು ಸಾಕುವ ಯೋಜನೆ ಇದು ಎಂದು ದೂರಿದರು. ಇದಕ್ಕೆ ರಮೇಶ್ ಕುಮಾರ್ ಧ್ವನಿಗೂಡಿಸಿದರು. ಮತ್ತೆ ತನ್ವೀರ್ ಸೇಠ್, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ. ಹೊಸ ಸಚಿವರು ಸಭೆ ಕರೆದರೆ ನಾವೆಲ್ಲರೂ ಭಾಗಿಯಾಗುತ್ತೇವೆ ಎಂದು ಹೇಳಿದರು. ಶಿಕ್ಷಣದ ಬಗ್ಗೆ ಈ ಎಲ್ಲ ವಿಚಾರಗಳು ಚರ್ಚೆಯಾಗುತ್ತಿದ್ದರೂ ಸಚಿವ ಎನ್.ಮಹೇಶ್ ಸುಮ್ಮನೆ ಕುಳಿತಿದ್ದರು.
ತನ್ವೀರ್ ಸೇಠ್ ಮಾತ್ರ ಎದ್ದು ಪ್ರತಿಯೊಂದಕ್ಕೂ ಉತ್ತರಿಸುತ್ತಿದ್ದರು. ಆಗ, ಸ್ಪೀಕರ್ ಸಹಿತ ಪ್ರತಿಪಕ್ಷ ಸದಸ್ಯರು, ಶಿಕ್ಷಣ ಸಚಿವರು ಯಾರು? ಮಹೇಶ್
ಅವರೋ ತನ್ವೀರ್ ಸೇಠ್ ಅವರೋ ಎಂದು ಪ್ರಶ್ನಿಸಿದರು. ಚರ್ಚೆಸಾಕು, ಎ.ಟಿ.ರಾಮಸ್ವಾಮಿ ಮಾತನಾಡಲಿ ಎಂದು ಸ್ಪೀಕರ್ ಹೇಳಿ ವಿಷಯಕ್ಕೆ ತೆರೆ ಎಳೆದರು.