Advertisement

“ಕೆರೆಗೆ ಹಾರ’ವಾದವರ ಕರುಣ ಕಥೆ!

07:50 PM Sep 01, 2019 | Sriram |

ಕೆರೆಗಳೆಂದರೆ ಮಣ್ಣು, ಕಟ್ಟೆ, ನೀರು, ಕಾಲುವೆಯಷ್ಟೇ ಅಲ್ಲ. ಅವುಗಳ ನಿರ್ಮಾಣದ ಹಿಂದೆ ಜಗತ್ತು ಕೇಳರಿಯದ, ಪುರಾಣ ಕಥೆಗಳಿವೆ, ಜನಪದರ ನಂಬಿಕೆಗಳಿವೆ. ಅನೇಕ ಮಂದಿ ಶಿಶು, ಗರ್ಭಿಣಿ, ಮುತ್ತೆದೆಯರು ಕೆರೆಕಟ್ಟೆಗೆ ಬಲಿಯಾಗಿದ್ದಾರೆ. ಕೋಲಾರದ ಮಾಲೂರಿನ ತಾವರೆಕುಂಟೆಯ ದಂಡೆಗೆ ಕಿವಿಯಿಟ್ಟರೆ ಪುಟ್ಟ ಕಂದಮ್ಮನ ಅಳುವಿನ ಸ್ವರ ಕೇಳಿಸೀತು!

Advertisement

ಪ್ರಾಥಮಿಕ ಶಾಲೆಯಲ್ಲಿ ಪಾಠ ಹೇಳುತ್ತಿದ್ದ ಮೇಷ್ಟ್ರು ಕಣ್ಣೀರು ಸುರಿಸುತ್ತ ಕನ್ನಡಕ ತೆಗೆದರೆಂದರೆ “ಕೆರೆಗೆ ಹಾರ’ ಪಾಠ ಶುರುವಾಯೆ¤ಂದು ಇಡೀ ಶಾಲೆ ಅರ್ಥ ಮಾಡಿಕೊಳ್ಳಬಹುದಿತ್ತು. “ಕಿರಿ ಸೊಸಿ ಭಾಗೀರತಿ ಕೆರೆಗಾರವಾದಳು’ ಕಥನಗೀತೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಅದನ್ನು ಕೇಳಲು ಪಾಲಕರೂ ಶಾಲೆಗೆ ಬರುತ್ತಿದ್ದ ಸಂದರ್ಭಗಳಿವೆ. ಕೆರೆ, ನೀರು ಎಂದರೆ ಏನೂ ಅರ್ಥವಾಗದ ಕಾಲಕ್ಕೆ, ಮೇಷ್ಟ್ರ ಕಣ್ಣೀರಿನ ಜೊತೆ ಮಕ್ಕಳು ಹನಿಗೂಡಿಸುತ್ತಿದ್ದರು. ಊರಿನ ಒಳಿತಿಗಾಗಿ ಕೆರೆಗೆ ಬಲಿಯಾದ ಭಾಗೀರತಿಗೆ ಇದೇ ಶಾಲೆಯಿಂದ ಶ್ರದ್ಧಾಂಜಲಿ ಸಲ್ಲುತ್ತಿತ್ತು. “ಸಾವಿರ ವರಹ ಕೊಟ್ಟರೂ ಸಿಗಲಾರದ ಸತಿ ನೀನು, ಮುತ್ತಿನೋಲೆ ಇಟ್ಟುಗೊಳ್ಳೋ ಮುತ್ತೆçದೆ ಎಲ್ಲಿಗೋದೆ?’ ಎನ್ನುತ್ತಾ, ಮಾದೇವರಾಯ ಸತಿಯೊಡನೆ ಸಹಗಮನ ನಡೆಸುವ ಕಥಾ ಘಟ್ಟದವರೆಗೂ ಈಗಷ್ಟೇ ಘಟನೆ ನಡೆಯಿತೇನೋ ಎಂಬಂತೆ ಮೈ ನಡುಗುತ್ತಿತ್ತು.

