Advertisement

ನೀರಿನ ಸದ್ಬಳಕೆಯ ಸಂದೇಶ ಸಾರುವ ಹನಿ ಧ್ವನಿ

05:03 PM Apr 11, 2019 | mahesh |

ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಇತ್ತೀಚೆಗೆ ನೀರಿನ ಕುರಿತ ವಿಶೇಷ ಉಪನ್ಯಾಸವನ್ನು ಆಯೋಜಿಸುವುದರೊಂದಿಗೆ ಜನಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಂದ ಕಿರು ಪ್ರಹಸನವೊಂದನ್ನೂ ಆಯೋಜಿಸಿತ್ತು. ಅದಮಾರುಮಠ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ನಡೆದ ಈ ಪ್ರಹಸನಕ್ಕೆ ವಿಶೇಷ ಕಾಳಜಿ ತೋರಿಸಿ, ಮಾರ್ಗದರ್ಶನ ನೀಡಿದವರು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷರೂ ಆಗಿರುವ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು.

Advertisement

ಪ್ರಹಸನವು ನೀರಿನ ಕುರಿತ ಹಾಡಿನ ಮೂಲಕ ಆರಂಭವಾಗುತ್ತದೆ. ನೀರೆ ನಮ್ಮ ಉಸಿರಾಟ, ನೀರಿಗಾಗಿ ಪರದಾಟ. ಸಮೂಹದಲ್ಲಿ ರಂಗ ಪ್ರವೇಶಿಸಿದ ವಿದ್ಯಾರ್ಥಿ ಕಲಾವಿದರು ನೀರಿನ ದುರುಪಯೋಗ ಹಾಗೂ ನೀರಿನ ಕೊರತೆ ಉಂಟಾಗಲು ಕಾರಣಗಳ ಬಗ್ಗೆ ಮೊದಲು ಗಮನ ಸೆಳೆಯುತ್ತಾರೆ. ಮರಗಳನ್ನು ಕಡಿದು ನಾಶ ಮಾಡುವುದು, ಅನಗತ್ಯವಾಗಿ ನೀರನ್ನು ಪೋಲು ಮಾಡುವುದು, ಕಾಂಕ್ರೀಟ್‌ ಕಾಡುಗಳ ನಿರ್ಮಾಣ, ಕಾರ್ಖಾನೆಗಳಿಂದ ಜಲಮಾಲಿನ್ಯ, ಮಿತಿ ಮೀರಿದ ಪ್ಲಾಸ್ಟಿಕ್‌ ಬಳಕೆ, ನೀರಿನ ಮಹಣ್ತೀ ಅರಿಯದ ಜನರು ಇತ್ಯಾದಿ. ಅಭಿನಯಗಳ ಮೂಲಕ ಅರ್ಥಪೂರ್ಣವಾಗಿ ಸಂವಹನ ಮಾಡುವಲ್ಲಿ ಕಲಾವಿದರು ಶ್ರಮಿಸಿದುದು ಉದ್ದಕ್ಕೂ ಗಮನ ಸೆಳೆಯುತ್ತದೆ. ನೀರಿನ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿನಿ ತನ್ನನ್ನು ಜನರು ಕಲುಷಿತಗೊಳಿಸುವ ಬಗ್ಗೆ, ಅನಗತ್ಯ ಪೋಲು ಮಾಡುವ ಬಗ್ಗೆ ಮಾತಿನ ಮೂಲಕ ಭಾವಪೂರ್ಣವಾಗಿ ನೋವನ್ನು ವ್ಯಕ್ತಪಡಿಸುತ್ತಾಳೆ. ಮುಂದಿನ ಭಾಗದಲ್ಲಿ ಕೊಡಪಾನಗಳನ್ನು ಹಿಡಿದು ನೀರಿಗಾಗಿ ಕಾಯುವ ಹೆಂಗಸರ ಸಂಭಾಷಣೆಯಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆಯ ಬಗ್ಗೆ ವಿಡಂಬನೆ ಇದೆ. ಟ್ಯಾಂಕರ್‌ ಮೂಲಕ ನೀರು ಬಂದಾಗ ನೀರಿಗಾಗಿ ಜನ ಬಡಿದಾಡುವ ಸನ್ನಿವೇಶ ನೀರಿನ ಅಭಾವದ ಪರಾಕಾಷ್ಠತೆಯನ್ನು ಚಿತ್ರಿಸುತ್ತದೆ. ನೀರಿನ ಕೊರತೆಯಿಂದ ಜೀವ ಸಂಕುಲಗಳ ನಾಶ, ಕಲುಷಿತ ನೀರಿನ ಸೇವನೆಯಿಂದ ಮಾನವ ಸಂಕುಲಕ್ಕೆ ಒದಗುವ ಅಪಾಯಗಳು ಪ್ರಹಸನದಲ್ಲಿ ಅಭಿವ್ಯಕ್ತಗೊಂಡವು.

ನೀರನ್ನು ಉಳಿಸುವ ಬಗ್ಗೆ ಪರಿಹಾರೋಪಾಯಗಳೂ ಕೊನೆಯ ಭಾಗದಲ್ಲಿ ಬಿಂಬಿತವಾಗಿದೆ. ಇಂಗು ಗುಂಡಿ ನಿರ್ಮಾಣ, ಮರಗಳನ್ನು ನೆಡುವುದು ಇತ್ಯಾದಿ ಅರ್ಥಪೂರ್ಣ ಪರಿಹಾರಗಳು ಇಂದು ಆಗಬೇಕಾದ ಅಗತ್ಯ ಕಾರ್ಯಕ್ರಮಗಳನ್ನು ಸೂಚಿಸುತ್ತದೆ. ನೀರಿನ ಪಾತ್ರಧಾರಿ ಅಂತಿಮವಾಗಿ ಜನಜಾಗೃತಿಗೊಂಡ ಬಗ್ಗೆ ಸಂತಸ ಪಡುತ್ತಾಳೆ. ನನ್ನನ್ನು ಉಳಿಸಿ ಎಂದು ಪ್ರಹಸನದ ಆರಂಭದಲ್ಲಿ ಕಣ್ಣೀರಿಟ್ಟ ತಾಯಿ, ಇದೀಗ ಜನ ತನ್ನನ್ನು ಉಳಿಸಲು ಶ್ರಮಿಸುತ್ತಿರುವ ಬಗ್ಗೆ ಆನಂದವನ್ನು ವ್ಯಕ್ತ ಪಡಿಸುತ್ತಾಳೆ. ಪ್ರಹಸನದ ನಡುವೆ ಮೂಡಿಬಂದ ವಿವಿಧ ರಾಗಗಳ ಆಲಾಪನೆಗಳು ಪ್ರಹಸನವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ಸನ್ನು ಕಂಡಿದೆ. ಪ್ರಹಸನದ ಉದ್ದಕ್ಕೂ ವಿದ್ಯಾರ್ಥಿಗಳ ಅಭಿನಯ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಪ್ರಹಸನದ ಪ್ರಧಾನ ನಿರ್ದೇಶಕರು ರಂಗಕರ್ಮಿ ದಿವಾಕರ ಕಟೀಲು.

ಡಾ|ಶ್ರೀಕಾಂತ್‌ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next