Advertisement

ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದೆ : ಡಾ|ನಾ. ಮೊಗಸಾರ

05:40 PM Dec 10, 2019 | Team Udayavani |

ಮುಂಬಯಿ, ಡಿ. 9: ಪ್ರಸ್ತುತ ದಿನಗಳಲ್ಲಿ ಸಮ್ಮಾನವನ್ನು ತೆಗೆದುಕೊಳ್ಳುವುದು ಬಹಳ ಕಷ್ಟ ಅನಿಸುತ್ತಿದೆ. ಆದರೂ ಈ ಗೌರವ ನಾಡೋಜ ಪ್ರಶಸ್ತಿ ಸಿಕ್ಕಿದಷ್ಟೇ ಗೌರವ ಸ್ವೀಕರಿಸಿದ ಅನುಭವವಾಗುತ್ತಿದೆ. ಇಂದು ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದ್ದು, ನಿಮ್ಮ ಸಂಸ್ಕಾರ, ಸಂಸ್ಕೃತಿಯ ಬೇರು ಕರಾವಳಿಯಲ್ಲಿ ನೆಲೆಯಾಗಿದೆ. ಪ್ರೀತಿಸುವುದಲ್ಲಿ ಎರಡು ಕಾರಣಗಳಿದ್ದು, ಒಂದು ಅಂತರಂಗವಾಗಿ ಪ್ರೀತಿಸುವುದು, ಇನ್ನೊಂದು ಕಾರಣವಾಗಿ ಪ್ರೀತಿಸುವುದು. ನಾವೂ ಅಕ್ಷರಗಳ ಮೂಲಕ ನಾಡಿಗೆ ಮೂಡಬೇಕು. ನೀವು ನೀಡಿರುವ ಈ ಪ್ರೀತಿ ನನ್ನ ತಂದೆ ತಾಯಿಗಳಿಗೆ ಸಲ್ಲುವಂಥದ್ದು. ನಾಡಿಗೆ ನಮನ ಮಾಲೆಯನ್ನು ಕರ್ನಾಟಕ ಗುರುತಿಸಿದೆ ಎಂದು ನಾಡಿನ ಹಿರಿಯ ವಿದ್ವಾಂಸ, ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ| ನಾ. ಮೊಗಸಾಲೆ ಹೇಳಿದರು.

Advertisement

. 8ರಂದು ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯ ಮೈಸೂರು ಅಸೋಸಿಯೇಶನ್‌ನ ಕಿರು ಸಭಾಗೃಹದಲ್ಲಿ ನಡೆದ ಸಾಹಿತ್ಯ ಬಳಗ ಮುಂಬಯಿ ಇದರ ರಜತೋತ್ಸವ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಅಭಿಮಾನ, ಗೌರವಕ್ಕೆ ತಲೆಬಾಗುತ್ತೇನೆ. ಮುಂಬಯಿ ಕನ್ನಡಿಗರಿಂದ ನಡೆಯುವಷ್ಟು ಕನ್ನಡಪರ ಕಾರ್ಯಕ್ರಮ ಗಳು ಬೇರೆಲ್ಲೂ ನಡೆಯುತ್ತಿಲ್ಲ. ಮುಂಬಯಿಗೆ ಬರಲು ಖುಷಿ ಯಾಗುತ್ತದೆ ಎಂದರು.

ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ, ತ್ರಿಭಾಷಾ ಪಂಡಿತ ಡಾ| ಎಸ್‌. ಕೆ. ಭವಾನಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಋಗ್ವೇದ ಘನಪಾಠಿ ದುರ್ಗಾಪ್ರಸಾದ್‌ ಭಟ್‌ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸ್ವಸ್ತಿ ವಾಚನಗೈದರು. ಕನ್ನಡ ವಿಭಾಗ ಮುಂಬಯಿ ವಿಶ್ವ ವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್‌ ಮುಂಬಯಿ ಸಹ ಯೋಗದಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ನಾಡಿಗೆ ನಮಸ್ಕಾರ ಯೋಜನೆಯಡಿ 228 ಕೃತಿಗಳನ್ನು ಪ್ರಕಟಿಸಿ ವಿಜಯರಥ ಶಾಂತಿ ಆಚರಿಸಿದ ನಾಡಿನ ಹಿರಿಯ ಸಾಹಿತಿ ಡಾ| ನಾ. ಮೊಗಸಾಲೆ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.