ಜನಪದ ಕಥನ ಗೀತೆಯ ಭಾಗೀರತಿ, ಕೆಂಚಮ್ಮ, ಹೊನ್ನಮ್ಮರು ಪ್ರಾದೇಶಿಕ ವಿಶೇಷವಾಗಿ ಧಾರವಾಡ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ಹಲವೆಡೆ ಕೆರೆಗಳಲ್ಲಿ ಕಾಣಿಸುತ್ತಾರೆ. ಧಾರವಾಡದಿಂದ ಏಳು ಮೈಲು ದೂರದ ಕಲ್ಯಾಣಪುರದಲ್ಲಿ ಚಾಲುಕ್ಯ ಸೋಮೇಶ್ವರನ ಕಾಲದ ಘಟನೆ “ಕೆರೆಗೆ ಹಾರ’ ಜನಪದ ಹಾಡಾಗಿದೆ ಎಂದು ವಿದ್ವಾಂಸ ದೇವೇಂದ್ರಕುಮಾರ ಹಕಾರಿ ಹೇಳಿದ್ದರು. ಕ್ರಿ.ಶ. 1068- 69ರ ಸುಮಾರು ಜೈನ ಅರಸು ಮುಗದರಾಯನ ಸಮಯದಲ್ಲಿ ಭೀಕರ ಬರ ಬಂತು. ಕೆರೆ ಒಣಗಿ ಕುಡಿಯುವ ನೀರಿಗೆ ಸಮಸ್ಯೆಯಾಯ್ತು. ಅರಸು, ಗ್ರಾಮದೇವತೆ ಪೂಜೆ ಸಲ್ಲಿಸಿ ಪ್ರಸಾದ ಕೇಳಿದರು. ಗುಡಿ ಕಟ್ಟಿಸಿ ಹಿರಿ ಸೊಸೆಯನ್ನು ಬಲಿ ಕೊಡಲು ಸ್ವಪ್ನದಲ್ಲಿ ಸೂಚನೆಯಾಯ್ತು. ಅದರಂತೆ ಮುಗದರಾಯ ಕೆರೆಯಲ್ಲಿ ಗ್ರಾಮ ದೇವಿಗೆ ಗುಡಿ ಕಟ್ಟಿಸಿದನು. ಹಿರಿ ಸೊಸೆ ಹೊನ್ನಮ್ಮನನ್ನು ಕರೆದುಕೊಂಡು ಕೆರೆಗೆ ಹೋಗಿ, ಪೂಜೆ ಸಲ್ಲಿಸಿ, ಊಟ ಮಾಡಿ, ದಂಡೆಗೆ ಮರಳಿದರು. ಬೆಳ್ಳಿಯ ಬಟ್ಟಲು ಗುಡಿಯಲ್ಲಿ ಮರೆತು ಅದನ್ನು ತರಲು ಸೊಸೆಗೆ ಹೇಳಿದನು. ಹೊನ್ನಮ್ಮ, ಕೆರೆಯ ಗುಡಿಯೊಳಗೆ ಹೋಗುತ್ತಿದ್ದಂತೆ ಮೋಡ ಕವಿದು ಗುಡುಗು ಸಿಡಿಲಿನ ಭಾರೀ ಮಳೆಯಿಂದ ಕ್ಷಣದಲ್ಲಿ ಕೆರೆ ತುಂಬಿತು. ಹೊನ್ನಮ್ಮ ಮುಳುಗಿ ಸಾವನ್ನಪ್ಪಿದಳು. ಧಾರವಾಡ ಮುಗದ ಕೆರೆಯ ಐತಿಹ್ಯವಿದು.

