Advertisement

ವಿಶ್ರಾಂತಿಗಾಗಿ ಬಂದು ಬೆಂಗಳೂರಿಗೆ ವಿಶ್ವಖ್ಯಾತಿ ತಂದ ಲೋಹದ ಹಕ್ಕಿಗಳು

06:18 AM Feb 18, 2019 | |

ಲೋಹದ ಹಕ್ಕಿಗಳಿಗೂ ಮತ್ತು ಉದ್ಯಾನ ನಗರಿಗೂ ವೈಜ್ಞಾನಿಕ ಮತ್ತು ಭಾವನಾತ್ಮಕ ನಂಟಿದೆ. ಆ ಅವಿನಾಭಾವ ನಂಟು ಬೆಸೆದದ್ದು ಎರಡನೇ ಮಹಾಯುದ್ಧದ ಮೂಲಕ. ಯುದ್ಧದಲ್ಲಿ ಹೊಡೆದಾಡಿ ದಣಿದು ವಿಶ್ರಾಂತಿಗೆಂದು ಬೆಂಗಳೂರಿಗೆ ಬಂದಿಳಿದ ವಿಮಾನಗಳು, ಇಲ್ಲಿ ವೈಮಾನಿಕ ಕ್ಷೇತ್ರ ಬೇರೂರಲು ನಾಂದಿ ಹಾಡಿದವು. ಮುಂದೆ ವಿಮಾನಗಳ ರಿಪೇರಿಯಿಂದ ಆರಂಭವಾಗಿ, ವಿಮಾನ ತಯಾರಿಸುವ ಹಂತದವರೆಗೂ ಕ್ಷೇತ್ರ ವಿಸ್ತರಣೆಗೊಂಡಿತು. ಕಾಲಕ್ರಮೇಣ ಅಂತಾರಾಷ್ಟ್ರೀಯ ಏರೋನಾಟಿಕ್‌ ಸಂಸ್ಥೆಗಳು ನಗರದತ್ತ ಮುಖ ಮಾಡಿದವು. ನಂತರದಲ್ಲಿ  ವಿಶ್ವ ವಿಖ್ಯಾತ “ಏರೋ ಇಂಡಿಯಾ’ ಪ್ರದರ್ಶನ ಆರಂಭವಾಗುತ್ತದೆ. ಈ “ವಿಮಾನ ಯಾನದ’ ಮಾಹಿತಿ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

Advertisement

ಬೆಂಗಳೂರು: ಅದು 1940ರ ಆಸುಪಾಸು; ಅಂದರೆ ಎರಡನೇ ಮಹಾಯುದ್ಧದ ಸಮಯ. ಸಾಮ್ರಾಜ್ಯ ಸ್ಥಾಪನೆಗೆ ಹಲವಾರು ಬಲಾಡ್ಯ ದೇಶಗಳು ಪರಸ್ಪರ ಕಾದಾಟಕ್ಕೆ ಇಳಿದಿದ್ದವು. ಯುದ್ಧದಲ್ಲಿ ಕಾದಾಡಿ ದಣಿದ ಲೋಹದ ಹಕ್ಕಿಗಳು ಉದ್ಯಾನ ನಗರಿಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದವು. ಹೀಗೆ ಹಾರಿಬಂದ “ಹಕ್ಕಿ’ಗಳಿಗೆ ಬೆಂಗಳೂರಿನ ಹಿತವಾದ ವಾತಾವರಣ ಹಿಡಿಸಿತು. ಕೊನೆಗೆ ಅವೆಲ್ಲವೂ ಈ ಊರಿನವೇ ಆಗಿ, ತಮ್ಮ ಸಂತತಿಯನ್ನು ಮುಂದುವರಿಸಿದವು.

