Advertisement

ಬೀದಿ ನಾಟಕ ನೀಡಿದ ಸಂದೇಶ ಆಕರ್ಷಕ

08:07 PM Apr 18, 2019 | mahesh |

ಹೀಗೆ ದಾರಿಯಲ್ಲಿ ಹೆಜ್ಜೆ ಹಾಕುತ್ತ ಬರುತ್ತಿರುವಾಗ‌ ಮರದ ನೆರಳಿನಡಿಯಲ್ಲಿ ಒಂದಷ್ಟು ಜನ ಸೇರಿದ್ದರು. ದೊಂಬರಾಟವೋ, ಅಪಘಾತವೋ ಎಂದು ಸೇರುವ ಮುಗಿಬಿದ್ದ ಗುಂಪು ಅದಾಗಿರಲಿಲ್ಲ. ಅತ್ತಿತ್ತ ನಡೆದಾಡುವ ಮಂದಿಯನ್ನು ಒಂದು ಕ್ಷಣ ನಿಲ್ಲಿಸಿ ತಮ್ಮ ಕೆಲಸ ಮರೆಸುವಂತೆ ಮಾಡುವ ಯುವ ಕಲಾವಿದರ ಅಭಿನಯ ಪ್ರದರ್ಶನ ಅಲ್ಲಿ ನಡೆಯುತ್ತಿತ್ತು. ದಾರಿಹೋಕರನ್ನು ಸೆಳೆಯುವ ಆ ಬೀದಿ ನಾಟಕ ಕಂಡಾಗ, ಏನಾದರೂ ಸಂದೇಶ ನಿಮಗೆ ಹೇಳಬೇಕೆಂದಿದ್ದರೆ ನಾಟಕದಷ್ಟು ಪ್ರಭಾವಶಾಲಿ ಮಾಧ್ಯಮ ಬೇರಿಲ್ಲ ಅನಿಸಿತು.

Advertisement

ಇತ್ತೀಚೆಗೆ ದೇಶದೆಲ್ಲೆಡೆ ಸ್ವಚ್ಛತೆಯ ಕುರಿತು ನಾನಾ ರೀತಿಯಲ್ಲಿ ಮನವರಿಕೆ ಮೂಡಿಸುವ ಪ್ರಯತ್ನ ಆಗುತ್ತಿದೆ. ನಮ್ಮ ಮನೆ, ನಮ್ಮ ಪರಿಸರವನ್ನು ಕಸಮುಕ್ತಗೊಳಿಸಿ ಸುಂದರವಾಗಿಡುವ ಬಗ್ಗೆ ಕಾತ್ಯಾಯಿನಿಯವರು ಬರೆದ ರಂಗಭೂಮಿ (ರಿ.) ಉಡುಪಿಯವರಿಂದ “ಕಸ ರಕ್ಕಸರು’ ಎಂಬ ಬೀದಿ ನಾಟಕ ಅಲ್ಲಿ ನಡೆಯುತ್ತಿತ್ತು. ಕಲಾವಿದರೆಲ್ಲಾ ಹಾಡುಗಾರಿಕೆ ನೃತ್ಯ ಗೊತ್ತಿದ್ದವರೇ ಇರುತ್ತಾರೆ. ಸಂಭಾಷಣೆಗಿಂತ ಹಾಡು, ಕುಣಿತಗಳ ಮೂಲಕ ವಿಷಯ ತಿಳಿಸುವುದು ಇಂಥ ನಾಟಕಗಳ ಆದ್ಯತೆಯಾಗಿರುವುದರಿಂದ ಜನರಿಗೆ ಆನಂದ ನೀಡುವಂತಿದ್ದುವು. ಹೆಚ್ಚಿನ ರಂಗಸಜ್ಜಿಕೆಗಳೇ ಇಲ್ಲದೆ, ಸಮವಸ್ತ್ರಗಳನ್ನು ಧರಿಸಿದವರೇ ಪಾತ್ರಧಾರಿಗಳೆಂದು ತಿಳಿಯುವ ಹಾಗಿತ್ತು. ಅಗತ್ಯವಿದ್ದ ಕಡೆ ಥರ್ಮಾ ಕೂಲ್‌/ಫೋಮ್‌ನಿಂದ ರಚಿಸಿದ ಪರಿಕರಗಳನ್ನು ಬಳಸುತ್ತಿದ್ದರು. ಉದಾಹರಣೆಗೆ ರಕ್ಕಸ ಕಿರೀಟ, ಮಾರುಕಟ್ಟೆಯಲ್ಲಿ ತರಕಾರಿ, ಮೀನು ಇತ್ಯಾದಿ. ಹಿನ್ನೆಲೆಗೆ ಬಣ್ಣ ಬಣ್ಣದ ಬಟ್ಟೆಗಳನ್ನು ಬೇಕಾದಂತೆ ಉಪಯೋಗಿಸುತ್ತಿದ್ದರು. ಬದಲಾಗುವ ಅಂಕದ ಪರದೆಯಿಲ್ಲ. ಮೈಕ್‌,ಸ್ಪೀಕರ್‌ಗಳಿಲ್ಲ.