ಕೆಂಚಮ್ಮ ಶಕ್ತಿದೇವತೆಯಾಗಿದ್ದು…
“ಆ ಕಡೆ ಕೋಡಮಗೆ ಈ ಕಡೆ ಕಿಟ್ಟದಳ್ಳಿ ಮಾಸೂರ ಎಡಕೆ ಮುಗುದಾವೆ’ ಹಾಡಿನ ಸಾಲು (ಸಂ. ಬಳ್ಳೇಕೆರೆ ಹನುಮಂತಪ್ಪ) ಶಿವಮೊಗ್ಗ ಜಿಲ್ಲೆಯ ಅಂಚಿನ ಇಂದಿನ ಹಾವೇರಿ ಜಿಲ್ಲೆಯ ಮದಗ- ಮಾಸೂರು ಕೆರೆಗೆ ಕರೆದೊಯ್ಯುತ್ತದೆ. ಹಿರೇಕೆರೂರು ತಾಲೂಕಿನ ರಟ್ಟಿàಹಳ್ಳಿ ಪುಟ್ಟನಗೌಡನ ಮಗಳಾದ ಕೆಂಚವ್ವ, ಮಾಸೂರಿನ ಮಲ್ಲನಗೌಡನ ಸೊಸೆಯಾಗಿ ಈ ಕೆರೆಗೆ ಹಾರವಾಗುತ್ತಾಳೆ. ತುಂಗಭದ್ರೆಯ ಉಪನದಿಯಾದ ಕುಮಧ್ವತಿ ಜಲಾನಯನದ ತುರಬಿ ಗುಡ್ಡ ಹಾಗೂ ಗೋವಿನಗುಡ್ಡಕ್ಕೆ ನಡುವೆ ನಿರ್ಮಿಸಿದ ವಿಶಾಲ ಕೆರೆಯಿದ್ದು ಕೆರೆದಂಡೆಯಲ್ಲಿ ಶರಣೆ ಕೆಂಚವ್ವನ ಗುಡಿಯಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಿಂದ 20 ಕಿಲೋಮೀಟರ್‌ ದೂರದ ಮದಗದಲ್ಲಿಯೂ ವಿಶಾಲ ಕೆರೆಯಿದೆ. ಸುಮಾರು 500 ವರ್ಷಗಳ ಪುರಾತನ ಕೆರೆಗೆ ಕೆಂಚಮ್ಮ ಶಕ್ತಿದೇವತೆಯಾಗಿದ್ದಾಳೆ. ಕೆರೆ ಪದೇ ಪದೆ ಒಡೆಯುತ್ತಿದ್ದಾಗ ಮುತ್ತೆçದೆ ಕೆಂಚಮ್ಮನ ಬಲಿಯಾಯಿತೆಂಬ ನಂಬಿಕೆಯಿದೆ.

ಒಂದೆಡೆ ಹಿರಿ ಸೊಸೆ, ಇನ್ನೊಂದೆಡೆ ಕಿರಿ ಸೊಸೆ, ಮತ್ತೂಂದೆಡೆ ಗರ್ಭಿಣಿ, ಬಾಣಂತಿಯರ ಜೀವ ಬಲಿಯನ್ನು ಕೆರೆಗಳಲ್ಲಿ ಕೇಳುತ್ತೇವೆ. ಕೋಲಾರದ ಮಾಲೂರಿನ ಟೇಕಲ್‌ ಸನಿಹದಲ್ಲಿ “ಹೊನ್ನಮ್ಮ- ಚೆನ್ನಮ್ಮ’ ಕೆರೆಯಿದೆ. ಊರಿನ ಸಲುವಾಗಿ ತಿಮ್ಮ ನಾಯಕ ಕೆರೆ ಕಟ್ಟಿಸಿದವರು. ಕೆರೆ ಕಟ್ಟಿ ಮುಗಿದ ರಾತ್ರಿ, ಜೋರು ಮಳೆ ಬಂದು ಕಟ್ಟೆ ಒಡೆದು ನಾಶವಾಗುತ್ತದೆ. ಹಲವು ಸಾರಿ ಕೆರೆಯನ್ನು ನಿರ್ಮಿಸಿದರೂ ಪುನಃ ಒಡೆದು ಹೋಗುತ್ತದೆ. ಶಾಸ್ತ್ರ ಕೇಳಿದಾಗ, ಹೆಣ್ಣು ಮಕ್ಕಳ ಬಲಿ ನೀಡುವಂತೆ ಸೂಚನೆ ದೊರೆಯುತ್ತದೆ. ತನ್ನ ಮನೆಯ ಇಬ್ಬರು ಹೆಣ್ಣು ಮಕ್ಕಳಾದ ಹೊನ್ನಮ್ಮ, ಚೆನ್ನಮ್ಮರನ್ನು ತಿಮ್ಮನಾಯಕರು ಬಲಿ ನೀಡುತ್ತಾರೆ. ಹೆಣ್ಣು ಮಕ್ಕಳ ತ್ಯಾಗ, ಸತ್ಯದಿಂದಲೇ ಕೆರೆ ಒಡೆಯದೇ ನಿಂತಿತೆಂಬ ಮಾತು ಜನಪದರಲ್ಲಿದೆ.

