Advertisement
ಈ ಕುರಿತು ಮೆಟ್ರೋ ಉದ್ಯೋಗಿಗಳ ಒಕ್ಕೂಟ ಹಾಗೂ ಇಬ್ಬರು ನೌಕರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ಅಧಿಸೂಚನೆಗೆ ಮುಂದಿನ ವಿಚಾರಣೆಯವರೆಗೂ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
Related Articles
Advertisement
ಅರ್ಜಿದಾರರ ಆರೋಪ: ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಕ್ಷುಲ್ಲಕ ಕಾರಣಕ್ಕೆ ಮೆಟ್ರೋ ಸಿಬ್ಬಂದಿಯನ್ನು ಕೇಂದ್ರ ಕೈಗಾರಿಕಾ ಭದ್ರತಾಪಡೆ ಸಿಬ್ಬಂದಿ ಥಳಿಸಿದ್ದನ್ನು ಖಂಡಿಸಿ ಜುಲೈ 7ರಂದು ನಗರದ ಎಲ್ಲ ಮೆಟ್ರೋ ನಿಲ್ದಾಣಗಳ ಬಳಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು.
ಮೆಟ್ರೋ ಟರ್ಮಿನಲ್ ಇರುವ ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರಿಂದ ಮೆಟ್ರೋ ಸಂಚಾರ ಕೆಲ ಗಂಟೆಗಳ ಕಾಲ ರದ್ದಾಗಿತ್ತು. ಆದರೆ, ಪ್ರತಿಭಟನೆ ಹತ್ತಿಕ್ಕುವ ಸಲುವಾಗಿಯೇ ಎಸ್ಮಾ ಕಾಯಿದೆ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮೂಲಕ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಪ್ರತಿಭಟನೆ ಹಿಂಪಡೆಯುವಂತೆ ಮಾಡಿತ್ತು.
ಆದರೆ, ಕೇಂದ್ರ ರೈಲ್ವೇ ಇಲಾಖೆ ವ್ಯಾಪ್ತಿಗೆ ಒಳಪಡಲಿರುವ ಬಿಎಂಆರ್‌ಸಿಎಲ್ ಸಿಬ್ಬಂದಿಗೆ ಎಸ್ಮಾ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಮೆಟ್ರೋ ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು, ಅನ್ಯಾಯದ ಬಗ್ಗೆ ಸಿಬ್ಬಂದಿ ಧ್ವನಿ ಎತ್ತದಂತೆ ಮಾಡುವ ದುರುದ್ದೇಶದಿಂದ ಎಸ್ಮಾ ಜಾರಿಗೊಳಿಸಿದ್ದಾರೆ.
ಈಗಾಗಲೇ ಮೆಟ್ರೋ ಸಿಬ್ಬಂದಿ ಹಲವು ತೊಂದರೆ ಅನುಭವಿಸುತ್ತಿದ್ದು, ಇದೀಗ ಎಸ್ಮಾ ಅನ್ವಯವಾಗಲಿದೆ ಎಂದು ಹೊರಡಿಸಿರುವ ಅಧಿಸೂಚನೆಯಿಂದ ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ. ಹೀಗಾಗಿ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಮೆಟ್ರೋ ವಿರುದ್ಧದ 2ನೇ ರಿಟ್ ಅರ್ಜಿ!: ಮೆಟ್ರೋ ನಿಯಮಾವಳಿ ಹಾಗೂ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಕೆಯಾದ ಎರಡನೇ ರಿಟ್ ಅರ್ಜಿ ಇದಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಬಿಎಂಆರ್‌ಸಿಎಲ್ ಉದ್ಯೋಗಿಗಳ ವರ್ತನೆ, ಶಿಸ್ತು ಹಾಗೂ ಅಪೀಲು ನಿಯಮಾವಳಿ (ಸಿಡಿಎ) -2014 ಅನ್ನು ರದ್ದುಗೊಳಿಸುವಂತೆ ಕೋರಿ ಮೆಟ್ರೋ ಉದ್ಯೋಗಿಗಳ ಒಕ್ಕೂಟ, ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ತುರ್ತು ನೋಟಿಸ್ ಜಾರಿಗೊಳಿಸಿ ಸೆ.6ಂದು ಹೈಕೋರ್ಟ್ ಆದೇಶಿಸಿತ್ತು.