ಬೆಂಗಳೂರು: ಸರ್ ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ರಘು ಅವರು ಶುಕ್ರವಾರ ಬೆಳಗ್ಗೆ ಕ್ಷೇತ್ರದ ಕೊನೇನ ಅಗ್ರಹಾರದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರೆ, ಸಂಜೆ ಬೈಯಪ್ಪನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಬೃಹತ್ ರ್ಯಾಲಿ ಮೂಲಕ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಶಾಸಕನಾಗಿ, ಸಾಮಾನ್ಯ ಕಾರ್ಯಕರ್ತನಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ. ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದೇನೆ. ಮೊದಲ ಬಾರಿಗೆ ಕ್ಷೇತ್ರಕ್ಕೆ ಮೆಟ್ರೋ ರೈಲು ತಂದ ತೃಪ್ತಿ ಇದೆ.
ಆದರೆ, ಅದರ ಕೀರ್ತಿ ಈ ಭಾಗದ ಜನತೆಗೆ ಸಲ್ಲಬೇಕು. ನನ್ನ ಪ್ರಕಾರ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರ ಸಿ.ವಿ. ರಾಮನ್‌ನಗರ. ಇಲ್ಲಿ ಎಲ್ಲ ವರ್ಗದ ಜನತೆ ವಾಸಿಸುತ್ತಿದ್ದು ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಈ ಕ್ಷೇತ್ರದಲ್ಲಿರುವ ಸುಸಂಸ್ಕೃತ ಹಾಗೂ ಬುದ್ಧಿವಂತ ಮತದಾರರು ಪ್ರತಿ ಕ್ಷಣವೂ ಗಮನಿಸುತ್ತಲಿದ್ದಾರೆ ಹಾಗೂ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕಂಡಿದ್ದಾರೆ.
ಆ ಮೂಲಕ ನನ್ನನ್ನು ಗುರುತಿಸಿದ್ದಾರೆ. ಕ್ಷೇತ್ರದ ಮತದಾರರು ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈ ಬಾರಿ ಕೂಡ ಗೆಲ್ಲಿಸುವ ಮೂಲಕ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರ ಕಾರ್ಯದಲ್ಲಿ ಕೊನೇನಅಗ್ರಹಾರದ ಮಹಿಳೆಯರು, ಹಿರಿಯರು ಹಾಗೂ ಯುವಕರು ಶಾಸಕ ರಘು ಅವರ ಜೊತೆಗೂಡಿ ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ ಕಾರ್ಯಗಳ ವಿವರಗಳುಳ್ಳ ಕರಪತ್ರಗಳನ್ನು ಹಂಚುತ್ತಾ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.
ಬೈಯಪ್ಪನಹಳ್ಳಿಯಲ್ಲಿ ರ್ಯಾಲಿ: ಸಂಜೆ ಬೈಯಪ್ಪನಹಳ್ಳಿ ಹಾಗೂ ಬೆನ್ನಿಗಾನಹಳ್ಳಿ ವಾರ್ಡ್‌ನ ದಯಾನಂದನಗರದಲ್ಲಿ ಬೃಹತ್ ರ್ಯಾಲಿ ಮೂಲಕ ಎಸ್. ರಘು ಅವರು ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು ಎಂದು ಬಿಬಿಎಂಪಿ ಮಾಜಿ ಸದಸ್ಯ ಎಂ.ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.