ಇವುಗಳ ಸಂತತಿ ಎಷ್ಟರಮಟ್ಟಿಗೆ ಬೆಳೆಯಿತೆಂದರೆ ನಂತರದ ದಿನಗಳಲ್ಲಿ ಈ ಲೋಹದ ಹಕ್ಕಿಗಳ ಸಂತೆಯೇ ಇಲ್ಲಿ ಆರಂಭವಾಯಿತು. ಜಾಗತಿಕ ಮಟ್ಟದಲ್ಲಿ ಬೆರಳೆಣಿಕೆಯಷ್ಟು ಕಡೆ ಮಾತ್ರ ನಡೆಯುವ ಈ ಅಪರೂಪದ ಸಂತೆಗೆ ಪ್ರಪಂಚದ ದೊಡ್ಡ ದೊಡ್ಡ ದೇಶಗಳಿಂದ ವ್ಯಾಪಾರಿಗಳು ಬರಲು ಶುರುಮಾಡಿದರು. ತಮ್ಮಲ್ಲಿರುವ ಬಣ್ಣ ಬಣ್ಣದ “ಹಕ್ಕಿ’ಗಳ ಪ್ರದರ್ಶನಕ್ಕೂ ಇದು ವೇದಿಕೆ ಕಲ್ಪಿಸಿತು. ಅದುವೇ ವೈಮಾನಿಕ ಪ್ರದರ್ಶನ “ಏರೋ ಇಂಡಿಯಾ ಶೋ’.

ಲೋಹದ ಹಕ್ಕಿಗಳಿಗೂ ಮತ್ತು ಉದ್ಯಾನ ನಗರಿಗೂ ವೈಜ್ಞಾನಿಕ ಮತ್ತು ಭಾವನಾತ್ಮಕ ನಂಟಿದೆ. ಆ ನಂಟು ಬೆಸೆದದ್ದು ಎರಡನೇ ಮಹಾಯುದ್ಧದೊಂದಿಗೆ. ಈ ಯುದ್ಧದ ನಂತರ ಚೀನಾದಲ್ಲಿ ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಾಯಿತು. ಚಕ್ರಾಧಿಪತ್ಯ ಹೊಂದಿದ್ದ ಇಂಗ್ಲೆಂಡ್‌ ತನ್ನ ವಸಾಹತುಗಳನ್ನು ಕಳೆದುಕೊಂಡಿತು. ಅಮೆರಿಕ ಮತ್ತಷ್ಟು ಬಲಾಡ್ಯವಾಯಿತು. ಜಾಗತಿಕ ಮಟ್ಟದಲ್ಲಿ ರಷ್ಯಾ ಪ್ರಭಾವ ಹೆಚ್ಚಾಯಿತು. ಈ ಎಲ್ಲ ಏರಿಳಿತಗಳ ನಡುವೆ ಬೆಂಗಳೂರಿನಲ್ಲಿ ವೈಮಾನಿಕ ಕ್ಷೇತ್ರಕ್ಕೂ ನಾಂದಿಹಾಡಿತು.

ಅವಕಾಶಗಳ ಬಾಗಿಲು ತೆರೆಯಿತು: “40ರ ದಶಕದಲ್ಲಿ ಜಪಾನ್‌ ಮತ್ತು ಇಂಗ್ಲೆಂಡ್‌ ನಡುವೆ ಯುದ್ಧ ನಡೆದಾಗ, ಕಾದಾಡುವ ಯುದ್ಧ ವಿಮಾನಗಳ ರಿಪೇರಿ, ನಿರ್ವಹಣೆ, ಎಲ್ಲಿ ನಿಲ್ಲಿಸುವುದು ಎಂಬ ಚಿಂತೆ ಬ್ರಿಟಿಷರನ್ನು ಕಾಡುತ್ತಿತ್ತು. ಆಗ ಆಯ್ಕೆ ಮಾಡಿಕೊಂಡಿದ್ದು ಭಾರತವನ್ನು. ಅದರಲ್ಲೂ ಬೆಂಗಳೂರು ಸೂಕ್ತ ಎಂಬ ನಿರ್ಧಾರಕ್ಕೆ ಬಂದರು. ಇದಕ್ಕೂ ಮುನ್ನ ಮದ್ರಾಸ್‌ ಆಯ್ಕೆಯಾಗಿತ್ತು.