ಸಾಹಿತಿ ಕೆ. ಎಲ್‌. ಕುಂಡಂತಾಯ ಅಭಿನಂದನಾ ಭಾಷಣಗೈದು ಕೃಷಿ ಹಿನ್ನಲೆಯಿಂದ ಬಂದ ಡಾ| ಮೊಗಸಾಲೆ ಕಾಂತಾವರಕ್ಕೆ ಬಂದಾಗ ಕಾಂತೇಶ್ವರ ದೇವಸ್ಥಾನದ ಗಂಟೆಯ ಕಲರವ ಮಾತ್ರ ಇತ್ತು. ಈಗ ಅಲ್ಲಿ ಸಾಹಿತ್ಯದ ಕಲರವ ಕೇಳಿಬರುತ್ತದೆ. ಒಂದು ವಿವರಿಸಲಾಗದ ವ್ಯಕ್ತಿತ್ವ ನಾ. ಮೊಗಸಾಲೆ ಅವರದ್ದು, ಸಾಹಿತ್ಯವನ್ನು ಮಾತ್ರ ಪ್ರೀತಿಸುವುದಲ್ಲ, ಸಾಹಿತ್ಯ ಸಂಸ್ಕೃತಿಯನ್ನು ಒಂದುಗೂಡಿಸಿ ಮುನ್ನಡೆದವರು ಮೊಗಸಾಲೆ ಎಂದು ತಿಳಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾವು ಬೆಳೆಯುತ್ತಾ ಇತರರನ್ನು ಬೆಳೆಸಿದವರು ಎಂಭತ್ತೇಳರ ಎಚ್‌. ಬಿ. ಎಲ್‌ ರಾವ್‌ ಹಾಗೂ ಎಪ್ಪತ್ತೈದರ ನಾ. ಮೊಗಸಾಲೆ ಎಂದರು.

Advertisement

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ ಎನ್‌ಐಎ ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್‌ ಎಲ್‌. ಶೆಟ್ಟಿ, ಡಾ| ವ್ಯಾಸರಾಯ ನಿಂಜೂರು, ಟಿ. ಎನ್‌. ಅಶೋಕ, ಶ್ರೀನಿವಾಸ ಜೋಕಟ್ಟೆ, ಯು. ವೆಂಕಟ್ರಾಜ್‌, ಶ್ಯಾಮ್‌ ಎನ್‌. ಶೆಟ್ಟಿ ವಾಶಿ, ಡಾ| ಕೆ. ಗೋವಿಂದ ಭಟ್‌, ಸಾಹಿತ್ಯ ಬಳಗದ ಉಪಾಧ್ಯಕ್ಷರಾದ ಡಾ| ಕೆ. ಗೋವಿಂದ ಭಟ್‌ ಮತ್ತು ಡಾ| ಕರುಣಾಕರ ಎನ್‌. ಶೆಟ್ಟಿ, ಬಳಗದ ಗೌರವ ಕಾರ್ಯದರ್ಶಿ ಎಸ್‌. ಕೆ. ಸುಂದರ್‌, ಕೋಶಾಧಿಕಾರಿ ಸಾ. ದಯಾ (ದಯಾನಂದ ಸಾಲ್ಯಾನ್‌), ರಾಜು ಶ್ರೀಯಾನ್‌, ಅನುರಾಧಾ ರಾವ್‌, .ಆರ್‌ ನಾರಾಯಣ ರಾವ್‌, ನಿತ್ಯಾನಂದ ಡಿ. ಕೋಟ್ಯಾನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಎಚ್‌. ಬಿ. ಎಲ್‌ ರಾವ್‌ ಸ್ವಾಗತಿಸಿದರು. ಡಾ| ಜ್ಯೋತಿ ಸತೀಶ್‌, ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಜಿ. ಎಸ್‌. ನಾಯಕ್‌ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯ ವಿದುಷಿ ಸಹನಾ ಭಾರದ್ವಾಜ್‌ ಅವರಿಂದ ಸ್ವಾಗತಂ ಕೃಷ್ಣ ನೃತ್ಯ ರೂಪಕ, ಪದ್ಮಾವತಿ ಯು. ಭಟ್‌ ಮತ್ತು ತಂಡದಿಂದ ಜಾನಪದ ನೃತ್ಯ ಹಾಗೂ ಡಾ| . ವಿ. ರಾವ್‌ ಪ್ರಾಯೋಜಕತ್ವದಲ್ಲಿ ನಾಟ್ಯ ವಿದುಷಿ ಮೈತ್ರಿ ರಾವ್‌ ಬೆಂಗಳೂರು ಬಳಗದಿಂದ ಭರತನಾಟ್ಯ ಪ್ರದರ್ಶನಗೊಂಡಿತು.

 

ಚಿತ್ರವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next