ಶ್ರೀನಗರ: ಹತ್ಯೆಗೀಡಾದ ಉಗ್ರರ ಶವಗಳನ್ನು, ಅವರ ಕುಟುಂಬಗಳಿಗೆ ಹಸ್ತಾಂತರಿಸದೆ ಇರಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರ್ಧರಿಸಿದ್ದಾರೆ. ಬದಲಾಗಿ ಸ್ಥಳೀಯ ಮ್ಯಾಜಿಸ್ಟ್ರೇಟ್ ಅಧಿಕಾರಿಗಳ ನೆರವಿನೊಂದಿಗೆ ಕುಟುಂಬದವರ ಸಮ್ಮುಖದಲ್ಲಿ ಸ್ವತಃ ಪೊಲೀಸರೇ ಶವಗಳನ್ನು ಮಣ್ಣು ಮಾಡಲಿದ್ದಾರೆ.
ಇತ್ತೀಚೆಗಷ್ಟೇ ಸೋಪುರ್‌ನಲ್ಲಿ ಹತ್ಯೆಗೀಡಾದ ಜೈಶ್- ಎ- ಮೊಹಮ್ಮದ್ ಉಗ್ರ ಸಜ್ಜಾದ್‌ನ ಅಂತ್ಯಕ್ರಿಯೆ ವೇಳೆ ನೂರಾರು ಜನ ಪಾಲ್ಗೊಂಡು, ಆತಂಕ ಮೂಡಿಸಿದ್ದರು. ಕುಲ್ಗಾಂವ್‌ನ ಉಗ್ರ ಮೊಹಮ್ಮದ್ ಅಶ್ರಫ್ ಅಂತ್ಯಕ್ರಿಯೆ ವೇಳೆಯೂ ಜನದಟ್ಟಣೆ ನಿಯಂತ್ರಿಸುವುದು ಪೊಲೀಸರಿಗೆ ತಲೆನೋವಾಗಿತ್ತು. 370 ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಜೆಹಾದಿಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಎ.22ರಂದು ಹತರಾದ ನಾಲ್ವರು ಉಗ್ರರ ಅಂತ್ಯಕ್ರಿಯೆಯನ್ನು ಸ್ವತಃ ಪೊಲೀಸರೇ ನಿರ್ವಹಿಸಿದ್ದಾರೆ.
“ಅಂತ್ಯಕ್ರಿಯೆ ವೇಳೆ ಜನಜಂಗುಳಿ ತಪ್ಪಿಸಲು ಪೊಲೀಸರೇ ಉಗ್ರರ ಶವಸಂಸ್ಕಾರ ನಡೆಸಬೇಕಾಗಿದೆ. ವಾರಸುದಾರರಿಲ್ಲದ ಶವಗಳನ್ನೂ ಅಧಿಕಾರಿಗಳೇ ಮಣ್ಣು ಮಾಡಲಿದ್ದಾರೆ’ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಗೌರವಯುತ ಸಮಾಧಿ: ಧಾರ್ಮಿಕ ಭಾವನೆಗಳನ್ನು ಗೌರವಿಸಿಯೇ, ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸ ಲಾಗುತ್ತದೆ. ಅಗತ್ಯಬಿದ್ದಲ್ಲಿ ಡಿಎನ್‌ಎ ಮಾದರಿಗಳನ್ನು ಹೋಲಿಕೆ ಮಾಡಿಯೇ, ಸಮಾಧಿಕ್ರಿಯೆ ನಡೆಸಲಾಗುತ್ತದೆ.
ಪ್ರಚೋದನೆ ಸಾಧ್ಯತೆ: ಉಗ್ರರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಜನ, ಸರಕಾರವನ್ನು ವಿರೋಧಿಸುತ್ತಿದ್ದಾರೆ ಎಂದು ಅರ್ಥ. ಇದನ್ನು ಈಗಲೇ ನಿಯಂತ್ರಿಸಬೇಕಿದೆ. ಹೂಳಲ್ಪಟ್ಟ ಶವಗಳನ್ನು ಉಗ್ರರು ಹೊರ ತೆಗೆದು, ಬೇರೆ ಬೇರೆ ಹಳ್ಳಿಗಳತ್ತ ಕೊಂಡೊಯ್ಯುವ ಸಾಧ್ಯತೆಯೂ ಇದೆ. ಇದು ಇನ್ನಷ್ಟು ಪ್ರತ್ಯೇಕವಾದಿ ಚಟುವಟಿಕೆಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎನ್ನುವ ವಾದವೂ ಹುಟ್ಟಿಕೊಂಡಿದೆ.