Advertisement

ಆದರೆ, ಅಲ್ಲಿ ಹಡಗುಗಳಿಂದ ವಿಮಾನವೊಂದನ್ನು ಸ್ಫೋಟಿಸಿದ ಘಟನೆಯೂ ನಡೆಯಿತು. ಆದ್ದರಿಂದ ಕಡಲ ತೀರಗಳಿಲ್ಲದ ಹಾಗೂ ರೆಸಿಡೆಂಟ್‌ ಮತ್ತು ಕಂಟೋನ್‌ಮೆಂಟ್‌ ಇರುವ ಬೆಂಗಳೂರು ಬೆಸ್ಟ್‌ ಎಂಬ ನಿರ್ಣಯಕ್ಕೆ ಬರಲಾಯಿತು. ಯುದ್ಧ ಮುಗಿಸಿದ ವಿಮಾನಗಳು ಈಗಿನ ಎಚ್‌ಎಎಲ್‌ನಲ್ಲಿ ಬಂದು ನಿಲ್ಲುತ್ತಿದ್ದವು. ಅವುಗಳನ್ನು ನಗರದ ಜನ ಕಣ್ಣರಳಿಸಿ ನೋಡುತ್ತಿದ್ದರು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಆಗ ನನಗೆ ಬಹುಶಃ ಆರು ವರ್ಷ ಇರಬೇಕು,’ ಎಂದು ವಿಜ್ಞಾನಿ ಡಾ.ರೊದ್ದಂ ನರಸಿಂಹ ಮೆಲುಕು ಹಾಕಿದರು. 

“ಹೀಗೆ ಬಂದು ನಿಲ್ಲುವ ಯುದ್ಧ ವಿಮಾನಗಳ ರಿಪೇರಿಗೆ ಜನರೂ ಬೇಕಾಯಿತು. ಆಗ, ಸ್ಥಳೀಯರಿಗೆ ಆಹ್ವಾನ ಬಂದಿತು. ಈ ಮೂಲಕ ವೈಮಾನಿಕ ಕ್ಷೇತ್ರದಲ್ಲಿ ಅವಕಾಶಗಳ ಬಾಗಿಲು ತೆರೆಯಿತು. ನಮ್ಮ ಜತೆಗಿನವರೊಬ್ಬರು ವಿಮಾನಗಳ ರಿಪೇರಿ ಕೆಲಸಕ್ಕೆ ಹೋಗುತ್ತಾರೆ ಎನ್ನುವುದೇ ಒಂದು ರೀತಿಯ ಬೆರಗು. ಮತ್ತೂಂದೆಡೆ ಖಾಸಗಿ ಕಂಪನಿಯಾಗಿದ್ದ ವಾಲ್‌ಚಂದ್‌ ಹೀರಾಚಂದ್‌ ಮುಂದೆ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಚ್‌ಎಎಲ್‌ ಆಯಿತು. ಬೇರೆ ದೇಶಗಳಿಂದ ವಿಮಾನಗಳನ್ನು ತರುವ ಬದಲಿಗೆ ನಾವೇ ಯಾಕೆ ತಯಾರಿಸಬಾರದು ಎಂಬ ಆಲೋಚನೆ ಬಂತು. ಇದಕ್ಕೆ ಪೂರಕವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ 1942ರಲ್ಲಿ ಏರೋನಾಟಿಕ್ಸ್‌ ವಿಭಾಗವೂ ಆರಂಭವಾಯಿತು,’. 

ಮೊದಲ ವಿಮಾನ ಎಚ್‌ಟಿ-2: “ಏರೋನಾಟಿಕ್ಸ್‌ ವಿಭಾಗಕ್ಕೆ ಮುಖ್ಯ ವಿನ್ಯಾಸಕಾರರಾಗಿ ಮಹಾರಾಷ್ಟ್ರದ ಘಾಟಿಗೆ ಎಂಬುವವರನ್ನು ನೇಮಿಸಲಾಯಿತು. ಮುಂದೆ ಅವರ ನೇತೃತ್ವದಲ್ಲೇ ಮೊದಲ ಯುದ್ಧ ವಿಮಾನ ಹೊರತರಲಾಯಿತು. ಅದರ ಹೆಸರು “ಎಚ್‌ಟಿ-2′. ಇಬ್ಬರು ಕುಳಿತುಕೊಳ್ಳಬಹುದಾದ ಸಣ್ಣ ಗಾತ್ರದ ಈ ವಿಮಾನಕ್ಕೆ ಆ ಕಾಲದಲ್ಲಿ ಹೆಚ್ಚೆಂದರೆ 5ರಿಂದ 10 ಕೋಟಿ ರೂ. ಖರ್ಚಾಗಿರಬಹುದು. ನಾವೂ ವಿಮಾನ ಹಾರಿಸುವುದು ಹೇಗೆ ಎಂಬುದನ್ನು ತಿಳಿಯಲು ಇದು ಮೊದಲ ಹೆಜ್ಜೆಯಾಯಿತು.