Advertisement

ದೇವರು ಮುನಿದಿದ್ದಾನೆ
ಪೋರ್ಚುಗೀಸ್‌ ಪ್ರವಾಸಿ ಡೂಮಿಂಗೂಸ್‌ ಪ್ಯಾಸ್‌ (ಸುಮಾರು ಕ್ರಿ.ಶ. 1520- 22) ವಿಜಯನಗರ ಸಾಮ್ರಾಜ್ಯ ವೀಕ್ಷಣೆಗೆ ಬರುತ್ತಾನೆ. ವಿಜಯನಗರ ಪಟ್ಟಣದ ಭಾಗವಾಗಿದ್ದ ಹೊಸಪೇಟೆಯಲ್ಲಿ ಕೃಷ್ಣದೇವರಾಯನು ನಿರ್ಮಿಸುತ್ತಿದ್ದ “ರಾಯರ ಕೆರೆ’ ವೀಕ್ಷಿಸುತ್ತಾನೆ. ಎರಡು ಗುಡ್ಡದ ನಡುವಿನ ಕಣಿವೆಯಲ್ಲಿ ಕೆರೆ ನಿರ್ಮಿಸುತ್ತಿರುವುದು, ಮೂರು ರಹದಾರಿಗಳಿಗಿಂತ ಅಧಿಕ ದೂರವಿರುವ ಕೊಳವೆಗಳ ಮೂಲಕ ನೀರನ್ನು ತೋಟ, ಭತ್ತದ ಗದ್ದೆಗಳಿಗೆ ಒದಗಿಸುವ ಯೋಜನೆಯಿದು. ಕೆರೆ ನಿರ್ಮಾಣಕ್ಕೆ ಗುಡ್ಡ ಒಡೆಯಲು ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಜನ ಕೆಲಸ ಮಾಡುತ್ತಿದ್ದರಂತೆ! ಅವರು ಇರುವೆಗಳಂತೆ ಕಾಣುತ್ತಿದ್ದು ಓಡಾಡುವ ನೆಲ ಕಾಣಿಸುತ್ತಿಲ್ಲವೆನ್ನುತ್ತಾನೆ. ಕೆರೆ ಮೂರು ಸಲ ಒಡೆಯಿತು. ದೇವರ ವಿಗ್ರಹ ಕೋಪಗೊಂಡಿದೆ, ಮನುಷ್ಯರ, ಕುದುರೆಗಳ ಹಾಗೂ ಎಮ್ಮೆಗಳ ರಕ್ತ ಕೊಡಬೇಕೆಂದು ಜ್ಯೋತಿಷಿಗಳು ಹೇಳಿದರು. ರಾಜ ತಕ್ಷಣ ಮರಣಕ್ಕೆ ಅರ್ಹರಾದ ಎಲ್ಲ ಪುರುಷ ಕೈದಿಗಳನ್ನು ಕರೆತರಲು ಹೇಳಿದನು. ಗುಡಿಯ ಬಾಗಿಲಿನಲ್ಲಿ 60 ಮನುಷ್ಯರ, ಅನೇಕ ಕುದುರೆ, ಎಮ್ಮೆಗಳ ತಲೆ ಕತ್ತರಿಸಲಾಯ್ತು, ನಂತರ ಕೆರೆ ನಿರ್ಮಾಣದ ಕೆಲಸ ಮುಗಿಯುತ್ತದೆ.

ಹರಿಯುವ ನೀರಿಗೆ ಅಡ್ಡಕಟ್ಟು ಹಾಕುವುದು, ಭೂಮಿ ಅಗೆದು ನೀರೆತ್ತುವುದು, ಪ್ರಕೃತಿಗೆ ವಿರುದ್ಧದ ಕ್ರಿಯೆಗಳೆಂದು ಗುರುತಿಸಲಾಗಿದೆ. ಇಡೀ ಪ್ರಪಂಚ ಯಾವತ್ತೂ ಪೂರ್ಣತ್ವ, ದೈವತ್ವ, ಹೆಣ್ತನ, ತಾಯ್ತನ, ಫ‌ಲವಂತಿಕೆಯ ದೇವತೆಯಾಗಿ ನೀರನ್ನು ನಂಬಿದೆ. ಕೆರೆಕಟ್ಟೆಯಲ್ಲಿ ನೀರಿಲ್ಲದಾಗ ಗಂಗೆಯನ್ನು ಒಲಿಸಿಕೊಳ್ಳಲು ದೇಶ ವಿದೇಶದ ಬಹುತೇಕ ಕಡೆ ಹೆಣ್ಣಿನ ಬಲಿ ನಡೆದಿದೆ. “ಮಗ ಸತ್ರೆ ಮನೆಯಾಳು, ಹೆಣ್ಣು ಸತ್ತರೆ ಇನ್ನೊಂದು ತರಬಹುದೆಂಬ’ ಯೋಚನೆಯೂ ಇದಕ್ಕೆ ಕಾರಣವೆಂದು ಊಹಿಸಲಾಗಿದೆ. ಪ್ರಕೃತಿಯ ಪಂಚಭೂತಗಳ ವಿದ್ಯಮಾನಗಳು ಸಂಕಷ್ಟ ತಂದೊಡ್ಡಿದಾಗ ಕಾಲದ ನಂಬಿಕೆಗಳಲ್ಲಿ ಆಚರಣೆ ಘಟಿಸಿದೆ. ಕೆರೆಗಳೆಂದರೆ ಮಣ್ಣು, ಕಟ್ಟೆ, ನೀರು, ಕಾಲುವೆಯಷ್ಟೇ ಅಲ್ಲ. ಜಗತ್ತು ಅರಿಯಬೇಕಾದ ಹತ್ತು ಹಲವು ನಂಬಿಕೆಗಳ ಜಲಪುರಾಣವಿದೆ. ಸೊಸೆ, ಮಕ್ಕಳ ಬಲಿಯಲ್ಲಿ, ಕಟ್ಟಿದ ಎಷ್ಟೋ ಕೆರೆಗಳು ನಿರ್ಲಕ್ಷ್ಯಕ್ಕೆ ಬಲಿಯಾಗಿವೆ. ದಾರುಣ ಐತಿಹ್ಯಗಳಿಗೂ ಅವಸಾನ ಯೋಗ ಒದಗಿದೆ.

