ಕಲಾದಗಿ: ಗ್ರಾಮದ ಗ್ರಂಥಾಲಯ ಅವ್ಯವಸ್ಥೆ ಆಗರವಾಗಿದೆ. ಗ್ರಾಮದ ಜನತೆಗೆ ಬೆಳಕಿನ ಜ್ಞಾನ ನೀಡುತ್ತಿರುವ ಗ್ರಂಥಾಲಯ ಬೆಳಕಿಲ್ಲದೆ ಕತ್ತಲಲ್ಲಿ ಸೊರಗುತ್ತಿದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲಾದಗಿ ಗ್ರಾಪಂನ ಗ್ರಂಥಾಲಯದಲ್ಲಿ ಬೆಳಕಿಲ್ಲ. ಕುಳಿತುಕೊಳ್ಳಲು ವ್ಯವಸ್ಥಿತ ಖುರ್ಚಿಗಳಿಲ್ಲ. ವ್ಯವಸ್ಥಿತ ಟೇಬಲ್‌ಗಳಿಲ್ಲದೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.
ಕಲಾದಗಿಯಲ್ಲಿ 12 ವಾರ್ಡ್‌ಗಳಿದ್ದು, 35 ಗ್ರಾಪಂ ಸದಸ್ಯರಿದ್ದಾರೆ. ಗ್ರಾಮದಲ್ಲಿ 201ರ ಜನಗಣತಿ ಪ್ರಕಾರ ಒಟ್ಟು 13,676 ಜನರಿದ್ದಾರೆ. ಈಗ 20 ಸಾವಿರ ಗಡಿ ದಾಟಿದೆ. 20 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಗ್ರಂಥಾಲಯ ಮೂಲಭೂತ ಸೌಲಭ್ಯವಿಲ್ಲದೆ ಓದುಗರು ತೊಂದರೆ ಅನುಭವಿಸುತ್ತಿದ್ದಾರೆ.
ಎರಡೇ ಪತ್ರಿಕೆ: ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಓದುಗರು ಬರುವ ಗ್ರಂಥಾಲಯಕ್ಕೆ ಎರಡೇ ದಿನ ಪತ್ರಿಕೆ ಸೌಲಭ್ಯವಿದೆ. ಗ್ರಾಮದ ಬಸ್ ನಿಲ್ದಾಣದ ಬಳಿಯಿರುವ ಗ್ರಂಥಾಲಯ ಗೋಡವಾನ್ ತರಹ ಕಾಣಿಸುತ್ತಿದೆ. ದ್ವಾರ ಬಾಗಿಲಲ್ಲಿ ದ್ವಿಚಕ್ರ ವಾಹನ ನಿಲುಗಡೆ ಸ್ಥಳವಾಗಿ ಪರಿಣಮಿಸಿದೆ.
ಗೋಡೆ ಬಿರುಕು: ಗ್ರಂಥಾಲಯದ ಗೋಡೆಗಳು ಅಲ್ಲಲ್ಲಿಬಿರುಕು ಬಿಟ್ಟಿದೆ. ಮಳೆ ಬಂದರೆ ನೀರು ಸೋರುತ್ತದೆ. ಕುರ್ಚಿಗಳು ಒದ್ದೆಯಾಗಿ ಓದುಗರು ನಿಂತು ಇಲ್ಲವೇ ಬೇರೆಡೆ ಕುಳಿತು ಓದುವಂತಾಗಿದೆ.
ವ್ಯವಸ್ಥಿತ ರ್ಯಾಕ್‌ಗಳಿಲ್ಲ: ಪುಸ್ತಕ ಇಡಲು ರ್ಯಾಕ್‌ಗಳಿಲ್ಲ. ಹೀಗಾಗಿ ಯಾವ ಪುಸ್ತಕಗಳಿವೆ ಎಂಬುದು ಓದುಗರಿಗೆ ಗೊತ್ತಾಗುತ್ತಿಲ್ಲ. ಪುಸ್ತಕಗಳನ್ನೆಲ್ಲ ಟ್ರಿಜೋರಿಯಲ್ಲಿಇಡಲಾಗಿದ್ದು, ಓದುಗರಿಗೆ ಪುಸ್ತಕಗಳಿಲ್ಲ ಎಂದು ನಿರಾಸೆಯಾಗುತ್ತಿದೆ. ಗ್ರಂಥಾಲಯದ ಒಳಕೋಣೆ
ಅವ್ಯವಸ್ಥೆಯಿಂದ ಕೂಡಿದ್ದು, ಮುರುಕಲು ಕುರ್ಚಿ, ನಿರುಪಯುಕ್ತ ವಸ್ತುಗಳಿವೆ. ಕೋಣೆಯಲ್ಲಿ ಹೆಗ್ಗಣ ಮಣ್ಣು ಕೆದರುತ್ತಿದ್ದು, ಜ್ಞಾನ ಭಂಡಾರದಲ್ಲಿ ಮಣ್ಣಿನ ಗುಂಪೆಗಳಿವೆ.
ಗ್ರಂಥಾಲಯದಲ್ಲಿ ಅನೇಕ ವರ್ಷದಿಂದ ಬೆಳಕಿನ ವ್ಯವಸ್ಥೆಯೇ ಇಲ್ಲ. ಪರಸಿ ನೆಲಹಾಸು ಮಾಡಿಸುವಂತೆ ಮೇಲಧಿ ಕಾರಿಗಳಿಗೆ ತಿಳಿಸಲಾಗಿದೆ.
–ಗಂಗವ್ವ ಚಂದ್ರಶೇಖರ ಪೂಜಾರಿ (ಲಾಯನ್ನವರ್), ಕಲಾದಗಿ ಗ್ರಂಥಾಲಯ ಮೇಲ್ವಿಚಾರಕಿ
-ಚಂದ್ರಶೇಖರ ಆರ್.ಎಚ್.