ಇಲ್ಲಿಂದ ವಿದೇಶಗಳಿಗೆ ಹಾರುತ್ತಿದ್ದ ಏರೋನಾಟಿಕ್ಸ್‌ ಇಂಜಿನಿಯರುಗಳು ಇಲ್ಲಿಯೇ ಕೆಲಸ ಮಾಡಲು ಬರಲಾರಂಭಿಸಿದರು. ನಿಧಾನವಾಗಿ ವಿಮಾನಗಳ ವಿನ್ಯಾಸ ರೂಪಿಸುವ ವಿಜ್ಞಾನಿಗಳು ಕೂಡ ಇತ್ತ ಮುಖಮಾಡಿದರು,’. “ನಂತರದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಪೂರಕವಾದ, ಎಡಿಎ (ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಏಜೆನ್ಸಿ), ಎನ್‌ಎಎಲ್‌ (ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರೀಸ್‌), ಎಡಿಇ (ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್ಸ್‌) ರೀತಿಯ ಸಂಸ್ಥೆಗಳೂ ತಲೆಯೆತ್ತಿದವು.

ಅಷ್ಟೇ ಅಲ್ಲ, ಇಂದು ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ 300ಕ್ಕೂ ಅಧಿಕ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ಸರ್ಕಾರ ದೇವನಹಳ್ಳಿ ಬಳಿ ಏರೋಸ್ಪೇಸ್‌ ಪಾರ್ಕ್‌ ಸ್ಥಾಪಿಸಿದೆ. ಇಲ್ಲಿದ್ದಷ್ಟು ವಿಜ್ಞಾನಿಗಳು, ಕಂಪನಿಗಳು, ಇಂಜಿನಿಯರುಗಳು, ಸಂಶೋಧಕರು ದೇಶದಲ್ಲಿ ಎಲ್ಲಿಯೂ ಇಲ್ಲ. ಈ ಎಲ್ಲ ಕಾರಣಗಳಿಗಾಗಿ ಬೆಂಗಳೂರು “ಏರೋಸ್ಪೇಸ್‌ ರಾಜಧಾನಿ’ (Aerospace capital) ಕೂಡ ಆಯಿತು. ಈ ಹಿನ್ನೆಲೆಯಲ್ಲೇ ಈಗ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ “ಏರೋ ಇಂಡಿಯಾ ಶೋ’ಗೆ ನಾಂದಿ ಹಾಡಲಾಯಿತು,’ ಎಂದು ಪ್ರೊ.ರೊದ್ದಂ ತಿಳಿಸುತ್ತಾರೆ. 

“ಸೀ ಪ್ಲೇನ್‌’ಗಳ ರನ್‌ವೇ ಆಗಿತ್ತು ಬೆಳ್ಳಂದೂರು ಕೆರೆ!: ನೊರೆ ಮತ್ತು ಬೆಂಕಿಯಿಂದ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಈಗಿನ ಬೆಳ್ಳಂದೂರು ಕೆರೆಯಲ್ಲಿ, 40ರ ದಶಕದಲ್ಲಿ “sea plane’ (ಸಮುದ್ರ ವಿಮಾನ)ಗಳು ಬಂದಿಳಿಯುತ್ತಿದ್ದವು! ಅಚ್ಚರಿಯಾದರೂ ಇದು ನಿಜ. ಬೆಳ್ಳಂದೂರು ಕೆರೆ ಅತ್ಯಂತ ದೊಡ್ಡದಾಗಿದ್ದು, ಸರೋವರದಂತೆ ಇತ್ತು. ಹಾಗಾಗಿ, ಯುದ್ಧ ವಿಮಾನಗಳನ್ನು ಬ್ರಿಟಿಷರು ಆ ಕೆರೆಯ ಮೂಲಕ ತಂದಿಳಿಸುತ್ತಿದ್ದರು. ಇನ್ನೂ ವಿಶೇಷವೆಂದರೆ, ಎಚ್‌ಎಎಲ್‌ ಅನ್ನೇ ಆಯ್ಕೆ ಮಾಡಲು ಈ ಕೆರೆಯೂ ಒಂದು ಕಾರಣವಾಗಿತ್ತು. ಆದರೆ, ಆ ಕೆರೆಯೇ ಈಗ ಕಲುಷಿತಗೊಂಡು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ ಎಂದು ಪ್ರೊ.ರೊದ್ದಂ ಬೇಸರ ವ್ಯಕ್ತಪಡಿಸಿದರು. 