ಮಗು ಮಲಗಿರುವ ಕೆರೆದಂಡೆ
“ಮಗು ಎದ್ದು ಬಿಡ್ತದೇ, ನಿಧಾನವಾಗಿ ಗಾಡಿ ವಡ್ಯಣ್ಣೋ’ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ತಾವರೆ ಕುಂಟೆಯ ರಸ್ತೆಯಲ್ಲಿ ಎತ್ತಿನ ಗಾಡಿ ಹೊಡೆಯುವ ಹಿರಿಯರು ಮಾತಾಡುತ್ತಾರೆ. ಕರೆದಂಡೆಯ ಒಳಗಡೆ ಶಿಶು ಮಲಗಿದೆಯೆಂಬ ನಂಬಿಕೆ ಇವರದು. ರಾಜ ಕಟ್ಟಿಸಿದ ಈ ಕೆರೆಯಲ್ಲಿ ನೀರು ನಿಲ್ಲುತ್ತಿರಲಿಲ್ಲ. ಕೆರೆಯ ಕಟ್ಟು ಒಡೆದು ಹೋಗುತ್ತಿತ್ತು. ಬಲಿ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆಂದು ಹಿರಿಯರು ಹೇಳಿದರು. ಯಾರೂ ಬಲಿಯಾಗಲು ಒಪ್ಪದಿದ್ದಾಗ ತುಂಬು ಗರ್ಭಿಣಿಯಾದ ರಾಜನ ಸೊಸೆಯೇ, ಜೀವತ್ಯಾಗಕ್ಕೆ ಮುಂದಾದಳು. ಬಾಣಂತನಕ್ಕೆ ಅಗತ್ಯವಾದ ಸಕಲ ವಸ್ತುಗಳನ್ನು ಕೆರೆಕಟ್ಟೆಯಲ್ಲಿ ಇಟ್ಟು ಬಲಿ ನೀಡಲಾಯ್ತು. ಅವಳು ದೇವತೆಯಾಗಿ ಕೆರೆಯಲ್ಲಿ ನೆಲೆಸಿದಳಂತೆ! ದಂಡೆಯಲ್ಲಿ ಎತ್ತಿನ ಗಾಡಿ ಹೊಡೆಯುವಾಗ ದಂಡೆಯ ಒಳಗಡೆ ಮಲಗಿದ ಶಿಶುವಿಗೆ ಎಚ್ಚರಾಗದಂತೆ ನಿಧಾನವಾಗಿ ಸಾಗಬೇಕೆಂಬ ಹಿರಿಯರ ಮಾತು ಈ ಹಿನ್ನೆಲೆಯಲ್ಲಿದೆ.

– ಶಿವಾನಂದ ಕಳವೆ

ಮುಂದಿನ ಭಾಗ, ಕರುನಾಡಿನ ಕೆರೆ ಯಾತ್ರೆ- 3. ಶಾಸನಗಳ ಕಣ್ಣಲ್ಲಿ ಕೆರೆ ಪರಂಪರೆ

Advertisement

Udayavani is now on Telegram. Click here to join our channel and stay updated with the latest news.

Next