Advertisement

ಅರಿವಿನ ಕಿಡಿ ಹಚ್ಚಿದ ಕರುಣಾಮಯಿ ಗುರು

03:08 PM Oct 28, 2020 | Karthik A |

ಬದುಕು ಒಂದು ರೀತಿಯಲ್ಲಿ ಚಲಿಸುವ ಬಂಡಿ ಇದ್ದಂತೆ. ಬಂಡಿಗೆ ಚ‌ಕ್ರಗಳೂ ಹೇಗೆ ಮುಖ್ಯವೋ ಹಾಗೇ ಒಬ್ಬ ವ್ಯಕ್ತಿಯ ಬದುಕನ್ನು ನಿರ್ಮಿಸುವ ಕಾಯಕದಲ್ಲಿ ಗುರುವೂ ಅಷ್ಟೇ ಮುಖ್ಯ.

Advertisement

ಸಾಮಾನ್ಯವಾಗಿ ಮುಖ ಮತ್ತು ಕೈಗಳನ್ನು ನೋಡಿ ಭವಿಷ್ಯ ನುಡಿದವರನ್ನು ಹಲವಾರು ಮಠ-ಮಾನ್ಯಗ‌ಳಲ್ಲಿ ನಾವು, ನೀವು ಕಾಣುವುದು ಸಹಜ. ಆದರೆ ವಿದ್ಯಾ ಮಂದಿರದಲ್ಲಿ ಶಿಷ್ಯರ ಮನಸ್ಸಿನ ಅಂತರಾಳದಲ್ಲಿ ಇಣುಕಿ ನೋಡಿ ಭವಿಷ್ಯ ನುಡಿಯುವ ಏಕೈಕ ವ್ಯಕ್ತಿ ಎಂದರೆ ಗುರು.

ನಾವೆಯನ್ನು ನಡೆಸಲು ನಾವಿಕ ಹೇಗೆ ಅತೀ ಅವಶ್ಯವೋ ಹಾಗೆಯೇ ಶಿಷ್ಯನ ಬದುಕು ನಿರ್ಮಿಸಲೂ ಗುರುವು ಅತೀ ಮುಖ್ಯ. ಹರ ಮುನಿದರೂ ಗುರು ಕಾಯುವ ಎಂಬ ವಾಣಿಯನ್ನು ನಾವು ನೀವು ಎಲ್ಲೋ ಕೇಳಿದ್ದುಂಟು. ನಮ್ಮ ತಪ್ಪುಗಳನ್ನು ಶಿವ (ಹರ) ಒಂದು ಕ್ಷಣ ಮನ್ನಿಸಲಾರ ಆದರೆ ಗುರು ಎಂದೆಂದಿಗೂ ಮನ್ನಿಸುವಂತಹ ಮಹಾ ಕರುಣಾಮಯಿ ಎಂದು ಹೇಳಬಹುದು.

ಮಕ್ಕಳ ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ಬೀಜವನ್ನು ತುತ್ತಿನ ಮುಖಾಂತರ ಉಣ ಬಡಿಸುವವನೆ ಗುರು ಆದುದರಿಂದ ಈ ನಾಡಿನಲ್ಲಿ ಗುರುವನ್ನು ಮಹಾದೇವ ಎಂದೂ ಕರೆಯುವುದುಂಟು.

“ಅರಿವೇ ಗುರು’ ಎಂಬ ಮಾತನ್ನ ಹಿಂದಿನಿಂದಲೂ ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆ ಮಾತಿನ ಮೂಲ ತಿರುಳು ಮನುಷ್ಯನ ಬದುಕಲ್ಲಿ ಅರಿವಿನ ಕಿಡಿ ಹಚ್ಚಿ ಬೋಧನೆ ಮಾಡುತ್ತಿರುವ ಏಕೈಕ ಕರುಣಾಮಯಿ ಅಂದರೆ ಗುರು. ಪ್ರತಿಯೊಬ್ಬನ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಮಾರ್ಗದರ್ಶನ ಇದ್ದೆ ಇರುತ್ತದೆ ಎಂಬುದಕ್ಕೆ ನನ್ನ ಒಂದು ಉದಾಹರಣೆ ಸಾಕ್ಷಿ.

Advertisement

ಈ ಪ್ರಪಂಚದಲ್ಲಿ ವಿದ್ಯೆ ಕಲಿಸಿದ ಎಲ್ಲರನ್ನೂ ನಾವು ಗುರು ಎಂದೂ ಅಂದುಕೊಂಡಿದ್ದೇವೆ. ಆದರೆ ಅವರಲ್ಲೂ ಒಬ್ಬ ಆದರ್ಶ ಗುರು ಎಂದು ಆಯ್ಕೆ ಮಾಡಿ ಅವರನ್ನು ನಮ್ಮ ಜೀವನದ ರುವಾರಿ ಎಂದು ಸದಾ ಸ್ಮರಿಸುತ್ತೇವೆ ಅಲ್ಲವೇ…? ಅಂತವರಲ್ಲಿ ನನ್ನ ಜೀವನದ ಪುಟವನ್ನ ಓದಿದವರು ನಾನು ಕಲಿತ ಕಲಘಟಗಿಯ ಗುಡ್‌ ನ್ಯೂಸ್‌ ಮಹಾವಿದ್ಯಾಲಯದ ರಾಜ್ಯಶಾಸ್ತ್ರದ ಗುರು ಗಳು ಅವರ ಹೆಸರಿನಲ್ಲಿಯೇ ವಿದ್ಯಾರ್ಥಿಗಳು ವಿಜಯವನ್ನು ಕಂಡಿದ್ದುಂಟು. ಅವರೇ ಪ್ರೊ| ವಿಜಯ ಬೆಟಗಾರ.