ಇಲ್ಲಿಯೇ ಯಾಕೆ?: ಪ್ರತಿ ಬಾರಿ ವೈಮಾನಿಕ ಪ್ರದರ್ಶನದ ಸಮೀಪಿಸಿದಂತೆ ಸ್ಥಳಾಂತರದ ಮಾತುಗಳು ಕೇಳಿಬರುತ್ತವೆ. ಸಾಮಾನ್ಯವಾಗಿ ಗೋವಾದಲ್ಲಿ ನಡೆಸಬೇಕು ಎಂಬ ಪ್ರಸ್ತಾವನೆ ಇತ್ತು. ಈ ಬಾರಿ ಮತ್ತೂಂದು ಹೆಸರು (ಉತ್ತರ ಪ್ರದೇಶದ ಲಖನೌನ ಬಕ್ಷಿ ಕಾ ತಲಾಬ್‌ ಏರ್‌ ಸ್ಟೇಷನ್‌) ಕೇಳಿಬಂದಿತ್ತು. ಆದರೆ ವಾಸ್ತವವಾಗಿ ಏರೋ ಇಂಡಿಯಾ ಪ್ರದರ್ಶನಕ್ಕೆ ಬೆಂಗಳೂರು ಹೊರತುಪಡಿಸಿದರೆ, ಬೇರೆ ಜಾಗ ಸೂಕ್ತವೇ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.

ಏಕೆಂದರೆ, ವೈಮಾನಿಕ ಕ್ಷೇತ್ರಕ್ಕೂ ಬೆಂಗಳೂರಿಗೂ ಐತಿಹಾಸಿಕ ಸಂಬಂಧ ಇದೆ. ಇಲ್ಲಿ ಏರೋ ಇಂಡಿಯಾ ಶೋ ಬರುವ ಮೊದಲೇ ಏರೋನಾಟಿಕ್ಸ್‌ ಇತ್ತು. ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಅತಿ ಹೆಚ್ಚು ಸಂಸ್ಥೆಗಳು ಇಲ್ಲಿವೆ. ವಿಮಾನಗಳ ವಿನ್ಯಾಸ, ತಯಾರಿಕೆ, ಪರೀಕ್ಷೆಗಳೆಲ್ಲವೂ ನಡೆಯುವುದು ಇಲ್ಲಿಯೇ. ಈ ಎಲ್ಲ ಕಾರಣಗಳಿಂದ ಉದ್ಯಾನ ನಗರಿಯೇ ಈ ಪ್ರದರ್ಶನಕ್ಕೆ ಸೂಕ್ತವಾದುದು ಎಂದು ಬೆಲ್ಜಿಯಂನ ಏರೋಸ್ಪೇಸ್‌ ಟ್ರೇಡ್‌ ಕಮಿಷನರ್‌ ಜಯಂತ್‌ ನಾಡಿಗ್‌ ತಿಳಿಸುತ್ತಾರೆ.

ಬಾಹ್ಯಾಕಾಶ ಚಟುವಟಿಕೆಗಳಿಗೂ ಮುನ್ನುಡಿ: ನಗರದಲ್ಲಿನ ವೈಮಾನಿಕ ಕ್ಷೇತ್ರದ ಬೆಳವಣಿಗೆಯು ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳಿಗೂ ಪ್ರೇರಣೆಯಾಯಿತು. ನಂತರದ ದಿನಗಳಲ್ಲಿ ಬೆಂಗಳೂರು ಬಾಹ್ಯಾಕಾಶ ರಾಜಧಾನಿಯಾಗಿಯೂ ಬೆಳಗಲು ಸಾಧ್ಯವಾಯಿತು.

