ನವದೆಹಲಿ: 2020ರ ನಂತರ ಇ- ಮಾರುಕಟ್ಟೆ ಹಾಗೂ ಅದಕ್ಕೆ ತತ್ಸಮಾನವಾದ ಬ್ಯುಸಿನೆಸ್-ಟು-ಬ್ಯುಸಿನೆಸ್ ಉದ್ಯಮವು ದೇಶದಲ್ಲಿ ಗಣನೀಯ ಮಟ್ಟದಲ್ಲಿ ಅಭಿವೃದ್ಧಿಯಾಗಿದ್ದು, ದೇಶದ ಆರ್ಥಿಕತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ 2020ರ ನಂತರದ ಅವಧಿಯಲ್ಲಿ ಇಲ್ಲಿಯವರೆಗೆ 7,500 ಕೋಟಿ ರೂ. ಹೂಡಿಕೆ ಹರಿದುಬಂದಿದ್ದು, ಈ ಕಂಪನಿಗಳ ಮೌಲ್ಯವು ಪ್ರತಿ 3ರಿಂದ 4 ತಿಂಗಳಲ್ಲಿ ದುಪ್ಪಟ್ಟಾಗುತ್ತಿದೆ ತಜ್ಞರು ತಿಳಿಸಿದ್ದಾರೆ.
90ರ ದಶಕದ ಅಂತ್ಯದವರೆಗೂ ಭಾರತದಲ್ಲಿ ವಿವಿಧ ಉತ್ಪನ್ನಗಳು, ಗ್ರಾಹಕರನ್ನು ತಲುಪುವುದಕ್ಕೆ ಒಂದು ಸಾಂಪ್ರದಾಯಿಕ ಮಾರ್ಗವೊಂದು ಚಾಲ್ತಿಯಲ್ಲಿದೆ. “ಉತ್ಪಾದಕರು ತಮ್ಮ ಉತ್ಪನ್ನಗಳನ್ನು ದೊಡ್ಡ ಮಟ್ಟದ ಹಂಚಿಕೆದಾರನಿಗೆ ಮಾರುವುದು- ಆತ ಉತ್ಪನ್ನಗಳ ದೈತ್ಯ ಸರಬರಾಜನ್ನು ದಾಸ್ತಾನು ಮಾಡಿ ಅಲ್ಲಿಂದ ವಲಯವಾರು ಸಣ್ಣ ಹಂಚಿಕೆದಾರರಿಗೆ ಮಾರಾಟ ಮಾಡುವುದು- ಅಲ್ಲಿಂದ ಅವು ರಿಟೇಲ್ ಅಂಗಡಿಗಳಿಗೆ ಬರುವುದು – ಆನಂತರದಲ್ಲಿ ಅವು ಗ್ರಾಹಕರನ್ನು ತಲುಪುವುದು’.. ಇಂಥದ್ದೊಂದು ಸಿದ್ಧ ಮಾದರಿ ನಮ್ಮಲ್ಲಿತ್ತು, ಈಗಲೂ ಇದೆ.
ಆದರೆ, 2000 ದಶಕದಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಿದಂತೆಲ್ಲಾ ಆನ್‌ಲೈನ್ ವ್ಯಾಪಾರಿಗಳು ಈ ಹಂಚಿಕೆ ಕ್ಷೇತ್ರಕ್ಕೆ ಲಗ್ಗೆಯಿಟ್ಟರು. ಉತ್ಪಾದಕರಿಂದ ಈ ಕಂಪನಿಗಳು ಸಾಮಗ್ರಿಗಳನ್ನು ಖರೀದಿಸಿ, ಅವುಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ.
ಇದನ್ನೂ ಓದಿ:ಯಾವುದೇ ಕ್ರೀಡೆಯಲ್ಲಿ ಆಡುವಾಗ ಗೆಲ್ಲಲೆಂದೇ ಆಡಬೇಕು : ಮುಖ್ಯಮಂತ್ರಿ ಬೊಮ್ಮಾಯಿ
ಸಾಂಪ್ರದಾಯಿಕ ಶೈಲಿಯ ವಿತರಣಾ ವ್ಯವಸ್ಥೆಯಲ್ಲಿ ಸಣ್ಣ ಪ್ರಮಾಣದ ಸಾಲದ ಆಧಾರದಲ್ಲಿ (ಸ್ಮಾಲ್ ಕ್ರೆಡಿಟ್) ಆಧಾರದಲ್ಲಿ ಹಂಚಿಕೆದಾರರ ನಡುವೆ ನಡೆಯುತ್ತಿದ್ದ ಸಾಲ ಕೋಟ್ಯಂತರ ರೂ.ಗಳಿಗೆ ಏರಿ ಅದು ನಿಗದಿತ ಸಮಯದಲ್ಲಿ ಸಂದಾಯವಾಗದೇ ಉತ್ಪಾದನಾ ಕಂಪನಿಗಳು ಪರದಾಡುವಂತಾಗಿತ್ತು. ಆದರೆ, ಬ್ಯುಸಿನೆಸ್-ಟು-ಬ್ಯುಸಿನೆಟ್‌ನಲ್ಲಿ ಬ್ಯಾಂಕುಗಳ ಸಾಲ ಸೌಲಭ್ಯದೊಂದಿಗೆ ನೇರವಾಗಿ ಮಾರಾಟ ಮಾಡಲಾಗುತ್ತಿರುವುದರಿಂದ ಹಣ ಹರಿದಾಡುವಿಕೆಯೂ ಸರಾಗವಾಗಿ ನಡೆಯುತ್ತಿದೆ. ಇನ್ನು, ಹೊಸ ಗ್ರಾಹಕರನ್ನು ಹುಡುಕುವ ಕಷ್ಟವೂ ಉತ್ಪಾದನಾ ಕಂಪನಿಗಳಿ ತಪ್ಪಿದೆ. ಹಾಗಾಗಿ, ಈ ಕ್ಷೇತ್ರ ಬೆಳೆದಿದೆ ಎಂದು ಹೇಳಲಾಗಿದೆ.