Advertisement

ಮಳೆಗಾಲದ ಸಂಭಾವ್ಯ ಸವಾಲು ಎದುರಿಸಲು ಮೆಸ್ಕಾಂ ಇಲಾಖೆ ಸಜ್ಜು

11:37 PM May 28, 2024 | Team Udayavani |

ಮಂಗಳೂರು: ವಿದ್ಯುತ್‌ಗೆ ಸಂಬಂಧಿಸಿದಂತೆ ಮಳೆಗಾಲದ ಸಂಭಾವ್ಯ ಸವಾಲು ಗಳನ್ನು ಎದುರಿಸಲು ಮೆಸ್ಕಾಂ ಸನ್ನದ್ಧವಾಗಿದ್ದು, ಸುಗಮ ಮತ್ತು ಸುಲಲಿತ ಸೇವೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ತಿಳಿಸಿದ್ದಾರೆ.

Advertisement

ವಿದ್ಯುತ್‌ ಸಂಪರ್ಕ ಹಾಗೂ ಸರಬರಾಜು ವ್ಯವಸ್ಥೆ ನಿರ್ವಹಣೆಯಲ್ಲಿರುವ ಲೋಪ ಗಳನ್ನು ಗುರುತಿಸಿ ತ್ವರಿತವಾಗಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಮೆಸ್ಕಾಂನ ಎಲ್ಲ ಮುಖ್ಯ ಎಂಜಿನಿಯರ್‌, ಅಧೀಕ್ಷಕ ಎಂಜಿನಿಯರ್‌ಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ವಿದ್ಯುತ್‌ ಸರಬರಾಜಿಗೆ ಅಚಡಣೆಯಾಗುವ ಮತ್ತು ಅಪಾಯಕಾರಿಯಾಗಿರುವ ಮರ/ಕೊಂಬೆಗಳನ್ನು ಕತ್ತರಿಸುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ಮಳೆಗಾಲದ ತುರ್ತು ನಿರ್ವಹಣೆ ಕೆಲಸಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ವಿದ್ಯುತ್‌ ಕಂಬಗಳು, ತಂತಿಗಳು, ಪರಿವರ್ತಕಗಳು ಸೇರಿದಂತೆ ಸಲಕರಣೆಗಳನ್ನು ಮೆಸ್ಕಾಂನ ಎಲ್ಲ ವಿಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರಿಸಲಾಗಿದೆ ಎಂದು ವಿವರಿಸಿದ್ದಾರೆ.

800 ಮಂದಿಯ ಕಾರ್ಯಪಡೆ
ವಿಭಾಗವಾರು ತುರ್ತು ನಿರ್ವಹಣ ಕೆಲಸಗಳನ್ನು ನಿರ್ವಹಿ ಸಲು ಮೆಸ್ಕಾಂ ವ್ಯಾಪ್ತಿಯ 4 ಜಿಲ್ಲೆ ಗಳಿಗೆ ಒಟ್ಟು 800 ಮಂದಿಯ ಕಾರ್ಯಪಡೆ ರಚಿಸಲಾಗಿದೆ. 53 ವಾಹನಗಳನ್ನು ಹೆಚ್ಚುವರಿಯಾಗಿ ವ್ಯವಸ್ಥೆಗೊಳಿಸಲಾಗಿದೆ. ತುರ್ತು ಕಾರ್ಯಾಚರಣೆಗೆ ಸಾಕಷ್ಟು ಸಂಖ್ಯೆ ಯಲ್ಲಿ ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವಿದ್ಯುತ್‌ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ, ಸರಬರಾಜು ಮಾರ್ಗ ದಲ್ಲಿ ಯಾವುದೇ ಅಪಾಯ, ಅವಘಡಗಳಾದಲ್ಲಿ ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆಗಳನ್ನು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಇದಲ್ಲದೆ ಮೆಸ್ಕಾಂ ಸಹಾಯವಾಣಿ 1912ನ್ನು ಕೂಡ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಮುಂಗಾರು ಪೂರ್ವದ ಗಾಳಿ ಮಳೆಗೆ ಈಗಾಗಲೇ ಮೆಸ್ಕಾಂ ವ್ಯಾಪ್ತಿಯಲ್ಲಿ ವಿವಿಧೆಡೆ ವಿದ್ಯುತ್‌ ಕಂಬಗಳು, ತಂತಿಗಳು, ಪರಿವರ್ತಕಗಳು ಸೇರಿದಂತೆ ಮೆಸ್ಕಾಂನ ಆಸ್ತಿಗಳಿಗೆ ಹಾನಿ ಸಂಭವಿಸಿದ್ದು ಇವುಗಳನ್ನು ಸರಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next