ವಿಕ್ರಂ ಸಾರಾಭಾಯಿ ಅವರ ದಿಢೀರ್‌ ನಿರ್ಗಮನದ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯನ್ನು ಮುನ್ನಡೆಸುವ ಹೊಣೆ ವಹಿಸಿಕೊಂಡವರು ಪ್ರೊ.ಸತೀಶ್‌ ಧವನ್‌. ಈ ಜವಾಬ್ದಾರಿಯನ್ನು ಸ್ವೀಕರಿಸುವ ಮುನ್ನ ಪ್ರೊ.ಧವನ್‌, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಮೂರು ಷರತ್ತುಗಳನ್ನು ವಿಧಿಸಿದ್ದರು. ಆ ಷರತ್ತುಗಳಲ್ಲಿ ಇಸ್ರೋ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಮುಂದುವರಿಯಬೇಕು ಎನ್ನುವುದು ಕೂಡ ಒಂದಾಗಿತ್ತು. ಇದು ನಂತರದ ದಿನಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳಿಗೆ ಪ್ರೇರಣೆಯಾಯಿತು ಎನ್ನಲಾಗಿದೆ.

ಲೋಹದ ರೆಕ್ಕೆಗಳ ಮೇಲೆ ಬೆಕ್ಕಿನ ನಡಿಗೆ!: ಸಾಮಾನ್ಯವಾಗಿ ಓಣಿಯಲ್ಲಿ ಕೈಬಿಟ್ಟು ಬೈಸಿಕಲ್‌ ಓಡಿಸಲಿಕ್ಕೂ ನಾವು ಒದ್ದಾಡುತ್ತೇವೆ. ಹೀಗಿರುವಾಗ, ಆಗಸದಲ್ಲಿ ನೆಗೆಯುವ ವಿಮಾನಗಳ ಮೇಲೆ ನೃತ್ಯ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ ಹಾಗೂ ಈ ಸಾಹಸವನ್ನು ನೀವು ಈ ಬಾರಿಯ ಏರೋ ಇಂಡಿಯಾ ಶೋದಲ್ಲಿ ಕಣ್ತುಂಬಿಕೊಳ್ಳಲೂಬಹುದು.

2019ನೇ ಸಾಲಿನ ವೈಮಾನಿಕ ಪ್ರದರ್ಶನದಲ್ಲಿ ಸ್ಕೈಕ್ಯಾಟ್ಸ್‌ ಏರೋಬಾಟಿಕ್‌ ತಂಡದ ಸದಸ್ಯರು ಲೋಹದ ಹಕ್ಕಿಗಳ ರೆಕ್ಕೆಗಳ ಮೇಲೆ ಬೆಕ್ಕಿನ ನಡಿಗೆ ನಡೆಸಲಿದ್ದಾರೆ. ತಂಡದಲ್ಲಿನ ಹುಡುಗಿಯರು “ಲೇಜಿ ಕ್ಯಾಟ್‌’, ಸೂಪರ್‌ ಕ್ಯಾಟ್‌ ಮತ್ತಿತರ ಪ್ರಕಾರದ ನಡಿಗೆ ಮೂಲಕ ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಲಿದ್ದಾರೆ. ಹಾಗಾಗಿ, ಪ್ರದರ್ಶನದಲ್ಲಿ ಇದು ಪ್ರಮುಖ ಆಕರ್ಷಣೆ ಆಗಲಿದೆ. ಬೆಂಗಳೂರಿನ ಶೋನಲ್ಲಿ ಇದು ಈ ತಂಡದ ಎರಡನೇ ಪ್ರದರ್ಶನವಾಗಿದೆ.