ಅದೇನೋ ಗೊತ್ತಿಲ್ಲ, ಅವರ ಪರಿಚಯ ನನ್ನ ಜೀವನದ ಅದ್ಭುತ ದಿನಗಳೆಂದು ಹೇಳಬಹುದು. 2014ರಲ್ಲಿ ಅದೂ 3 ವರ್ಷಗಳ ಅಂತರದ ಬಳಿಕ ಮತ್ತೆ ವಿದ್ಯಾರ್ಜನೆಗಾಗಿ ನಾನು ಗುಡ್‌ನ್ಯೂಸ್‌‌ ಮಹಾವಿದ್ಯಾಲಯಕ್ಕೆ ಮೊದಲ ಪಾದಾರ್ಪಣೆ ಮಾಡಿದ ದಿನವದು. ಎಂದೂ ನಾನು ಕಾಣದ ವಿದ್ಯಾಲಯ ಹಿಂದೆಂದೂ ಕಾಣದ ಗುರುಗಳು. ಹೊಸ ಪರಿಚಯ, ಹೊಸ ಅನುಭವ. ಗುರು ಎಂದರೆ ಸಾಕು ಮಾರು ದೂರ ಇರುತ್ತಿದ್ದ ನನ್ನ ಮನಸ್ಸಿಗೆ ಹತ್ತಿರ ಆದವರು ವಿಜಯ ಬೆಟಗಾರ ಗುರುಗಳು.

ಅಂದೊಂದು ದಿನ ಡಿಗ್ರಿ ಮೊದಲ ವರ್ಷದಲ್ಲಿ ಮಾಡಿದ ಮೊದಲ ಪ್ರೊಜೆಕ್ಟ್ ವರ್ಕ್‌ ತೋರಿಸಲೆಂದು ಅವರ ಬಳಿಗೆ ತೆರಳಿದ್ದು ಇನ್ನೂ ನನಗೆ ನೆನಪಿದೆ. ಸಾಮಾನ್ಯವಾಗಿ ಮುಖ ಮತ್ತು ಕೈಗಳನ್ನ ನೋಡಿ ಭವಿಷ್ಯ ನುಡಿದವರನ್ನು ಹಲವಾರು ಮಠ-ಮಾನ್ಯಗ‌ಳಲ್ಲಿ ನಾವು ನೀವು ಕಾಣುವುದು ಸಹಜ. ಆದರೆ ವಿದ್ಯಾ ಮಂದಿರದಲ್ಲಿ ಶಿಷ್ಯರ ಮನಸ್ಸಿನ ಅಂತರಾಳದಲ್ಲಿ ಇಣುಕಿ ನೋಡಿ ಭವಿಷ್ಯವನ್ನು ನುಡಿಯುವ ಏಕೈಕ ವ್ಯಕ್ತಿ ಎಂದರೆ ಗುರು. ಅವರ ಮಾರ್ಗದರ್ಶನವೇ ನನ್ನ ಪತ್ರಿಕೋದ್ಯಮಕ್ಕೆ ದಾರಿ ಮಾಡಿಕೊಟ್ಟಿತು.

ಈ ಎಲ್ಲ ವಿಚಾರದನ್ವಯ ನನ್ನ ಜೀವನಕ್ಕೆ ಆದರ್ಶವನ್ನು ಬೋಧಿಸಿದ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು. ಗೆಳೆಯರೇ ಸ್ವಾರ್ಥತೆಯನ್ನು ಹೊಂದಿರದ ಏಕೈಕ ವ್ಯಕ್ತಿ ಗುರು. ಆದುದರಿಂದ ನಿಮ್ಮ ಜೀವನದಲ್ಲಿ ಬಂದ ಅದೆಷ್ಟೋ ಗುರುಗಳಲ್ಲಿ ಆದರ್ಶ ಗುರುಗಳನ್ನು ಒಂದು ದಿನ ಸ್ಮರಿಸಲು ಮುಂದಾಗಿ ಮುಂಬರುವ ದಿನಗಳಲ್ಲಿ ನೀವು ಮತ್ತೂಬ್ಬರಿಗೆ ಗುರುವಾಗಿ ಅವರನ್ನು ಬದಲಾವಣೆಯ ಹಾದಿ ಹೋಗಲು ಮಾರ್ಗದರ್ಶನ ಮಾಡಿ.

 ವಿರೇಶ್‌ ಹಾರೊಗೇರಿ, ಧಾರವಾಡ ವಿಶ್ವವಿದ್ಯಾನಿಲಯ

Advertisement

Udayavani is now on Telegram. Click here to join our channel and stay updated with the latest news.

Next