ಕುತೂಹಲಕ್ಕಾದರೂ ಜನ ಸೇರುವುದು ಗೊತ್ತಿದೇ ರಂಗಕರ್ಮಿಗಳು ಬೀದಿಯಲ್ಲಿ ನಾಟಕವಾಡುವುದನ್ನು ಅಲ್ಲಗಳೆಯವಂತಿಲ್ಲ. ಜನಸಾಮಾನ್ಯರಿಗೆ ರಂಗ ಕಲೆ ಮುಟ್ಟಬೇಕು ಎನ್ನುವುದೇ ಮುಖ್ಯ ಉದ್ದೇಶ. ಇಂತಹ ಪ್ರಭಾವಶಾಲಿ ದೃಶ್ಯಮಾಧ್ಯಮ ಪರಿಣಾಮಕಾರಿಯಾದರೆ ಅವರ ಶ್ರಮ ಸಾರ್ಥಕವಾದಂತೆ. ನಾಟಕ ಬಯಲಾಟಗಳನ್ನು ನೋಡುವವರ ಮನರಂಜನೆಗಾಗಿ ಮತ್ತು ಆಡುವವರ ಹೊಟ್ಟೆ ಪಾಡಿಗಾಗಿ ಪ್ರದರ್ಶಿಸುವ ಕಲಾವಿದರು, ಒಂದೆರಡು ದಶಕಗಳಿಂದ ಜನ ಜಾಗೃತಿಗಾಗಿ ನಡೆಸುವ ಕಾರ್ಯಕ್ರಮಗಳಾಗಿ ಮಾರ್ಪಾಡಾಗಿವೆ.

ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲಾದ್ಯಂತ ವಿವಿದೆಡೆ ರಂಗಭೂಮಿ (ರಿ.) ಉಡುಪಿಯ ಮೂರು ತಂಡದಿಂದ ತಂಬಾಕಾಸುರ ವಧೆ, ತಾಯಿ ಮತ್ತು ಮಗು ಆರೈಕೆ ಹಾಗೂ ಕಿವಿಮಾತು ಎಂಬ ಮೂರು ಬೀದಿ ನಾಟಕ‌ಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಮೆಚ್ಚುಗೆ ಗಳಿಸಿತು. ಇದರ ಹಿನ್ನೆಲೆಯಲ್ಲಿ ಶ್ರೀಪಾದ ಹೆಗಡೆ, ಪೃಥ್ವಿನ್‌ ನೀನಾಸಂ, ಮಹೇಶ ಮಲ್ವೆ, ಗೀತಂ ಗಿರೀಶ ಮೊದಲಾದವರೊಂದಿಗೆ ರವಿರಾಜ್‌ ಎಚ್‌.ಪಿ. ಸಂಚಾಲಕತ್ವ ವಹಿಸಿದ್ದರು.

ಇತ್ತೀಚೆಗೆ ಸುಮನಸಾ ಕೊಡವೂರು ಆಯೊಜಿಸಿದ ರಂಗಹಬ್ಬ-7ರ ಸಲುವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ಸ್ಪರ್ಧೆ ಕೂಡ ಹಮ್ಮಿಕೊಂಡಿತ್ತು. ನವಚಿಗುರುಗಳಲ್ಲಿ ನಾಟಕಗಳ ನೈಜತೆ ಪರಿಚಿತಗೊಳಿಸುವುದನ್ನು ಗಮನದಲ್ಲಿರಿಸಿ ಯುವ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿತ್ತು. ಉಡುಪಿಯ ಭುಜಂಗ ಪಾರ್ಕ್‌ ಬಯಲು ರಂಗಮಂದಿರದಲ್ಲಿ ಸುಪ್ತ ಪ್ರತಿಭೆಗಳ ರಂಗಾಸಕ್ತಿ ಚಿಗುರೊಡೆಯಲು ಸ್ಪರ್ಧೆಯ ಮೂಲಕ ವೇದಿಕೆ ನಿರ್ಮಿಸಿದ್ದು ಇದೇ ಮೊದಲು. ಈ ಪ್ರಪಂಚವೇ ಒಂದು ರಂಗಮಂದಿರ. ನಾವೆಲ್ಲಾ ಅದರ ಪಾತ್ರಧಾರಿಗಳು ಎಂಬ ನಾಟಕ ಬ್ರಹ್ಮ ವಿಲಿಯಂ ಷೇಕ್ಸ್‌ಪಿಯರ್‌ ನುಡಿಮುತ್ತು, ನಮ್ಮ ನಡುವೆ ನಡೆಯುವ ಸಹಜ ಅಭಿನಯದ ಬೀದಿನಾಟಕಗಳಿಗೆ ಅನ್ವಯಿಸುತ್ತದೆ.

Advertisement

ಜೀವನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next