ಇದಲ್ಲದೆ, ಮಾನವರಹಿತ ವಿಮಾನ “SKELDAR V-200′ ಮತ್ತೂಂದು ಆಕರ್ಷಣೆಯ ಕೇಂದ್ರಬಿಂದು ಆಗಿದೆ. ಮಧ್ಯಮ ಗಾತ್ರದ ಈ ವಿಮಾನವನ್ನು ಸ್ವೀಡಿಶ್‌ ಮೂಲದ ಸಾಬ್‌ ಏರೋಸ್ಪೇಸ್‌ ಕಂಪನಿ ಅಭಿವೃದ್ಧಿಪಡಿಸಿದೆ. ಇದನ್ನು ಸಾಮಾನ್ಯವಾಗಿ ವಿಚಕ್ಷಣ, ಲಘು ಸರಕು ಸಾಗಣೆ, ಎಲೆಕ್ಟ್ರಾನಿಕ್‌ ಆಧಾರಿತ ಯುದ್ಧಗಳು, ಇಂಟಲಿಜೆನ್ಸ್‌ಗಾಗಿ ಬಳಕೆ ಮಾಡಲಾಗುತ್ತದೆ.

“ಡಕೋಟ’ ಎಕ್ಸ್‌ಪ್ರೆಸ್‌!: ಭಾರತ-ಪಾಕಿಸ್ತಾನದ ನಡುವೆ 1947ರಲ್ಲಿ ಯುದ್ಧ ನಡೆದ ಸಂದರ್ಭದಲ್ಲಿ ಕೆಲಸ ಮಾಡಿದ ದೇಶದ ಮೊದಲ ಯುದ್ಧ ವಿಮಾನ “ಡಕೋಟ’ ಈ ಬಾರಿಯ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಲಿದೆ. 1947ರಲ್ಲಿ ಮಾತ್ರವಲ್ಲ; ನಂತರದ ನಡೆದ ಯುದ್ಧಗಳೂ ಸೇರಿದಂತೆ ಅನೇಕ ಸಂದರ್ಭದಲ್ಲಿ ಇದು ಸೇವೆ ಸಲ್ಲಿಸಿದೆ. 2011ರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ಹಳೆಯ “ಸಮರ ಹಕ್ಕಿ’ ಮತ್ತೆ ಗಗನಕ್ಕೆ ಚಿಮ್ಮಲು ಸಜ್ಜಾಗಿದೆ.

ಪ್ರದರ್ಶನದ ಮೇಲೆ ಕರಿನೆರಳು: ವೈಮಾನಿಕ ಪ್ರದರ್ಶನಕ್ಕೆ ತಿಂಗಳು ಬಾಕಿ ಇರುವಾಗಲೇ ನಡೆದ ಘಟನೆಗಳು ತುಸು ನಿರಾಸೆ ಮೂಡಿಸಿದ್ದು, ಇದು ಪ್ರದರ್ಶನದ ಸಂಭ್ರಮದ ಮೇಲೂ ಪರಿಣಾಮ ಬೀರುವಂತೆ ಮಾಡಿವೆ. ಈಚೆಗೆ ಪರೀಕ್ಷೆ ವೇಳೆ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಮಿರಾಜ್‌-2000 ಯುದ್ಧ ವಿಮಾನ ಪತನಗೊಂಡು, ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದರು. ಇದಾದ ಬಳಿಕ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ಆತ್ಮಾಹುತಿ ದಾಳಿ ಸಂಭವಿಸಿತು. ಇವೆರಡೂ ಕಹಿ ಘಟನೆಗಳ ನಡುವೆ ಪ್ರದರ್ಶನ ನಡೆಯುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಡ್ರೋಣ್‌ ಒಲಿಂಪಿಕ್‌!: ವಿಮಾನಗಳು ಮಾತ್ರವಲ್ಲ; ಡ್ರೋಣ್‌ಗಳು ಕೂಡ ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ನಡೆಸಲಿವೆ. ದೇಶದ ವಿವಿಧ ಪ್ರತಿಷ್ಠಿತ ಡ್ರೋಣ್‌ ತಯಾರಿಕೆ ಕಂಪನಿಗಳು ಇದರಲ್ಲಿ ಭಾಗವಹಿಸಲಿವೆ. ಈ ಬಾರಿ  ಡ್ರೋಣ್‌ ಒಲಿಂಪಿಕ್‌ ಸ್ಪರ್ಧೆ ಏರ್ಪಡಿಸಿದ್ದು, ಆರು ಪ್ರಕಾರಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ.ವರೆಗೂ ಬಹುಮಾನ ನೀಡಲಾಗುತ್ತಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next